ಮಂಗಳೂರಿನಲ್ಲೊಂದು ಅನ್ಯಧರ್ಮೀಯ ಲವ್ ಕಹಾನಿ.. ಮಾದರಿಯಾದ ಶಿಕ್ಷಕ ಜೋಡಿ

12:11 PM, Wednesday, February 14th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

mangluruಮಂಗಳೂರು: ಧರ್ಮಕ್ಕೂ, ಪ್ರೀತಿಗೂ ಸಂಬಂಧವಿಲ್ಲ ಎಂದು ಗೊತ್ತಿದ್ದರೂ ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸಾಚಾರಕ್ಕೆ ಮಾತ್ರ ಕೊನೆಯಿಲ್ಲ. ಕಾನೂನಿನ ಸಮ್ಮತವಿದ್ದರೂ ಧರ್ಮವನ್ನೇ ಗುತ್ತಿಗೆ ಪಡೆದುಕೊಂಡವರಂತೆ ವರ್ತಿಸುವರ ಮಧ್ಯೆಯೂ ಕಳೆದ ಇಪ್ಪತ್ತೈದು ವರ್ಷಗಳಿಂದ ಸುಂದರ ಜೀವನ ಕಟ್ಟಿಕೊಂಡು ಮಾದರಿಯಾಗಿ ಬದುಕಿದ ಜೋಡಿ ನಮ್ಮ ಕಣ್ಣ ಮುಂದಿದೆ.

ಅದು 1992, ಡಿಸೆಂಬರ್ 4. ಬಾಬ್ರಿ ಮಸೀದಿ ಧ್ವಂಸ ಮಾಡಿದವರ ಮೇಲೆ ಒಂದು ವರ್ಗ ದೇಶಾದ್ಯಂತ ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೊಂದು ಗುಂಪು ವಿಜಯೋತ್ಸವದಿಂದ ಬೀಗುತ್ತಿದ್ದ ಸಂದರ್ಭ. ಎಲ್ಲಿ ನೋಡಿದರೂ ಹಿಂಸಾಚಾರ, ನಿಷೇಧಾಜ್ಞೆ, ಕರ್ಫ್ಯೂ ಆತಂಕ. ಆದರೆ, ಇಸ್ಮಾಯಿಲ್ ಹಾಗೂ ಉಷಾ ರೈ ಎಂಬ ಯುವ ಜೋಡಿ ಮಾತ್ರ ಕಾಸರಗೋಡಿನ ನೋಂದಣಿ ಕಚೇರಿಯಲ್ಲಿ ತಮ್ಮ ಮದುವೆಯನ್ನು ದಾಖಲಿಸುವಲ್ಲಿ ನಿರತರಾಗಿದ್ದರು.

ಇದಾಗಿ ಎರಡೇ ದಿನಗಳಲ್ಲಿ ಅಲ್ಲಲ್ಲಿ ಕರ್ಫ್ಯೂ ಹೇರಲಾಗಿತ್ತು. ಆದರೆ, ಇದ್ಯಾವುದೂ ಅವರ ಪ್ರೀತಿಗೆ ಧಕ್ಕೆಯಾಗಲಿಲ್ಲ. ಈ ದಂಪತಿ ಕಾರವಾರ ಕಡೆಗೆ ಹೊರಟರು. ಒಂದು ತಿಂಗಳ ಕಾಲ ಹೊಟೇಲಿನಲ್ಲಿ ಉಳಿದರು. ಮತ್ತೆ ಊರಿಗೆ ಬಂದು ತಮ್ಮ ಸ್ನೇಹಿತರ ಮನೆಗಳಲ್ಲಿ ಆಶ್ರಯ ಪಡೆದರು. ಕಾಸರಗೋಡಿನ ವರ್ಕಾಡಿ ಮೂಲದವರಾದ ಡಾ. ಇಸ್ಮಾಯಿಲ್ ಬದ್ರಿಯಾ ಕಾಲೇಜಿನಲ್ಲಿ ಪ್ರಾಂಶುಪಾಲರು. ಉಷಾ ರೈ ಬಂಟ್ವಾಳ ತಾಲೂಕಿನ ಕೈರಂಗಳದವರು, ಉಳ್ಳಾಲ ಬಿ. ಎಂ. ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕಿ.

ಉಷಾ ಅವರು ಮಂಗಳೂರು ಸರ್ಕಾರಿ ಕಾಲೇಜಿನಲ್ಲಿ ಓದುತ್ತಿದ್ದಾಗ ಅಲ್ಲಿಗೆ ಕನ್ನಡ ಉಪನ್ಯಾಸಕರಾಗಿ ಬಂದವರು ಇಸ್ಮಾಯಿಲ್. ಸಂಜೆ ಮನೆಗೆ ಒಂದೇ ಬಸ್‌‌ನಲ್ಲಿ ಹೋಗುತ್ತಿದ್ದರು. ಪರಸ್ಪರ ಹೀಗೆ ಉಂಟಾದ ಪರಿಚಯ ಪ್ರೀತಿಗೆ ತಿರುಗಿತು. ಆದರೆ, ಅವರ ಪ್ರೀತಿಯ ವಿಚಾರವನ್ನು ಮನೆಯಲ್ಲಿ ಹೇಳುವ ವಾತಾವರಣವೇ ಇರಲಿಲ್ಲ. ಕೊನೆಗೆ ಇಬ್ಬರೂ ಮನೆಬಿಟ್ಟು ಬಂದರು.

