ಮಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಕಾಲಿಡುತ್ತಿದ್ದಂತೆ ಕಾಂಗ್ರೆಸ್ ಹುಲಿಗಳು ಭಯಭೀತರಾಗಿ ಗುಹೆ ಸೇರುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ ಕಟೀಲ್ ವ್ಯಂಗ್ಯವಾಡಿದ್ದಾರೆ. ಮಂಗಳೂರಿನಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಅಮಿತ್ ಶಾ ಗಲಭೆಗೆ ಪ್ರಚೋದನೆ ಕೊಡುತ್ತಾರೆಂದು ಕಾಂಗ್ರೆಸಿಗರು ಆರೋಪಿಸುತ್ತಾರೆ.
ಆದರೆ, ಎಲ್ಲೆಲ್ಲಿ ಮುಖ್ಯಮಂತ್ರಿ ಹೋಗಿದ್ದಾರೆಯೋ ಅಲ್ಲೆಲ್ಲಾ ಹತ್ಯೆಗಳಾಗುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡಿ ಹೋದ ಬಳಿಕ ಕೋಮುಗಲಭೆಗಳು ನಡೆದ ನಿದರ್ಶನಗಳಿವೆ,” ಎಂದು ಕಿಡಿಕಾರಿದರು.
ಕರಾವಳಿಯಲ್ಲಿ ಸೋಮವಾರದಿಂದ ಅಮಿತ್ ಶಾ ಪ್ರವಾಸ ಆರಂಭ ಅಮಿತ್ ಶಾ ಹೋದಲ್ಲಿ ಕೋಮು ಗಲಭೆ, ಹತ್ಯೆ, ಜಗಳಗಳು ನಡೆದಿಲ್ಲ ಎಂದು ಹೇಳಿದ ಅವರು, ಅಮಿತ್ ಶಾ ಅವರ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಎಷ್ಟು ಭಯವಿದೆ ಎಂಬುದು ಇದರಿಂದ ಅರ್ಥವಾಗುತ್ತದೆ ಎಂದು ತಿಳಿಸಿದರು. “ಕಾಂಗ್ರೆಸ್ ವಿರೋಧಿ ಅಲೆ ರಾಜ್ಯದಲ್ಲಿದೆ.
ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಚಿವ ಯು.ಟಿ.ಖಾದರ್ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ.
ರಾಜ್ಯದಲ್ಲಿ ಯಾವಾಗ ಕಾಂಗ್ರೆಸ್ ಆಡಳಿತ ಮಾಡಿದೆಯೋ ಆಗೆಲ್ಲಾ ಕೋಮು ಗಲಭೆ, ಗ್ಯಾಂಗ್ ವಾರ್ ಗಳು ನಡೆದಿವೆ. ಗ್ಯಾಂಗ್ ಸ್ಟಾರ್ ಗಳು ತಲೆ ಎತ್ತಿರುವುದು ಕೂಡಾ ಕಾಂಗ್ರೆಸ್ ಆಡಳಿತದಲ್ಲಿಯೇ ಹೊರತು ಬಿಜೆಪಿ ಆಡಳಿತದಲ್ಲಿ ಅಲ್ಲ,” ಎಂದು ಅವರು ತಿರುಗೇಟು ನೀಡಿದರು. “ದ.ಕ. ಜಿಲ್ಲೆಯಲ್ಲಿ ಗಲಭೆ, ಬಂದ್, ಅಮಾಯಕರ ಕೊಲೆ ನಡೆದಿರುವುದು ಕಾಂಗ್ರೆಸ್ ಆಡಳಿತ ಸಮಯದಲ್ಲಿ,” ಎಂದು ಆರೋಪಿಸಿದ ಅವರು, ಮಂಗಳೂರು ಕಾರಾಗೃಹದಲ್ಲಿ ಹಾಗೂ ಮಂಗಳೂರು ಹೊರವಲಯದ ಫರಂಗಿಪೇಟೆಯಲ್ಲಿ ಡಬಲ್ ಮರ್ಡರ್ ನಡೆದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಮಿತ್ ಶಾ ಅವರ ಮೇಲೆ ಸುಳ್ಳು ಆರೋಪಗಳನ್ನು ಮಾಡುವ ಬದಲು ಜವಾಬ್ದಾರಿಯುತ ಹೇಳಿಕೆಗಳನ್ನು ಕಾಂಗ್ರೆಸ್ ಮುಖಂಡರು ನೀಡಬೇಕು ಎಂದ ಅವರು, ಚುನಾವಣೆಗೂ ಮುನ್ನ ಶಸ್ತ್ರತ್ಯಾಗ ಮಾಡುವ ನಿರ್ಧಾರವನ್ನು ಕಾಂಗ್ರೆಸಿಗರು ಕೈಗೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
Click this button or press Ctrl+G to toggle between Kannada and English