ಮಂಗಳೂರು : ಮಂಗಳೂರು ನಗರಕ್ಕೆ ನಿರಂತರ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಒಂದೂವರೆ ವರ್ಷದ ಹಿಂದೆ ಪ್ರಸ್ತಾವಗೊಂಡು ನನೆಗುದಿಗೆ ಬಿದ್ದಿದ್ದ ಸಮುದ್ರ ನೀರನ್ನು ಸಂಸ್ಕರಿಸಿ ಒದಗಿಸುವ ಚಿಂತನೆ ಇದೀಗ ಮತ್ತೆ ಮರು ಜೀವ ಪಡೆದುಕೊಂಡಿದೆ.
ಸಮುದ್ರದ ನೀರು ಸಂಸ್ಕರಿಸಿ ಸಿಹಿನೀರನ್ನಾಗಿ ಪರಿವರ್ತಿಸುವ ಬಗ್ಗೆ ಅಧ್ಯಯನ ನಡೆಸಲು ಮನಪಾ ಹಾಗೂ ಅಧಿಕಾರಿಗಳನ್ನೊಳಗೊಂಡ ಸುಮಾರು 33ಕ್ಕೂ ಅಧಿಕ ಮಂದಿಯ ತಂಡವು ಈ ವ್ಯವಸ್ಥೆಯನ್ನು ಈಗಾಗಲೇ ಸ್ಥಾಪಿಸಿರುವ ಚೆನ್ನೈಗೆ ಅಧ್ಯಯನ ಪ್ರವಾಸ ಕೈಗೊಂಡಿದೆ.
ಕಡಲ ತಡಿಯ ಮಂಗಳೂರಿ ನಲ್ಲಿ ತೀರಾ ಸಾಮಾನ್ಯ ಸಮಸ್ಯೆ ಕುಡಿಯುವ ಶುದ್ಧ ನೀರಿನದ್ದೇ. ಸಮುದ್ರವನ್ನೇ ಬೆನ್ನಲ್ಲಿಟ್ಟುಕೊಂಡರೂ ನೀರಿನ ಅಭಾವಕ್ಕೆ ಪರಿಹಾರ ಕಂಡುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ತುಂಬೆಯ ವೆಂಟೆಡ್ ಡ್ಯಾಂನಲ್ಲಿ ನೀರು ಸಂಗ್ರಹ ಮಟ್ಟವನ್ನು 6 ಅಡಿಗಳಿಗೆ ಏರಿಸಲಾಗಿದೆ. ಇದರಿಂದ ಮಂಗಳೂರಿಗೆ ನೀರು ಸರಬರಾಜು ಈ ಬಾರಿ ಅಬಾಧಿತ ಎಂದು ಹೇಳಲಾಗುತ್ತಿದೆಯಾದರೂ
ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಪರ್ಯಾಯ ಪರಿಹಾರೋಪಾಯ ಕ್ರಮ ಅತ್ಯಗತ್ಯ.
ಹತ್ತಿರದಲ್ಲೇ ಇರುವ ಅರಬೀ ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸಿ ಒದಗಿ ಸುವುದೊಂದೇ ಇದಕ್ಕಿರುವ ಪರಿಹಾರ. ಈ ನಿಟ್ಟಿನಲ್ಲಿ ಇರುವ ಸಾಧಕ-ಬಾಧಕ ಗಳನ್ನು ಅಧ್ಯಯನ ನಡೆಸಲು ಪಾಲಿಕೆಯ ತಂಡ ತಮಿಳುನಾಡಿನ ರಾಜಧಾನಿಯತ್ತ ಹೊರಟು ನಿಂತಿದೆ.
ಚೆನ್ನೈಯಲ್ಲಿ ಸಮುದ್ರ ನೀರನ್ನು ಸಂಸ್ಕರಿಸುವ “ಸೀ ವಾಟರ್ ಡಿ ಸಲೈನೇಶನ್ ಪ್ಲಾಂಟ್’ ಈಗಾಗಲೇ ಕಾರ್ಯ ನಿರ್ವಹಿಸುತ್ತಿದೆ. ಚೆನ್ನೈ ನಗರಕ್ಕೆ ಇದೇ ಘಟಕ ದಿಂದ ನೀರು ಒದಗಿಸಲಾಗುತ್ತಿದ್ದು, ಮಂಗಳೂರಿ ನಲ್ಲಿಯೂ ಇದನ್ನು ಅಳವಡಿಸುವ ಸಂಬಂಧ ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಲು ಪಾಲಿಕೆಯಿಂದ ಈ ಪ್ರವಾಸ ಹಮ್ಮಿಕೊಳ್ಳಲಾಗಿದೆ.
