‘ಭ್ರಷ್ಟಾಚಾರ ನಿಯಂತ್ರಿಸದಿದ್ದರೆ ಜನರೇ ರೊಚ್ಚಿಗೇಳುತ್ತಾರೆ’

6:08 PM, Friday, February 9th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

putturಪುತ್ತೂರು : ಕಂದಾಯ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕದೇ ಇದ್ದರೆ, ಜನರು ರೊಚ್ಚಿಗೇಳುವ ಸಂಭವ ಇದೆ. ಇದಕ್ಕೆ ಅವಕಾಶ ನೀಡಬೇಡಿ ಎಂದು ಕಂದಾಯ ಇಲಾಖೆಗೆ ಪುತ್ತೂರು ತಾ.ಪಂ. ಮಾಸಿಕ ಕೆಡಿಪಿ ಸಭೆಯಲ್ಲಿ ಎಚ್ಚರಿಕೆ ನೀಡಲಾಯಿತು. ಪುತ್ತೂರು ತಾ.ಪಂ. ಸಭಾಂಗಣದಲ್ಲಿ ಗುರುವಾರ ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್‌ ಅಧ್ಯಕ್ಷತೆಯಲ್ಲಿ ಮಾಸಿಕ ಕೆಡಿಪಿ ಸಭೆ ನಡೆಯಿತು.

ಸ್ಥಾಯೀ ಸಮಿತಿ ಅಧ್ಯಕ್ಷ ಮುಕುಂದ ಮಾತನಾಡಿ, ಕಂದಾಯ ಇಲಾಖೆಯ ಭ್ರಷ್ಟಾಚಾರ ತಾಲೂಕಿಗೆ ಕಪ್ಪುಚುಕ್ಕೆ ಆಗಿದೆ. ಇದಕ್ಕೆ ಕಡಿವಾಣ ಹಾಕಲೇ ಬೇಕಾಗಿದೆ. ಲಂಚ ನೀಡದೇ ಇದ್ದರೆ, ಕಡತಗಳು ಮುಂದೆ ಹೋಗುವುದೇ ಇಲ್ಲ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಕೆಳ ಹಂತದ ಅಧಿಕಾರಿಯಿಂದಲೇ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರು.

94ಸಿ, 94ಸಿಸಿ ಹಕ್ಕುಪತ್ರ ನೀಡಬೇಕಾದರೆ ಇಂತಿಷ್ಟು ಹಣ ನೀಡಬೇಕು ಎಂಬ ಬೇಡಿಕೆ ಇಡಲಾಗುತ್ತಿದೆ ಎಂಬ ದೂರು ಸಾರ್ವಜನಿಕರಿಂದ ಕೇಳಿಬರುತ್ತಿದೆ. ಅಧಿಕಾರಿಗಳು ಗೌಪ್ಯವಾಗಿ ಹಣ ವಸೂಲು ಮಾಡುವುದನ್ನು ಸಾರ್ವಜನಿಕರು ನಮ್ಮ ಬಳಿ ಹೇಳಿಕೊಳ್ಳುತ್ತಿದ್ದಾರೆ. ಬಡ ವರ್ಗದವರು ಸಾಲ ಮಾಡಿ ಮನೆ ಕಟ್ಟುವ ಕನಸು ಕಂಡಿದ್ದರೆ, ಅದಕ್ಕೂ ಕಲ್ಲು ಹಾಕುವ ಪ್ರಯತ್ನ ಅಧಿಕಾರಿಗಳಿಂದ ನಡೆಯುತ್ತಿದೆ. ಹೀಗಾದರೆ ಬಡಪಾಯಿಗಳು ಜೀವನ ನಿರ್ವಹಣೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.

