ದೈವಾರಾಧನೆಯ ಮಹತ್ವವನ್ನು ಯುವ ಪೀಳಿಗೆಗೆ ತಿಳಿಸುವುದು ಮಹತ್ವದ ಕಾರ್ಯ : ಶಕುಂತಳಾ ಶೆಟ್ಟಿ

4:04 PM, Monday, February 19th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

shakuntalaಪುತ್ತೂರು: ದೈವಾರಾಧನೆಯು ಸಮಾನತೆಯ ಸಂಕೇತವಾಗಿ ದೈವಾರಾಧನೆ ನಡೆಯುತ್ತದ್ದು, ದೈವಾರಾಧನೆಯ ಮಹತ್ವವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವುದು ಮಹತ್ವದ ಕಾರ್ಯ ಎಂದು ಪುತ್ತೂರು ಶಾಸಕಿ ಶಕುಂತಳಾ ಟಿ ಶೆಟ್ಟಿ ಹೇಳಿದರು.

ಅವರು ರವಿವಾರ ಪುತ್ತೂರು ದೈವಾರಾಧಕರ ಕೂಟ ಕೇಂದ್ರ ಸಮಿತಿಯ ಆಶ್ರಯದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಡೆದ ದೈವಾರಾಧಕರ ಪರ್ವ-2018ನ್ನು ಉದ್ಘಾಟಿಸಿದರು. ಸಮಾಜದಲ್ಲಿ ಜಾತಿ, ಮತ, ಧರ್ಮ, ಬೇಧವೆನ್ನದೆ ಬಂಧುತ್ವದ ನೆಲೆಗಟ್ಟಿನಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಸಂಘಟನೆಯಾಗಿ ದೈವಾರಾಧಕರ ಕೂಟ ಕೆಲಸ ಮಾಡುತ್ತಿದ್ದು, ನಮ್ಮ ಹಿರಿಯರು ಭೂತಾರಾಧನೆಯನ್ನು ಯಾವುದೇ ಜಾತಿಯ ಆಧಾರದಲ್ಲಿ ನಿರ್ಧರಿಸಿಲ್ಲ. ಅಸ್ಪೃಶ್ಯ ತೆಯ ಮನೋಭಾವ ಇಲ್ಲಿ ಕಾಣುತ್ತಿಲ್ಲ.

ಸಮಾನತೆಯ ಸಂಕೇತವಾಗಿ ದೈವಾರಾಧನೆ ನಡೆಯುತ್ತದೆ ಎಂದ ಶಾಸಕಿ ಹಿರಿಯರು ಆಚರಿಸುತ್ತಿದ್ದ ದೈವಾರಾಧನೆಯ ಗತ ವೈಭವವನ್ನು ಮರಳಿ ಪ್ರತಷ್ಠಾಪಿಸುವ ಕೆಲಸವನ್ನು ಕಿರಿಯರು ಮಾಡಬೇಕಾಗಿದೆ ಎಂದು ತಿಳಿಸಿದರು.

ದೈವಾರಾಧಕರ ಅಕಾಡೆಮಿ ಸ್ಥಾಪಿಸುವ ಕುರಿತು ಇರಾದೆ ಇದ್ದು, ಅದರಲ್ಲಿ ದೈವಾರಾಧನೆಯ ಕುರಿತು ಜ್ಞಾನ ಇರುವವರಿಗೆ ಸ್ಥಾನಮಾನ ಸಿಗಬೇಕು. ಆಗ ಮಾತ್ರ ಅಕಾಡೆಮಿ ಸ್ಥಾಪಿಸಿದ್ದಕ್ಕೆ ಅರ್ಥ ಬರುತ್ತದೆ. ನಂಬಿಕೆಯ ಜೊತೆಗೆ ಸಂಪ್ರದಾಯ, ಸಂಸ್ಕೃತಿ, ಸತ್ಯ, ನ್ಯಾಯ, ನೆಲೆಗಟ್ಟು ಮತ್ತು ನುಡಿಗಟ್ಟು ಉಳಿಯುವಂತ್ತಾಗಬೇಕು ಎಂದು ಶಾಸಕಿ ಶಕುಂತಲಾ ಶೆಟ್ಟಿ ತಿಳಿಸಿದರು.

ದಿಕ್ಸೂಚಿ ಭಾಷಣ ಮಾಡಿದ ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಪ್ರೊ. ಮಂಜುನಾಥ ಕೋಟ್ಯಾನ್, ಹಿರಿಯರು ನಡೆದ ಹಾದಿಯಲ್ಲಿ ಕಿರಿಯರು ಮುಂದಡಿ ಇಡುತ್ತಿದ್ದಾರೆ ಎಂಬುದಕ್ಕೆ ದೈವಾರಾಧಕರ ಕೂಟವೇ ಸಾಕ್ಷಿ. ಇಂದಿನ ಸಮಾಜದಲ್ಲಿ ಕೆಲವೊಂದು ಕಡೆ ವಿಭಜಕ ಪ್ರವೃತ್ತಿ ನಡೆಯುತ್ತಿದೆ. ಈ ಮನೋಧರ್ಮ ಬದಲಾಗಬೇಕಿದೆ. ಅದಕ್ಕಾಗಿ ಇಂತಹ ಸಂಘಟನೆಗಳು ಇನ್ನಷ್ಟು ಬಲವಾಗಬೇಕು. ಆಸೆ, ಆಕಾಂಕ್ಷೆಗಳನ್ನು ಮೀರಿ ದೈವಾರಾಧಕರ ಕೂಟ ಬೆಳೆಯುತ್ತಿದೆ ಎಂದರು.

