ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಎಂ. ಎನ್. ರಾಜೇಂದ್ರ ಕುಮಾರ್ ಅವರು ಸತತ 8ನೇ ಬಾರಿಗೆ ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ. ಬುಧವಾರ ಜರಗಿದ ಬ್ಯಾಂಕಿನ ಆಡಳಿತ ಮಂಡಳಿ ಸಭೆಯಲ್ಲಿ ಹಿರಿಯ ನಿರ್ದೇಶಕ ಬಿ. ನಿರಂಜನ್ ಅವರ ಅಧ್ಯಕ್ಷತೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ವಿನಯ ಕುಮಾರ್ ಸೂರಿಂಜೆ ಅವರು ಉಪಾಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದಾರೆ.
ಬ್ಯಾಂಕಿನ ಅಧ್ಯಕ್ಷರಾಗಿ 1994ರಲ್ಲಿ ಪ್ರಥಮ ಬಾರಿಗೆ ಆಯ್ಕೆಗೊಂಡ ಎಂ. ಎನ್. ರಾಜೇಂದ್ರ ಕುಮಾರ್ ಇದುವರೆಗೆ ನಿರಂತರವಾಗಿ 17 ವರ್ಷಗಳ ಕಾಲ ಈ ಬ್ಯಾಂಕನ್ನು ಸಮರ್ಥ ರೀತಿಯಲ್ಲಿ ಮುನ್ನಡೆಸುತ್ತಿದ್ದು, ಇವರ ಅಧಿಕಾರ ಅವಧಿಯಲ್ಲಿ ಬ್ಯಾಂಕು ಗಣನೀಯ ಪ್ರಗತಿ ಕಂಡಿದೆ. ದಿವಂಗತ ಮೊಳಹಳ್ಳಿ ಶಿವರಾಯರ ಅನಂತರ ಈ ಬ್ಯಾಂಕನ್ನು ಸುದೀರ್ಘ ಕಾಲ ಮುನ್ನಡೆಸಿದ ಹೆಗ್ಗಳಿಕೆಗೂ ರಾಜೇಂದ್ರ ಕುಮಾರ್ ಇವರು ಪಾತ್ರರಾಗಿದ್ದಾರೆ.
1994ರಲ್ಲಿ ಇವರು ಬ್ಯಾಂಕಿನ ಅಧಿಕಾರ ವಹಿಸಿಕೊಂಡಾಗ ಬ್ಯಾಂಕಿನ ಒಟ್ಟು ಠೇವಣಾತಿ ರೂ. 64.00 ಕೋಟಿ, ಹೊರಬಾಕಿ ಸಾಲ ರೂ. 46.00 ಕೋಟಿ, ಲಾಭ ರೂ. 40.00 ಲಕ್ಷ ಮಾತ್ರವಿತ್ತು. ಆದರೆ ಇಂದು ಬ್ಯಾಂಕಿನ ಠೇವಣಾತಿ ರೂ. 1,092.00 ಕೋಟಿ, ಒಟ್ಟು 1,000.00 ಕೋಟಿ ಸಾಲ ವಿತರಿಸಿ, ಬ್ಯಾಂಕ್ ಗಳಿಸಿದ ಲಾಭ ರೂ. 11.70 ಕೋಟಿ. ಬ್ಯಾಂಕಿನ ದುಡಿಯುವ ಬಂಡವಾಳ ರೂ. 1,458.46 ಕೋಟಿ ಇದೆ. ಬ್ಯಾಂಕು ಈಗ ಒಟ್ಟು 54 ಶಾಖೆಗಳನ್ನು ಹೊಂದಿದೆ.
ಎಸ್‌ಸಿಡಿಸಿಸಿ ಬ್ಯಾಂಕ್ ಉತ್ಕೃಷ್ಟ ಸಾಧನೆಗಾಗಿ ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ, ಸ್ವಸಹಾಯ ಗುಂಪುಗಳ ಕಾರ್ಯ ನಿರ್ವಹಣೆಗಾಗಿ ನಬಾರ್ಡ್ ರಾಜ್ಯ ಮಟ್ಟದ ಪ್ರಶಸ್ತಿಗಳು ಅನುಕ್ರಮವಾಗಿ 16 ಹಾಗೂ 10ನೇ ಬಾರಿ ಈ ಬ್ಯಾಂಕಿಗೆ ಲಭಿಸಿವೆ. ಅಲ್ಲದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನ ನಿರ್ದೇಶಕರಾಗಿರುವ ರಾಜೇಂದ್ರ ಕುಮಾರ್ ಅವರು ಈ ಬ್ಯಾಂಕನ್ನು 2005ರಿಂದ 2010ರ ವರೆಗೆ ಮುನ್ನಡೆಸಿ ಬ್ಯಾಂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಬೆಂಗಳೂರು, ಮಂಗಳೂರು ಟಿ.ಎ.ಪಿ.ಸಿ.ಎಂ.ಎಸ್., ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಮೊದಲಾದ ಸಹಕಾರಿ ಸಂಸ್ಥೆಗಳಲ್ಲಿ ಇವರು ಹಾಲಿ ನಿರ್ದೇಶಕರಾಗಿದ್ದಾರೆ. ನವೋದಯ ಸೌಹಾರ್ದ ಸಹಕಾರಿ ನಿಯಮಿತ ಈ ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.