ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಗೆ 2018-19ನೇ ಸಾಲಿಗೆ 26,955.07 ಲಕ್ಷ ರೂ.ಗಳ ಉಳಿತಾಯದ ಬಜೆಟ್‌ಅನ್ನು ಮಂಡಿಸಲಾಗಿದೆ. ಆದರೆ, ಯಾವುದೇ ಹೊಸ ಯೋಜನೆಯನ್ನು ಪ್ರಕಟಿಸದೆ ಜನರನ್ನು ನಿರಾಸೆಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿವೆ.
ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆಯಲ್ಲಿ ಪಾಲಿಕೆ ಸಭಾಂಗಣದಲ್ಲಿ ನಿನ್ನೆ ನಡೆದ ವಿಶೇಷ ಸಭೆಯಲ್ಲಿ ಹಣಕಾಸು, ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ ಬಜೆಟ್ ಮಂಡಿಸಿದರು. ಹಿಂದಿನ ಸಾಲಿನ ಉಳಿತಾಯ 28,560.74 ಲಕ್ಷ ರೂ. ಹಾಗೂ ಈ ಸಾಲಿನ ಆದಾಯ 69,840.38 ಲಕ್ಷ ರೂ. ಸೇರಿ ಒಟ್ಟು 98,401.12 ಲಕ್ಷ ರೂ. ಮೊತ್ತದ ಸಂಪನ್ಮೂಲ ಕ್ರೂಢೀಕರಣವನ್ನು ನಿರೀಕ್ಷಿಸಿದೆ. ಇದರಲ್ಲಿ 71,446 ಲಕ್ಷ ರೂ. ವೆಚ್ಚವನ್ನು ನಿಗದಿಪಡಿಸಿ, ಸುಮಾರು 26,955.07 ಲಕ್ಷ ರೂ.ಗಳ ಉಳಿತಾಯದ ಬಜೆಟ್‌ಅನ್ನು ಮಂಡಿಸಲಾಗಿದೆ.
ಎಡಿಬಿ ಎರಡನೇ ಹಂತದ ಯೋಜನೆಯ ಅನುದಾನ ಕೆಯುಎಫ್‌ಡಿಸಿಗೆ ನೇರವಾಗಿ ಬಿಡುಗಡೆಯಾಗಿದೆ. ನಗರೋತ್ಥಾನ 2 ಮತ್ತು 3ನೇ ಹಂತದ ಅನುದಾನ ಜಿಲ್ಲಾಧಿಕಾರಿ ಖಾತೆಗೆ ಬಿಡುಗಡೆಯಾಗಿದೆ. ಈ ಅನುದಾನ ಪಾಲಿಕೆಗೆ ಬಿಡುಗಡೆಯಾಗದ ಕಾರಣ ಆದಾಯ ಕ್ರೂಢೀಕರಣದಲ್ಲಿ ವ್ಯತ್ಯಾಸವಾಗಿದೆ ಎಂದು ಬಜೆಟ್ ಮಂಡನೆಯಲ್ಲಿ ಪ್ರತಿಭಾ ತಿಳಿಸಿದರು.
ಖಾಲಿ ಹುದ್ದೆ ಭರ್ತಿ, ಬೀದಿ ನಾಯಿ ನಿಯಂತ್ರಣಕ್ಕೆ ಲಕ್ಷ್ಯ, ಕ್ರೀಡೆಗೆ ಒತ್ತು, ಸ್ವಸ್ತ ಕುಟೀರ, ಕುಟೀರ ಜ್ಯೋತಿ, ಬೀದಿಗಳಿಗೆ ಎಲ್ಇಡಿ ದೀಪ ಮೊದಲಾದ ಯೋಜನೆಗಳು ಬಜೆಟ್‌ನಲ್ಲಿವೆ.
ಯಾವುದೇ ಯೋಜನೆಗಳು ಇಲ್ಲದೆ ಅಂಕಿ ಅಂಶಕ್ಕೆ ಸೀಮಿತವಾಗಿ ಬಜೆಟ್‌ಅನ್ನು ಮಂಡಿಸಲಾಗಿದೆ ಪ್ರತಿಪಕ್ಷ ಬಿಜೆಪಿ ಟೀಕಿಸಿದೆ.
ಆರಂಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ ಅವರು ಸದಸ್ಯರ ಸಾಲಿನಲ್ಲಿ ನಿಂತು ಬಜೆಟ್ ಮಂಡಿಸುವುದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪವೆತ್ತಿದರು. ಸ್ಥಾಯಿ ಸಮಿತಿ ಅಧ್ಯಕ್ಷರು ಸದಸ್ಯರ ಸಾಲಿನಲ್ಲಿ ನಿಂತುಕೊಂಡು ಬಜೆಟ್ ಮಂಡಿಸುವುದು ಸರಿಯಲ್ಲ ಎಂದು ನಾಯಕ ಗಣೇಶ್ ಹೊಸಬೆಟ್ಟು ಹೇಳಿದರು.
ಮೇಯರ್ ಕೂಡ ಸ್ವಸ್ಥಾನಕ್ಕೆ ಬಂದು ಬಜೆಟ್ ಮಂಡಿಸುವಂತೆ ಸೂಚಿಸಿದರು. ಆದರೆ, ಪ್ರತಿಭಾ ಕುಳಾಯಿ ಅವರಿಗೆ ಕನ್ನಡ ಓದುವುದಕ್ಕೆ ಕಷ್ಟವಾಗುವುದರಿಂದ ಇಲ್ಲಿ ನಿಂತುಕೊಂಡು ಬಜೆಟ್ ಮಂಡಿಸುತ್ತಾರೆ. ಈ ವಿಚಾರವನ್ನು ಆಗಲೇ ಮೇಯರ್ ಅವರಿಗೆ ಹೇಳಿದ್ದೇನೆ ಎಂದು ಮುಖ್ಯ ಸಚೇತಕ ಶಶಿಧರ ಹೆಗ್ಡೆ ಸ್ಪಷ್ಟಪಡಿಸಿದರು. ಕೊನೆಯಲ್ಲಿ ಸದಸ್ಯರ ಸಾಲಿನಲ್ಲಿ ನಿಂತುಕೊಂಡು ಬಜೆಟ್ ಪ್ರತಿಯನ್ನು ಪ್ರತಿಭಾ ಕುಳಾಯಿ ಕಷ್ಟಪಟ್ಟು ಓದಿ ಮುಗಿಸಿದರು. ಉಪ ಮೇಯರ್ ರಜನೀಶ್, ಆಯುಕ್ತ ಮೊಹಮ್ಮದ್ ನಝೀರ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English