ಮದುವೆಯ ದಿನ ತಲುಪುವಂತೆ ಎರಡೂ ಮನೆಗಳಿಗೂ ಪತ್ರ ಕಳುಹಿಸಲಾಯಿತು. ತಮ್ಮ ನಿರ್ಧಾರವನ್ನು ಅದರಲ್ಲಿ ಬರೆಯಲಾಗಿತ್ತು. ಎರಡೂ ಮನೆಗಳಲ್ಲೂ ಮದುವೆಗೆ ಒಪ್ಪಿಗೆ ಇರಲಿಲ್ಲ. ಮದುವೆ ನೋಂದಣಿಯಾದ ಬಳಿಕ ತೀರಾ ಆತ್ಮೀಯರಿಗಾಗಿ ಔತಣ ಕೂಟವೊಂದನ್ನು ಗೆಳೆಯರ ಮನೆಯಲ್ಲಿಯೇ ವ್ಯವಸ್ಥೆ ಮಾಡಿಕೊಳ್ಳಲಾಯಿತು.

ಹೀಗೆ ಮಂಗಳೂರಿನಲ್ಲಿ ಇಬ್ಬರೇ ಬಾಡಿಗೆ ಮನೆಯಲ್ಲಿ ಕೆಲವು ಕಾಲ ಕಳೆದರು. ಬಳಿಕ ಇಸ್ಮಾಯಿಲ್ ಮನೆಯವರು ಇವರನ್ನು ಸ್ವೀಕರಿಸಿದರು. ತನ್ನ ಮನೆ ಪತ್ನಿಗೆ ಎಂದಿಗೂ ಬಂಧನವಾಗಬಾರದೆಂಬ ವಿಶೇಷ ಕಾಳಜಿಯನ್ನು ಇಸ್ಮಾಯಿಲ್ ವಹಿಸಿದ್ದರು. `ಯಾವುದೇ ವಿಷಯಕ್ಕೂ ತನ್ನ ಪತ್ನಿಗೆ ಒತ್ತಾಯ ಮಾಡಬಾರದು. ಆಕೆಗೆ ಇಷ್ಟ ಬಂದಂತೆ ಬದುಕಲು ಅವಕಾಶ ಕೊಡಬೇಕು’ ಎಂದು ಇಸ್ಮಾಯಿಲ್ ಸ್ಪಷ್ಟವಾಗಿ ಮನೆಯವರಿಗೆ ಸೂಚಿಸಿದ್ದರು.

ಅವರ ಮಾತಿಗೆ ಕಟ್ಟುಬಿದ್ದ ಮನೆಯವರೂ ಹಾಗೆಯೇ ನಡೆದುಕೊಂಡರು. ಅದು ಎಷ್ಟರ ಮಟ್ಟಿಗೆ ಎಂದರೆ ಉಷಾ ಅವರು ತರಕಾರಿಯಲ್ಲಿ ಬದನೆ ತಿನ್ನುತ್ತಿರಲಿಲ್ಲವಂತೆ. ಆ ಕಾರಣಕ್ಕೆ ಇಸ್ಮಾಯಿಲ್ ಅವರ ಮನೆಯಲ್ಲಿ ಇಂದಿಗೂ ಬದನೆ ಮಾಡುತ್ತಿಲ್ಲ ಎಂದು ಉಷಾ ಅವರು ಇಂದಿಗೂ ಆ ಮನೆಯವರ ಪ್ರೀತಿಯನ್ನು ನೆನೆಸಿಕೊಳ್ಳುತ್ತಾರೆ.

ಆದರೆ, ಉಷಾ ಅವರ ಮನೆಯಲ್ಲಿ ಇಂದಿಗೂ ಅವರಿಗೆ ಪ್ರವೇಶವಿಲ್ಲ. ಆ ಎಲ್ಲಾ ಕೊರತೆಯನ್ನು ಇಸ್ಮಾಯಿಲ್ ಮನೆಯವರು ನೀಗಿಸಿದ್ದಾರೆ ಎಂಬ ಆತ್ಮತೃಪ್ತಿ ಅವರದ್ದು. ಈ ದಂಪತಿಯ ಮುದ್ದಿನ ಮಗಳು ಶಮಾ ಹೆತ್ತವರಂತೆ ಪ್ರತಿಭಾವಂತೆ. ಶಾಲಾ ದಿನಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆಯುತ್ತಿದ್ದಳು.

ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಈಕೆ ತಂದೆ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಮಂಗಳೂರು ಸರ್ಕಾರಿ ಕಾಲೇಜಿನಲ್ಲಿಯೇ (ಈಗ ಅದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಎಂದಾಗಿದೆ) ಅರ್ಥಶಾಸ್ತ್ರದಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ.

ಈ ಮನೆಯಲ್ಲಿ ಪ್ರೀತಿಗೆ ಎಂದೂ ಕೊರತೆಯಿಲ್ಲ. ಆದರೆ, ಕರಾವಳಿ ಜಿಲ್ಲೆಯಲ್ಲಿ ಧರ್ಮದ ಹೆಸರಿನಲ್ಲಿ ನಡೆಯುವ ನೈತಿಕ ಪೊಲೀಸ್‌ಗಿರಿಯ ಬಗ್ಗೆ ಇಸ್ಮಾಯಿಲ್-ಉಷಾ ದಂಪತಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ. `ನಾವು ಯಾರಿಗೂ ಅಂತರ್ ಧರ್ಮೀಯ ವಿವಾಹವಾಗಿ; ಇದೇ ಆದರ್ಶ ಎಂದು ಹೇಳುವುದಿಲ್ಲ. ಅದರೆ, ಪ್ರೀತಿಸಿದವರಿಗೆ ಒಟ್ಟಿಗೆ ಬಾಳಲು ಅವಕಾಶ ಕೊಡಿ’ ಎಂಬುದು ಅವರ ಕಳಕಳಿಯ ವಿನಂತಿ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English