ಮಂಗಳೂರು:”ಉತ್ತರ ಕರ್ನಾಟಕ ಭಾಗದ ಜನರು ಬೀದಿಗಿಳಿದು ಹೋರಾಟ ನಡೆಸುತ್ತಾರೆ. ಆದರೆ ಮಂಗಳೂರಿನ ಜನ ಬೀದಿಯಲ್ಲೇ ಚೂರಿಯಿಂದ ಇರಿಯುತ್ತಾರೆ” ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ವಿವಾದಾತ್ಮಕ ಹೇಳಿಕೆ ನೀಡಿ, ದಕ್ಷಿಣ ಕನ್ನಡ ಜಿಲ್ಲೆಯ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪುತ್ತೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಬ್ರವರಿ 20ರಂದು ಸುಳ್ಯದಲ್ಲಿ ನಡೆದ ಕಾಲೇಜು ವಿದ್ಯಾರ್ಥಿನಿ ಅಕ್ಷತಾ ಕೊಲೆ ಪ್ರಕರಣದ ಕುರಿತು ಮಾತನಾಡಿದರು. ಮಂಗಳೂರು ಭಾಗದ ಜನ ಶಾಂತಿ, ಸೌಮ್ಯತೆಗೆ, ಸೌಜನ್ಯತೆಗೆ ಬೆಲೆ ಕೊಡುವ ಜನ ಎಂಬ ಅಭಿಪ್ರಾಯವಿದೆ ಎಂದರು.
ಅದೇ ಪ್ರಕಾರ ಉತ್ತರ ಕರ್ನಾಟಕ ಭಾಗದಲ್ಲಿ ಬಡತನವಿದೆ, ನೋವಿದೆ, ಹಸಿವಿದೆ. ಅಲ್ಲಿಯ ಜನ ಬಿರು ಬಿಸಿಲಿನಲ್ಲಿ ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ, ಬೀದಿಗಿಳಿದು ಪ್ರತಿಭಟನೆ ಮಾಡುತ್ತಾರೆ. ಆದರೆ ಆ ಹೋರಾಟದ ಸ್ವಭಾವವನ್ನು ಮಂಗಳೂರಿನಲ್ಲಿ ನೋಡಲು ಸಾಧ್ಯವಿಲ್ಲ. ಮಂಗಳೂರಿನ ಜನ ಚಾಕುವಿನಿಂದ ಚುಚ್ಚುವವರು ಎಂದು ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯ ಈ ಹೇಳಿಕೆಗೆ ಈಗ ಭಾರಿ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ನಾಗಲಕ್ಷ್ಮಿ ಬಾಯಿ ಹೇಳಿಕೆ ಕುರಿತು ಕಾವೇರಿದ ಚರ್ಚೆ ಆರಂಭವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲ ಕಿಡಿಗೇಡಿಗಳು ನಡೆಸುವಂತಹ ಕೃತ್ಯಗಳಿಗೆ ಇಡೀ ಜಿಲ್ಲೆಯ ಜನರನ್ನು ಕೊಲೆಗಾರರಂತೆ ಬಿಂಬಿಸಿರುವುದು ಸರಿಯಲ್ಲ ಎಂಬ ಆಭಿಪ್ರಾಯ ವ್ಯಕ್ತವಾಗಿದೆ.
ತಮ್ಮ ಹೇಳಿಕೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಈ ಕೂಡಲೇ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಲಾಗಿದೆ.
Click this button or press Ctrl+G to toggle between Kannada and English