ಮಂಗಳೂರು: ಕೆಎಂಸಿ ಆಸ್ಪತ್ರೆ ವತಿಯಿಂದ ರವಿವಾರ ವಿಶ್ವ ಹೃದಯ ದಿನದ ಅಂಗವಾಗಿ ಏರ್ಪಡಿಸಿದ ಓಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್ ಚಾಲನೆ ನೀಡಿದರು. ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಹಾಗೂ ಅಂತಾರಾಷ್ಟ್ರೀಯ ಅತ್ಲೆಟ್ ರೀತ್ ಅಬ್ರಹಾಂ ಅವರು ಮುಖ್ಯ ಅತಿಥಿಯಾಗಿದ್ದರು. ನಗರದ ಬಿಜೈ ಕೆಎಂಸಿಯಿಂದ ಓಟ ಆರಂಭಗೊಂಡು ಲಾಲ್‌ಬಾಗ್, ಎಂ. ಜಿ. ರೋಡ್, ಪಿವಿಎಸ್ ವೃತ್ತ, ಬಂಟ್ಸ್‌ಹಾಸ್ಟೆಲ್ ವೃತ್ತ ಮಾರ್ಗವಾಗಿ ಸಾಗಿ ಅಂಬೇಡ್ಕರ್ ಸರ್ಕಲ್ ಬಳಿಯ ಕೆಎಂಸಿ ಆಸ್ಪತ್ರೆಯಲ್ಲಿ ಸಮಾಪನಗೊಂಡಿತು.
ಉದ್ಘಾಟನೆಯ ಬಳಿಕ ಮಾತನಾಡಿದ ಪಾಲೆಮಾರ್ ಅವರು ಕೆಎಂಸಿ ಕಳೆದ ಏಳು ವರ್ಷಗಳಿಂದ ನಿರಂತರವಾಗಿ ನಡೆಸುತ್ತಿರುವ ಹೃದಯ ನಡಿಗೆ ಕಾರ್ಯಕ್ರಮ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಪ್ರತಿ ವರ್ಷ ಶೇ.30 ರಷ್ಟು ಮಂದಿ ಹೃದಯ ಕಾಯಿಲೆಗೆ ಬಲಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಹೃದಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಜನರಲ್ಲಿ ಜಾಗೃತಿ ನಡೆಸಬೇಕು ಎಂದರು.
ವಿಧಾನಸಭಾ ಉಪಸಭಾಧ್ಯಕ್ಷ ಎನ್. ಯೋಗೀಶ್ ಭಟ್ ಅವರು ಮಾತನಾಡಿ ಜನರಲ್ಲಿ ಸಾಮೂಹಿಕ ಹೃದಯ ಸಂರಕ್ಷಣೆಯ ಜಾಗೃತಿಯಾಗಬೇಕು. ಅನೇಕರು ಹೃದಯದ ಕಾಳಜಿಯ ಬಗ್ಗೆ ನಿರ್ಲಕ್ಷ್ಯ ತೋರಿ ತೊಂದರೆ ಗೀಡಾಗುತ್ತಾರೆ, ಕೆಎಂಸಿ ನಡೆಸುತ್ತಿರುವ ಹೃದಯ ನಡಿಗೆ ಕಾರ್ಯಕ್ರಮ ಜನರಲ್ಲಿ ಇನ್ನಷ್ಟು ಜಾಗ್ರತಿ ಮೂಡಿಸಲಿ ಎಂದರು.
ಜಾವೆಗಲ್ ಶ್ರೀನಾಥ್ ಹಾಗೂ ರೀತ್ ಅಬ್ರಹಾಂ ಅವರನ್ನು ಸಮಾರೋಪ ಸಮಾರಂಭದಲ್ಲಿ ಸಮ್ಮಾನಿಸಲಾಯಿತು. ಓಟದಲ್ಲಿ ಪಾಲ್ಗೊಂಡವರಿಗೆ ವಿವಿಧ ಬಹುಮಾನಗಳನ್ನು ವಿತರಿಸಲಾಯಿತು.
ಸಂಸದ ನಳಿನ್ ಕುಮಾರ್ ಕಟೀಲು, ಮಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಕಾರ್ಪೋರೇಶನ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ರಾಮನಾಥ ಪ್ರದೀಪ್, ಎಂಆರ್‌ಪಿಎಲ್‌ನ ನಿರ್ದೇಶಕ ಪಿ. ಪಿ. ಉಪಾಧ್ಯಾಯ, ಮಣಿಪಾಲ ವಿವಿ ರಿಜಿಸ್ಟ್ರಾರ್ ಜಿ. ಕೆ. ಪ್ರಭು, ಎಕ್ಸಿಸ್ ಬ್ಯಾಂಕಿನ ಸದಾಶಿವ ಮಲ್ಯ, ವಂದನಾ ಶಾನುಭೋಗ್ ಅವರು ಅತಿಥಿಗಳಾಗಿದ್ದರು.
ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ| ಸುನಿಲ್ ದೇಶಪಾಂಡೆ ಅವರು ಸ್ವಾಗತಿಸಿದರು.
Click this button or press Ctrl+G to toggle between Kannada and English