ಮಂಗಳೂರು: ಬಿಜೆಪಿ ರಾಷ್ಟ್ರಾಧ್ಯಕ್ಷರು ಕರಾವಳಿಗೆ ಭೇಟಿ ನೀಡುವುದು ಸಂತೋಷದ ವಿಷಯ. ಇಲ್ಲಿ ಕಾಂಗ್ರೆಸ್ ಎಷ್ಟು ಬಲಿಷ್ಟವಾಗಿದೆ ಎಂಬುದನ್ನು ಅವರೇ ಕಣ್ಣಾರೆ ನೋಡಿ ಹೋಗಲಿ ಎಂದು ಸಚಿವ ಯು.ಟಿ. ಖಾದರ್ ಅವರು ಅಮಿತ್ ಶಾ ಕರಾವಳಿ ಪ್ರವಾಸ ಕುರಿತು ವ್ಯಂಗ್ಯವಾಡಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಅಮಿತ್ ಶಾ ಕರಾವಳಿಗೆ ಬಂದು ಮತಪ್ರಚಾರ ಮಾಡಿಹೋಗಲಿ. ಆದರೆ, ಜಿಲ್ಲೆಯಲ್ಲಿ ಎಲ್ಲಾ ಧರ್ಮದವರು ಪ್ರೀತಿ, ವಿಶ್ವಾಸ, ಸಹೋದರತ್ವದಿಂದ ಬಾಳುತ್ತಿದ್ದೇವೆ. ಅದನ್ನು ಒಡೆಯುವ ಕೆಲಸ ಮಾಡದಿರಲಿ ಎಂಬುದೇ ನನ್ನ ಕಳಕಳಿಯ ಮನವಿ ಎಂದರು.
ಇಲ್ಲಿ ಯಾರು ಬರುತ್ತಾರೆ ಎನ್ನುವುದು ನಮಗೆ ಸಮಸ್ಯೆಯಲ್ಲ. ಆದರೆ ನಮ್ಮ ಬೂತ್ ಮಟ್ಡದ ಕಾರ್ಯಕರ್ತರು ನಡೆಸುವ ಪಕ್ಷದ ಬಲವರ್ಧನೆಯೇ ನಮ್ಮ ವಿಶ್ವಾಸ ಎಂದರು.
ಮಠ ಮಾನ್ಯಗಳಲ್ಲಿ ಮೂಗು ತೂರಿಸುವ ಕೆಲಸವನ್ನು ಸರ್ಕಾರ ಮಾಡುವುದಿಲ್ಲ. ಕಾಂಗ್ರೆಸ್ ಎಂದಿಗೂ ಯಾವುದೇ ಜಾತಿ, ಧರ್ಮವನ್ನು ನಾಶ ಮಾಡುವ ಕೆಲಸ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ ಎಂದು ಸಚಿವ ಖಾದರ್ ಸ್ಪಷ್ಟಪಡಿಸಿದರು.
ವಿದ್ಯಾರ್ಥಿ ಸಮುದಾಯಕ್ಕೆ ಪ್ರಯೋಜನವಾಗುವ ರೀತಿಯಲ್ಲಿ ಫೆ. 17 ರಂದು ಮಂಗಳೂರು ವಿ ವಿ ಮೈದಾನದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಐಟಿಐ, ಡಿಪ್ಲೋಮ, ಪಿಜಿ, ಯುಜಿ, ಪಿಯು ಮೊದಲಾದ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದರು.
ಈ ಯೋಜನೆಗಾಗಿ ರಾಜ್ಯ ಸರ್ಕಾರ 50 ಲಕ್ಷ ರೂ. ಅನುದಾನ ನೀಡಿದೆ. ಕಳೆದ ವರ್ಷ ತೇರ್ಗಡೆಯಾದವರಿಗೆ ಮಾತ್ರ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅವಕಾಶವಿದೆ. ಫಲಿತಾಂಶ ಎದುರು ನೋಡುತ್ತಿರುವವರಿಗೆ ಅವಕಾಶವಿಲ್ಲ.
ಉದ್ಯೋಗ ಮೇಳದಲ್ಲಿ 87 ಕಂಪನಿಗಳ 6095 ಹುದ್ದೆಗೆ ನೇಮಕಕ್ಕೆ ಅವಕಾಶವಿದೆ. ಈಗಾಗಲೇ 5685 ಮಂದಿ ಉದ್ಯೋಗ ಮೇಳಕ್ಕೆ ಹೆಸರು ನೋಂದಾಯಿಸಿದ್ದಾರೆ ಎಂದು ತಿಳಿಸಿದರು.
Click this button or press Ctrl+G to toggle between Kannada and English