ಮೇಯರ್ ಕವಿತಾ ಸನಿಲ್, ಮನಪಾ ಆಯುಕ್ತ ಮೊಹಮ್ಮದ್ ನಝೀರ್ ನೇತೃತ್ವದಲ್ಲಿ ಶುಕ್ರವಾರ ರಾತ್ರಿ 10.30ಕ್ಕೆ ನಾಲ್ವರು ಅಧಿಕಾರಿಗಳು, ಕಾರ್ಪೊ ರೇಟರ್‌ಗಳು, ನಾಲ್ವರು ನಾಮ ನಿರ್ದೇಶಿತ ಸದಸ್ಯರು ಸಹಿತ ಒಟ್ಟು ಸುಮಾರು 33ಕ್ಕೂ ಹೆಚ್ಚು ಮಂದಿ ಯನ್ನೊಳಗೊಂಡ ತಂಡ ಚೆನ್ನೈಗೆ ತೆರಳಲಿದೆ. ಒಟ್ಟು ಮೂರು ದಿನಗಳ ಪ್ರವಾಸ ಇದಾಗಿದ್ದು, ಫೆ. 12ರಂದು ಸಂಜೆ ತಂಡ ನಗರಕ್ಕೆ ಹಿಂದಿರುಗಲಿದೆ. ತಂಡದ ಈ ಪ್ರವಾಸದ ಖರ್ಚು ವೆಚ್ಚಗಳನ್ನು ಪಾಲಿಕೆ ಭರಿಸುತ್ತಿ¨.
ಸಮುದ್ರ ನೀರು ಸಂಸ್ಕರಿಸಿ ಮಂಗಳೂರು ನಗರಕ್ಕೆ ಒದಗಿಸುವ ಮೂಲಕ ನೀರಿನ ಸಮಸ್ಯೆಗೆ ಮುಕ್ತಿ ಹಾಡಬೇಕೆಂಬ ಪ್ರಸ್ತಾವ ಒಂದೂವರೆ ವರ್ಷದ ಹಿಂದೆಯೇ ಚರ್ಚೆಗೆ ಬಂದಿತ್ತು. ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಎ.ಬಿ. ಇಬ್ರಾಹಿಂ ಅವರು 2016ರ ಮೇ 25ರಂದು ಮಂಗಳೂರಿನ ಕೈಗಾರಿಕೆಗಳ ಪ್ರಮುಖರ ಸಭೆ ಕರೆದು ಸಮುದ್ರದ ನೀರು ಸಂಸ್ಕರಿಸಿ ಸಿಹಿ ನೀರು ಪಡೆಯುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸುವ ಬಗ್ಗೆ ಚರ್ಚಿಸಿದ್ದರು.
ಆಗ ರಾಜ್ಯ ನಗರಾಭಿವೃದ್ಧಿ ಸಚಿವರಾಗಿದ್ದ ಆರ್. ರೋಶನ್ ಬೇಗ್ ಕೂಡ ಆಸಕ್ತಿ ಪ್ರದರ್ಶಿಸಿ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳ ತಂಡ ಚೆನ್ನೈಗೆ ಭೇಟಿ ನೀಡಿ ಪರಿಶೀಲಿಸುವಂತೆ ಸಲಹೆ ನೀಡಿದ್ದರು. ಆದರೆ ಅನಂತರ ಯಾವುದೇ ಪ್ರಗತಿ ಆಗಿರಲಿಲ್ಲ. ಒಂದೂವರೆ ವರ್ಷದ ಬಳಿಕ ಈಗ ಹಿಂದಿನ ಚಿಂತನೆಗೆ ಮರುಜೀವ ದೊರಕಿದ್ದು, ಪಾಲಿಕೆ ಪ್ರಮುಖರ ಚೆನ್ನೈ ಭೇಟಿ ಮಹತ್ವದ ಹೆಜ್ಜೆಯಾಗಲಿದೆ.
Click this button or press Ctrl+G to toggle between Kannada and English