ಮಂಗಳೂರು: ಬಿಜೆಪಿ ಯಾವತ್ತೂ ಹೇಳಿದ್ದನ್ನು ಮಾಡುವುದಿಲ್ಲ. ಹೇಳದೆ ಮಾಡಿ ಅದನ್ನು ಕಾಂಗ್ರೆಸ್ಸಿಗರ ತಲೆಗೆ ಕಟ್ಟುತ್ತಾರೆ. ಬೆಂಗರೆಯಲ್ಲಿ ಮೊನ್ನೆ ಗಲಭೆ ಸೃಷ್ಟಿಸಿದ್ದೇ ಬಿಜೆಪಿಗರು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಜಿಲ್ಲೆಯ ಅಭಿವೃದ್ಧಿ ಪರ ಕಿಂಚಿತ್ತೂ ಕೆಲಸ ಮಾಡದ ಸಂಸದ ನಳಿನ್ ಕುಮಾರ್ ಕಟೀಲ್ ನಂ.1 ಸಂಸದರಾದರೆ ದೇಶದ ಉಳಿದ 523 ಸಂಸದರ ಪಾಡೇನು? ಎರಡನೇ ಬಾರಿ ಜಿಲ್ಲೆಯನ್ನು ಪ್ರತಿನಿಧಿಸುವ ನಳಿನ್ ಅಭಿವೃದ್ಧಿ ಪರ ಯೋಚಿಸುತ್ತಿಲ್ಲ, ಕೆಲಸ ಮಾಡುತ್ತಿಲ್ಲ. ಸಂಸತ್‌ನಲ್ಲಿ ಮಾತನಾಡದ ಅವರು ನಂ.1 ಸಂಸದ ಎಂದು ಬಿಂಬಿಸಲ್ಪಡುತ್ತಿರುವುದು ವಿಪರ್ಯಾಸ ಎಂದರು.
ಅಡಿಕೆ ಕ್ಯಾನ್ಸರ್‌ಕಾರಕ ಎಂದು ಸರ್ಕಾರವೇ ಸಂಸತ್‌ನಲ್ಲಿ ಹೇಳಿಕೆ ನೀಡಿದೆ. ಆದರೆ ಸಂಸದರು ಅದನ್ನು ಗಂಭೀರವಾಗಿ ಪರಿಗಣಿಸಬೇಡಿ ಎನ್ನುತ್ತಿದ್ದಾರೆ. ಅಡಕೆ ಬೆಳೆಗಾರರ ಪರ ಸರ್ಕಾರ ಇದೆ ಎನ್ನುತ್ತಾರೆ. ಹಾಗಿದ್ದರೆ ಕೇಂದ್ರ ಸರ್ಕಾರ ಸಂಸತ್‌ನಲ್ಲಿ ನೀಡಿದ ಹೇಳಿಕೆ ಸುಳ್ಳೇ ಎಂದು ಪ್ರಶ್ನಿಸಿದ ಹರೀಶ್ ಕುಮಾರ್, ಈ ಬಗ್ಗೆ ಜಿಲ್ಲೆಯವರೇ ಆದ ಕೇಂದ್ರ ಸಚಿವ ಸದಾನಂದ ಗೌಡ ಮಾತನಾಡದಿರುವುದು ವಿಪರ್ಯಾಸ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟ ಎಂದು ಬಿಜೆಪಿಗರು ಆರೋಪಿಸುತ್ತಿದ್ದಾರೆ. ಆದರೆ ಅದಕ್ಕೆ ಯಾವುದೇ ದಾಖಲೆ ಸಲ್ಲಿಸುತ್ತಿಲ್ಲ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವ ಸಂಸ್ಥೆಗಳು ಕೇಂದ್ರ ಸರ್ಕಾರದ ಸುಪರ್ದಿಯಲ್ಲಿದೆ. ಬಿಜೆಪಿಗರಿಗೆ ತಾಕತ್ತಿದ್ದರೆ ತನಿಖೆ ನಡೆಸಲಿ. ಭ್ರಷ್ಟಾಚಾರದ ಆರೋಪ ಸಾಬೀತಾದರೆ ರಾಜ್ಯ ಸರ್ಕಾರವನ್ನು ವಜಾ ಮಾಡಲಿ ಎಂದು ಸವಾಲು ಹಾಕಿದರು.
ಸುಳ್ಯದಲ್ಲಿ ವಿದ್ಯಾರ್ಥಿನಿ ಅಕ್ಷತಾಳನ್ನು ಹತ್ಯೆಗೈದ ಕಾರ್ತಿಕ್ ಎಬಿವಿಪಿ ಕಾರ್ಯಕರ್ತ. ಹಾಗಾಗಿ ಬಿಜೆಪಿಗರು ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಬಿಜೆಪಿ ಮುಖಂಡರಾದ ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್, ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಮೌನ ವಹಿಸಿದ್ದು ಯಾಕೆ ಎಂದು ಹರೀಶ್ ಕುಮಾರ್ ಪ್ರಶ್ನಿಸಿದರು.
Click this button or press Ctrl+G to toggle between Kannada and English