ಕಂದಾಯ ಇಲಾಖೆಯಲ್ಲಿ ಕಡತಗಳು ಯಾಕೆ ವಿಲೇವಾರಿ ಆಗುತ್ತಿಲ್ಲ. ಒಂದು ಕಡತವನ್ನು ತುಂಬಾ ದಿನ ಇಟ್ಟುಕೊಳ್ಳು ವುದು ಯಾಕೆ, ಇನ್ನು ಕೆಲ ಅರ್ಜಿಗಳು ತಿರಸ್ಕೃತಗೊಳ್ಳುವುದು ಯಾಕೆ ಎಂದು ಪ್ರಶ್ನಿಸಲಾಯಿತು. ಉತ್ತರಿಸಿದ ಉಪತಹಶೀಲ್ದಾರ್‌ ಶ್ರೀಧರ್‌, ಈ ಬಗ್ಗೆ ಮಾಹಿತಿ ಪಡೆದು ಬಳಿಕ ಉತ್ತರಿಸುತ್ತೇನೆ ಎಂದರು.

ಸಿಡಿಪಿಒ ಶಾಂತಿ ಹೆಗ್ಡೆ ಮಾತನಾಡಿ, ಗರ್ಭಿಣಿಯರು, ಬಾಣಂತಿಯರು ಪೌಷ್ಟಿಕ ಆಹಾರ ಸೇವನೆಗೆ ಅಂಗನವಾಡಿ ಕೇಂದ್ರಗಳಿಗೆ ಬರುತ್ತಿಲ್ಲ ಎನ್ನುವುದನ್ನು ಸಭೆ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಶಾಸಕಿ ಅಧ್ಯಕ್ಷತೆಯ ಸಭೆ ನಿರ್ಣಯ ಕೈಗೊಂಡು ಸರಕಾರಕ್ಕೆ ಕಳುಹಿಸಿಕೊಟ್ಟಿದೆ. ಈ ನಡುವೆ ಯೋಜನೆಯ ಸಮರ್ಪಕ ಜಾರಿಗೆ ಇಲಾಖೆಯಿಂದಲೂ ಮೇಲಿನಿಂದ ಮೇಲೆ ಸಭೆ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೆ ಮನೆಗೊಯ್ದು ಕೊಡಬಾರದು ಎಂದು ತಿಳಿಸಲಾಗಿದೆ ಎಂದರು.ಪ್ರಧಾನಮಂತ್ರಿ ಮಾತೃವಂದನ ಯೋಜನೆ ಜಿಲ್ಲೆಯಲ್ಲಿ ಡಿಸೆಂಬರ್‌ ಕೊನೆ ವಾರದಿಂದ ಜಾರಿಗೆ ಬಂದಿದೆ.

ಮೊದಲ ಬಾರಿಯ ಗರ್ಭಿಣಿ, ಬಾಣಂತಿ ಇದರ ಫಲಾನುಭವಿಗಳು. ಗರ್ಭಿಣಿಗೆ 1,000 ರೂ., ಬಾಣಂತಿಗೆ 2,000 ರೂ. ನೀಡಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. 200 ಮಾತೃವಂದನ ಅರ್ಜಿಗಳು ಆನ್‌ಲೈನ್‌ನಲ್ಲಿ ಫೀಡ್ ಆಗಿದ್ದು, 33 ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ ಎಂದು ಮಾಹಿತಿ ನೀಡಿದರು.

ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ಚೆನ್ನಬಸಪ್ಪ ಮಾತನಾಡಿ, 40 ಹಳೆ ಬಸ್‌ಗಳ ಓಡಾಟ ನಿಲ್ಲಿಸಿದ್ದೇವೆ. 74 ಹೊಸ ಬಸ್‌ಗಳು ಓಡಾಟ ಆರಂಭಿಸಿವೆ. ಬಸ್‌ಗಳನ್ನು ಸಮಯಕ್ಕೆ ಸರಿಯಾಗಿ ಸಂಚರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಭೆಗೆ ತಿಳಿಸಿದರು. ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಕಾರ್ಯನಿರ್ವಹಣ ಅಧಿಕಾರಿ ಜಗದೀಶ್‌ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English