ಮಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಮಟ್ಟಿಗೆ ಬಿಜೆಪಿಗೆ ಸಚಿವ ರಮಾನಾಥ ರೈಯವರೇ ಟಾರ್ಗೆಟ್ ಎನ್ನಲಾಗುತ್ತಿದೆ.
ಕರಾವಳಿ ಜಿಲ್ಲೆಯ ಕಾಂಗ್ರೆಸ್‌ನ ಹೈಕಮಾಂಡ್ ಆಗಿರುವ ಸಚಿವ ರೈ ಅದ್ಯಾಕೋ ಗೊತ್ತಿಲ್ಲ ಒಂದಲ್ಲ ಒಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇದನ್ನೇ ಲಾಭ ಮಾಡಿಕೊಂಡಿರುವ ಬಿಜೆಪಿ ಗೆಲುವಿನ ತಂತ್ರ ಹೂಡುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ವಿದ್ಯಮಾನಗಳು ಜಿಲ್ಲೆ ಮಾತ್ರವಲ್ಲ, ರಾಜ್ಯ, ರಾಷ್ಟ್ರಮಟ್ಟದಲ್ಲೂ ಸುದ್ದಿಯಾಗುತ್ತಿವೆ. ಅಧಿಕಾರಿಗಳ ವರ್ಗಾವಣೆ, ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆ ಪ್ರಕರಣಗಳು ಮತ್ತು ರೈ ಅವರ ವಿವಾದಿತ ಹೇಳಿಕೆಗಳನ್ನು ಬಿಜೆಪಿ ತನ್ನ ಬಾಣದ ಬತ್ತಳಿಕೆಗಳನ್ನಾಗಿ ಮಾಡಿಕೊಳ್ಳಲು ಹೊರಟಿದೆ.
ಬಂಟ್ವಾಳ ಕ್ಷೇತ್ರದಿಂದ ಏಳು ಬಾರಿ ಸ್ಪರ್ಧಿಸಿದ್ದ ಬಿ.ರಮಾನಾಥ ರೈ ಆರು ಬಾರಿ ಗೆದ್ದು, ಸಾರಿಗೆ, ಗೃಹ ಖಾತೆಯಂತಹ ಮಹತ್ತರ ಹುದ್ದೆಗಳನ್ನೂ ಅಲಂಕರಿಸಿದ ಹಿರಿಯ ರಾಜಕಾರಣಿ.ಕರಾವಳಿಯ ಸಂಘರ್ಷದ ಬೆನ್ನಲ್ಲೆ ಸಚಿವ ರೈಯವರ ಕೆಲವು ಹೇಳಿಕೆಗಳು ಸಂಘ ಪರಿವಾರವನ್ನು ಸ್ವಾಭಾವಿಕವಾಗಿ ಕೆರಳಿಸಿದೆ.
ಕಲ್ಲಡ್ಕ ಶಾಲೆಗೆ ಬರುತ್ತಿದ್ದ ಬಿಸಿಯೂಟದ ಅನುದಾನ ಸ್ಥಗಿತವನ್ನೇ ರಾಜಕೀಯ ಲಾಭ ಮಾಡಿಕೊಂಡ ಬಿಜೆಪಿ ನಾಯಕರು, `ಮಕ್ಕಳ ಅನ್ನದ ಬಟ್ಟಲನ್ನು ಸಚಿವರು ಕದ್ದಿದ್ದಾರೆ’ ಎಂದು ಆರೋಪಿಸಿ ಭಿಕ್ಷೆ ಎತ್ತಿ ಹಣ ಸಂಗ್ರಹ ಮಾಡಿ ಎರಡೂ ಶಾಲೆಗಳಿಗೆ ದಾನ ಮಾಡಿದರು. ಎಸ್ಪಿಯಾಗಿದ್ದ ಭೂಷಣ್ ರಾವ್ ಗುಲಾಬ್ ಬೊರಸೆ, ಬಳಿಕ ಬಂದ ಸುಧೀರ್ ಕುಮಾರ್ ರೆಡ್ಡಿ ಸೇರಿದಂತೆ ಅಧಿಕಾರಿಗಳ ವರ್ಗಾವಣೆಗೆ ಜಿಲ್ಲೆಯ ಜನತೆ ಕೂಡಾ ಗರಂ ಆಗಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ಬಿಜೆಪಿಗೆ ಬಂದ ಕಾಂಗ್ರೆಸ್‌ನ ವಕ್ತಾರರಾಗಿದ್ದ ಹರಿಕೃಷ್ಣ ಬಂಟ್ವಾಳ ಕೂಡಾ ಸಚಿವ ರೈ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಹಿರಿಯ ಕಾಂಗ್ರೆಸಿಗ ಬಿ. ಜನಾರ್ದನ ಪೂಜಾರಿಯವರ ಕಟ್ಟಾ ಅಭಿಮಾನಿಯಾಗಿರುವ ಹರಿಕೃಷ್ಣ, ಸಚಿವ ರೈಯವರು ತಮ್ಮ ಗುರುವಿಗೆ ಅವಾಚ್ಯವಾಗಿ ನಿಂದಿಸಿದ್ದಾರೆಂದು ಹೋದಲ್ಲೆಲ್ಲಾ ಹೇಳುತ್ತಿರುವುದು, ಇತ್ತ ಪೂಜಾರಿ ಕೂಡಾ ಇದನ್ನು ನೆನೆದು ಕಣ್ಣೀರುಡುತ್ತಿರುವುದು ಕಾಂಗ್ರೆಸ್ಸಿಗರಿಗೆ ಕಸಿವಿಸಿ ತಂದಿದೆ.
ವಿವಾದಗಳ ಗುಡ್ಡೆಯನ್ನೇ ಮೈಮೇಲೆ ಎಳೆದುಕೊಂಡು ಈ ಬಾರಿಯ ವಿಧಾನಸಭಾ ಚುನಾವಣೆಗೆ ಸಿದ್ಧತೆ ಮಾಡಿಳ್ಳುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಒಂದು ಕಡೆಯಾದರೆ, ಬಂಟ್ವಾಳದಲ್ಲಿ ರೈಯವರನ್ನು ಸೋಲಿಸಿಯೇ ಸಿದ್ಧ ಎಂದು ರಾಜೇಶ್ ನಾಯ್ಕ್ ಉಳೆಪಾಡಿ ತಾಲೂಕಿನ ಓಣಿ, ಕೇರಿ ಸುತ್ತುತ್ತಿದ್ದಾರೆ.
ಕೋಮು ಸಂಘರ್ಷಕ್ಕೆ ಸಂಘ ಪರಿವಾರ ಹಾಗೂ ಬಿಜೆಪಿಯೇ ಕಾರಣ ಎಂದು ಕಾಂಗ್ರೆಸ್ ಪ್ರಚಾರ ಮಾಡುತ್ತಿದ್ದರೆ, ಜಿಲ್ಲೆಯ ಅತಂತ್ರ ಸ್ಥಿತಿಗೆ ಸಚಿವರೇ ಕಾರಣ ಎಂದು ಬಿಜೆಪಿ ರಮಾನಾಥ ರೈ ಅವರತ್ತ ಬೊಟ್ಟು ಮಾಡುತ್ತಿದೆ.
ಇಡೀ ರಾಜ್ಯವೇ ವಿಧಾನಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಎಲ್ಲರ ಕಣ್ಣು ಬಂಟ್ವಾಳ ಕ್ಷೇತ್ರದ ಮೇಲೆ ನೆಟ್ಟಿದೆ.
Click this button or press Ctrl+G to toggle between Kannada and English