ಗಾಯಕ ರಾಜೇಶ್ ಕೃಷ್ಣನ್‌ಗೆ ಎಸ್.ಜಾನಕಿ ರಾ. ಪ್ರಶಸ್ತಿ

1:56 PM, Friday, February 16th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

rajesh-krishnanಉಡುಪಿ: ಕುಂದಾಪುರದ ಯುವ ಗಾಯಕ ಡಾ.ಸತೀಶ್ ಪೂಜಾರಿ ಹಾಗೂ ಡಾ.ಪ್ರಕಾಶ್ ತೋಳಾರ್ ನೇತೃತ್ವದ ‘ಮನಸ್ಮಿತ ಫೌಂಡೇಷನ್ ಕೋಟ’, ಗೀತಾನಂದ ಫೌಂಡೇಷನ್ ಮಣೂರು ಹಾಗೂ ಯುವ ಮೆರೀಡಿಯನ್ ಕುಂದಾಪುರ ಇವುಗಳ ಸಹಭಾಗಿತ್ವದಲ್ಲಿ ಸ್ಥಾಪಿಸಿರುವ ಚೊಚ್ಚಲ ‘ಡಾ.ಎಸ್. ಜಾನಕಿ ರಾಷ್ಟ್ರೀಯ ಪ್ರಶಸ್ತಿ-2018’ಕ್ಕೆ ಕನ್ನಡದ ಯುವ ಗಾಯಕ ರಾಜೇಶ್ ಕೃಷ್ಣನ್ ಅವರನ್ನು ಆಯ್ಕೆ ಮಾಡಲಾಗಿದೆ.

ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಡಾ.ಸತೀಶ್ ಪೂಜಾರಿ ಅವರು ಈ ವಿಷಯ ತಿಳಿಸಿದರು. ಕಳೆದ ನಾಲ್ಕು ವರ್ಷಗಳಿಂದ ಮಾನಸಿಕ ಅಸ್ವಸ್ಥರ ಆರೈಕೆ, ಉಚಿತ ಮಾನಸಿಕ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣಾ ಶಿಬಿರದ ಮೂಲಕ ಸಾವಿರಾರು ರೋಗಿಗಳ ಬದುಕನ್ನು ಹಸನುಗೊಳಿಸುತ್ತಿರುವ ಮನಸ್ಮತ ಫೌಂಡೇಷನ್, ಬಡ ರೋಗಿಗಳ ಸಹಾಯಾರ್ಥ ಇದೇ ಮೊದಲ ಬಾರಿಗೆ ಗಾನಕೋಗಿಲೆ ಎಸ್.ಜಾನಕಿ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ಥಾಪಿಸಿದೆ ಎಂದರು.

ಒಂದು ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡಿರುವ ಈ ಪ್ರಶಸ್ತಿಯನ್ನು ಎರಡು ವರ್ಷಗಳಿಗೊಮ್ಮೆ ನೀಡಲು ನಿರ್ಧರಿಸಲಾಗಿದೆ. ಮೊದಲ ಪ್ರಶಸ್ತಿಗೆ ಕಳೆದ 20 ವರ್ಷಗಳಿಂದ ಗಾಯಕರಾಗಿ ಜನಮಾನಸದಲ್ಲಿ ನೆಲೆ ನಿಂತಿರುವ ರಾಜೇಶ್ ಕೃಷ್ಣನ್‌ರನ್ನು ಜಾನಕಿ ಅವರ ಒಪ್ಪಿಗೆಯೊಂದಿಗೆ ಆಯ್ಕೆ ಮಾಡಲಾಗಿದೆ ಎಂದು ಡಾ.ಪೂಜಾರಿ ತಿಳಿಸಿದರು.

ಪ್ರಶಸ್ತಿ ವಿತರಣಾ ಸಮಾರಂಭ ಫೆ.24ರಂದು ಸಂಜೆ 6ಗಂಟೆಗೆ ಕೋಟೇಶ್ವರದ ಬಳಿ ಇರುವ ಯುವ ಮೆರಿಡಿಯನ್‌ನ ಒಪೆರಾ ಪಾರ್ಕ್ ಆವರಣದಲ್ಲಿ ವಿತರಿಸಲಾಗುವುದು. ಪ್ರಶಸ್ತಿ ಪ್ರದಾನ ಸಮಾರಂಭದೊಂದಿಗೆ ಅದ್ದೂರಿಯ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ರಾಜೇಶ್ ಕೃಷ್ಣನ್ ಅವರೂ ತನ್ನ ಕೆಲ ಹಾಡುಗಳನ್ನು ಹಾಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮನಸ್ಮಿತ ಫೌಂಡೇಷನ್‌ನ ವೈದ್ಯಕೀಯ ನಿರ್ದೇಶಕ ಹಾಗೂ ಮನೋರೋಗ ತಜ್ಞ ಡಾ.ಪ್ರಕಾಶ್ ತೋಳಾರ್, ಉಡುಪಿ ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಹಾಗೂ ಚಿತ್ರ ನಿರ್ಮಾಪಕ ನಿರ್ದೇಶಕ ಯಾಕೂಬ್ ಖಾದರ್ ಗುಲ್ವಾಡಿ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English