ಪಂಚವರ್ಣದ ತುಳುನಾಡಿನಲ್ಲಿ 400ಕ್ಕಿಂತಲೂ ದೈವಗಳ ಅಸ್ತಿತ್ವದಲ್ಲಿದ್ದವು. ಅನಾದಿ ಕಾಲದಿಂದಲೂ ಇವುಗಳ ಆರಾಧನೆ ನಡೆಯುತ್ತಾ ಬಂದಿದೆ. ಆದರೆ ಬದಲಾದ ಕಾಲಮಿತಿಯಲ್ಲಿ ದೈವಗಳ ಪ್ರಮಾಣವೂ ಕಡಿಮೆಯಾಗತೊಡಗಿದೆ. ಇಂದು ಸಮಾಜದ ಸ್ವಾಸ್ಥ್ಯಕ್ಕೆ ಚರ್ಚೆಗಳ ಅನಿವಾರ್ಯತೆ ಇದೆ. ಭಿನ್ನಾಭಿಪ್ರಾಯಗಳು ಪ್ರಯೋಗದ ನಿಟ್ಟಿನಲ್ಲಿ ಇರಬೇಕೆ ಹೊರತು ವೈರತ್ವದ ನೆಲೆಯಲ್ಲಿ ಇರಬಾರದು. ಪುತ್ತೂರು ದೈವಾರಾಧಕರ ಕೂಟವು ಭವಿಷ್ಯತ್‍ಗೆ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸಲಿದೆ ಎಂದರು.

ಮಂಜೇಶ್ವರ ಗಿಳಿವಿಂಡು ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕದ ಆಡಳಿತಾಧಿಕಾರಿ ಡಾ. ಕಮಲಾಕ್ಷ ಡಾ. ನವೀನ್ ಕುಮಾರ್ ಮರೀಕೆ ರಚಿಸಿದ ದೈವಾರಾಧನೆ-ಸಾಂಸ್ಕೃತಿಕ ಅಧ್ಯಯನ ಎಂಬ ಗ್ರಂಥವನ್ನು ಲೋಕಾರ್ಪಣೆಗೊಳಿಸಿದರು. ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಯೋಗೀಶ್ ಕೈರೋಡಿ ಗ್ರಂಥ ಪರಿಚಯ ಮಾಡಿದರು. ಇದೇ ಸಂದರ್ಭ ವಿಜಯ ಕುಮಾರ್ ಹೆಬ್ಬಾರಬೈಲುರವರ ಪೂವರಿ ಮಾಸಿಕ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ದೈವ ಪಾತ್ರಿ ಲೋಕಯ್ಯ ಸೇರಾ ಹಾಗೂ ಧಾರ್ಮಿಕ ಮುಖಂಡ ಸಂಜೀವ ಪೂಜಾರಿ ಕೂರೇಲುರವರನ್ನು ಸನ್ಮಾನಿಸಲಾಯಿತು. ಪುತ್ತೂರು-ಸುಳ್ಯ ತಾಲೂಕುಗಳ ಪ್ರಿಯಾದರ್ಶಿನಿ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಡಾ. ದಿವ್ಯಪ್ರಭಾ ಗೌಡ ಚಿಲ್ತಡ್ಕ, ಮೂಡಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಯುವರಾಜ ಜೈನ್, ತುಳು ಅಕಾಡೆಮಿಯ ರಿಜಿಸ್ಟ್ರಾರ್ ಶುಭ ಹಾರೈಸಿದರು.

ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಸೀತಾರಾಮ ಶೆಟ್ಟಿ, ಪುತ್ತೂರು ದೈವಾರಾಧಕರ ಕೂಟ ಕೇಂದ್ರ ಸಮಿತಿಯ ಗೌರವಾಧ್ಯಕ್ಷರಾದ ಅಜಿತ್ ಕುಮಾರ್ ಜೈನ್, ಜಗನ್ನಾಥ ರೈ ನುಳಿಯಾಲು, ಪ್ರಧಾನ ಸಂಚಾಲಕ ಡಾ. ನವೀನ್ ಕುಮಾರ್ ಮರೀಕೆ ಮತ್ತು ಸಂಕೇತ್ ಪೂಜಾರಿ ಉಪಸ್ಥಿತರಿದ್ದರು.

ಪುತ್ತೂರು ದೈವಾರಾಧಕರ ಕೂಟ ಕೇಂದ್ರ ಸಮಿತಿಯ ಅಧ್ಯಕ್ಷ ಜಯಂತ ನಡುಬೈಲು ಸ್ವಾಗತಿಸಿ ಉಪಾಧ್ಯಕ್ಷ ಸೀತಾರಾಮ ರೈ ಕೈಕಾರ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ಸಂತೋಷ್ ಭಂಡಾರಿ ಚಿಲ್ಮತ್ತಾರು ವಂದಿಸಿ, ಶಶಿಧರ್ ಕಿನ್ನಿಮಜಲು, ರಂಗಯ್ಯ ಬಲ್ಲಾಲ್ ಮತ್ತು ಬಾಲಕೃಷ್ಣ ಪಳ್ಳತ್ತಾರು ಕಾರ್ಯಕ್ರಮ ನಿರೂಪಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English