ಸುಬ್ರಹ್ಮಣ್ಯ: ನಾಗಾರಾಧನೆಗೆ ಪ್ರಸಿದ್ಧಿ ಪಡೆದ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ರಾಜಕೀಯ ಕ್ಷೇತ್ರದವರಿಗೂ ಶಕ್ತಿ ಕೇಂದ್ರವಾಗಿ ಪರಿಣಮಿಸುತ್ತಿದೆ.
ಕುಕ್ಕೆಗೂ ಗಣ್ಯರಿಗೂ ಹಿಂದಿನಿಂದಲೂ ನಂಟು. ಕ್ರೀಡೆ, ಸಿನಿಮಾ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು ತಮ್ಮ ಕುಟುಂಬದ ಉತ್ತರೋತ್ತರ ಅಭಿವೃದ್ಧಿಯನ್ನು ಆಶಿಸಿ ಇಲ್ಲಿಗೆ ಬಂದು ಸರ್ಪ ಸಂಸ್ಕಾರ ಇತ್ಯಾದಿ ಸೇವೆ ಸಲ್ಲಿಸಿದ್ದು ಉಂಟು.
ರಾಜಕೀಯ ಮುತ್ಸದ್ಧಿಗಳು ಚುನಾವಣೆಗೆ ಮುನ್ನ ದೇವಿ ಕ್ಷೇತ್ರಗಳಿಗೆ ಹೋಗುವುದು ವಾಡಿಕೆ. ಆದರೀಗ ಕುಕ್ಕೆಯತ್ತಲೂ ಪಾದ ಬೆಳೆಸುತ್ತಿದ್ದಾರೆ. ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸರ್ಪ ದೋಷ ನಿವಾರಣೆಗಾಗಿ ಧಾರ್ಮಿಖ ಉದ್ದೇಶದಿಂದ ಕುಕ್ಕೆ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದರೂ, ಇದರ ಹಿಂದೆ ಬೇರೆಯದೆ ಲೆಕ್ಕಾಚಾರವಿದೆ ಎನ್ನಲಾಗುತ್ತಿದೆ.
ಉತ್ತರ ಭಾರತ ಚುನಾವಣೆ ಆರಂಭದಲ್ಲಿ ಪ್ರಖ್ಯಾತ ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿ ಅಮಿತ್ ಶಾ ತಮ್ಮ ಚುನಾವಣ ಕಾರ್ಯವನ್ನು ಆರಂಭಿಸಿದ್ದರು. ಅದರಂತೆ ಕರ್ನಾಟಕ ವಿಧಾನಸಭಾ ಚುನಾವಣೆ ಕಾರ್ಯಕ್ಕೆ ಕುಕ್ಕೆಯಿಂದಲೇ ಚಾಲನೆ ನೀಡುವ ಸಂಭವವಿದೆ. ಆ ಮೂಲಕ ಕರಾವಳಿಯಿಂದ ತಮ್ಮ ರಾಜಕೀಯ ಜೈತ್ರ ಯಾತ್ರೆಯನ್ನು ಆರಂಭಿಸಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಉದ್ದೇಶ ಅವರದ್ದು ಎಂದು ವಿಶ್ಲೇಷಿಸಲಾಗುತ್ತಿದೆ.
ಶಾ ಅವರ ಕುಟುಂಬಕ್ಕೂ ಕುಕ್ಕೆಗೂ ಹಿಂದಿನಿಂದ ನಂಟಿದೆ. ಇಲ್ಲಿಯ ಭಕ್ತರಲ್ಲಿ ಅಮಿತ್ ಶಾ ಅವರೂ ಒಬ್ಬರು. ಎರಡು ವರ್ಷದ ಹಿಂದೆ ಶಾ ಅವರ ಸಹೋದರಿ ಹಾಗೂ ಭಾವ ಇಲ್ಲಿಗೆ ಆಗಮಿಸಿ ಸೇವೆಗಳನ್ನು ಪೂರೈಸಿದ್ದರು. ಈ ಹಿಂದೆಯೇ ಅಮಿತ್ ಶಾ ಆಗಮಿಸುವ ನಿರೀಕ್ಷೆ ಈಡೇರಿರಲಿಲ್ಲ.
ಇಲ್ಲಿಗೆ ಈ ಹಿಂದೆ ಆಗಮಿಸಿದ ರಾಜಕೀಯ ನಾಯಕರ ಪಟ್ಟಿ ದೊಡ್ಡದಿದೆ. ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡ, ಮನೇಕಾ ಗಾಂಧಿ, ವರುಣ್ ಗಾಂಧಿ, ಬಿ.ಎಸ್ ಯಡಿಯೂರಪ್ಪ, ಅನಂತಕುಮಾರ್ ಸೇರಿದಂತೆ ಹಲವರು ಭೇಟಿ ನೀಡಿದ್ದರು. ಇದಲ್ಲದೇ ಸಚಿನ್ ತೆಂಡುಲ್ಕರ್ ಸಹಿತ ಕ್ರಿಕೆಟ್ ದಿಗ್ಗಜರು, ವಿಜಯ ಮಲ್ಯ ಸೇರಿದಂತೆ ಹಲವು ಉದ್ಯಮಿಗಳೂ ಆಗಮಿಸಿದ್ದಾರೆ.
ಫೆ.19ರಂದು ಕ್ಷೇತ್ರಕ್ಕೆ ಆಗಮಿಸುವ ಅಮಿತ್ ಶಾ ರಾತ್ರಿ ಇಲ್ಲಿ ತಂಗುವರು. ಫೆ.20ರ ಬೆಳಗ್ಗೆ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುವರು. ಬಳಿಕ ಸರ್ಪದೋಷಗಳ ನಿವಾರಣೆಯ ಸೇವೆಗಳಲ್ಲಿ ಒಂದಾದ ಆಶ್ಲೇಷ ಬಲಿ ಸೇವೆ ಪೂರೈಸುವರು. ಬಳಿಕ ನಗರದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳುವರು. ರೂಪು ರೇಷೆ ಹಾಗೂ ಇನ್ನಿತರ ಕುರಿತು ಪಕ್ಷದ ಮುಖಂಡರು ಸಿದ್ಧತೆ ನಡೆಸುತ್ತಿದ್ದಾರೆ .
‘ಹಿಂದೂ ದೇಗುಲಕ್ಕೆ ಧಾರ್ಮಿಕ ನಂಬಿಕೆಯ ಅಮಿತ್ ಶಾ ಭೇಟಿ ನೀಡುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಅವರ ಭೇಟಿ ಅವಧಿ ಚುನಾವಣೆ ಸಮಯವಾಗಿರುವುದರಿಂದ ಕಾರ್ಯಕರ್ತರ ಸಭೆ ಹಾಗೂ ಪಕ್ಷದ ಶಕ್ತಿ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ಅದೇನೂ ಹೊಸತಲ್ಲ ಹಾಗೂ ಬೇರೆ ಬಣ್ಣ ಹಚ್ಚುವ ಅವಶ್ಯಕತೆ ಇಲ್ಲ.
Click this button or press Ctrl+G to toggle between Kannada and English