ಮಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪಕ್ಷದ ವರಿಷ್ಠ ನಾಯಕರಾದ ಎಚ್.ಡಿ. ದೇವೇಗೌಡರು ಹಾಗೂ ಎಚ್.ಡಿ. ಕುಮಾರ ಸ್ವಾಮಿ ನಿರ್ಧರಿಸಿದ್ದಾರೆ ಎಂದು ರಾಜ್ಯ ಯುವಜನತಾದಳ ಅಧ್ಯಕ್ಷ, ಶಾಸಕ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಜೆಡಿಎಸ್ ಈಗಾಗಲೇ ರಾಜ್ಯದಲ್ಲಿ ಬಿಎಸ್‌ಪಿಯೊಂದಿಗೆ ಚುನಾವಣಾ ಮೈತ್ರಿ ಮಾಡಿಕೊಂಡಿದೆ. ಇದಲ್ಲದೆ ಸಿಪಿಎಂ ಮತ್ತು ಸಿಪಿಐ ಪಕ್ಷಗಳ ಜತೆಗೂ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಒಲವು ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿಯ ಜನವಿರೋಧಿ ನೀತಿಗಳಿಂದ ಜನ ಬೇಸತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಜೆಡಿಎಸ್ ಯಾರ ಜತೆಯೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವುದಾಗಿ ಈಗಾಗಲೇ ಪಕ್ಷದ ವರಿಷ್ಠ ನಾಯಕರು ಪ್ರಕಟಿಸಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಕನ್ನಡದಲ್ಲಿ ಭಾಷಣ ಆರಂಭಿಸಿ ಜನರ ಚಪ್ಪಾಳೆ ಗಿಟ್ಟಿಸಿದರು. ಆದರೆ ಮಹಾದಾಯಿ ವಿವಾದ ಬಗ್ಗೆ ಚಕಾರವೆತ್ತಲಿಲ್ಲ. ಸಭೆಯಲ್ಲಿದ್ದ ಬಿಜೆಪಿಯವರು ಕೂಡ ಪ್ರಧಾನಿಯವರಲ್ಲಿ ಆಗ್ರಹ ಮಾಡಲಿಲ್ಲ ಎಂದ ಅವರು, ಬೆಂಗಳೂರಿನಲ್ಲಿ ಮೋದಿ ಅವರ ಸಭೆಗೆ ನಿರೀಕ್ಷಿತ ಸಂಖ್ಯೆಯಲ್ಲಿ ಜನ ಸೇರದಿದ್ದರೂ ಭಾರೀ ಸಂಖ್ಯೆ ಯಲ್ಲಿ ಸೇರಿದ್ದಾರೆ ಎಂದು ಬಿಜೆಪಿಯವರು ಪ್ರತಿಬಿಂಬಿಸುತ್ತಿದ್ದಾರೆ ಎಂದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ ಶಾಂತಿ ಸೌಹಾರ್ದಕ್ಕೆ ಧಕ್ಕೆ ತರುವ, ಕಾನೂನಿಗೆ ವಿರುದ್ಧವಾಗಿ ನಡೆಯುವ ಯಾರೇ ಆಗಿದ್ದರೂ ಅವರ ವಿರುದ್ಧ ಕಠಿನ ಕ್ರಮಗಳನ್ನು ಕೈಗೊಳ್ಳಲು ಹಿಂಜರಿಯದು ಎಂದರು.
Click this button or press Ctrl+G to toggle between Kannada and English