ಆಳ್ವಾಸ್‌‌‌ ವಿದ್ಯಾರ್ಥಿಯಿಂದ ಸ್ಯಾನಿಟರಿ ಪ್ಯಾಡ್‌‌‌ ಕಂಪೆನಿ ಸ್ಥಾಪನೆ

10:42 AM, Wednesday, February 28th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

alwas-foundationಮಂಗಳೂರು: ಮೂಡಬಿದ್ರೆ ಆಳ್ವಾಸ್ ಪದವಿ ಕಾಲೇಜಿನ ತೃತೀಯ ಬಿ.ಕಾಮ್ ವಿದ್ಯಾರ್ಥಿ ಕಿರಣ್ ರೆಡ್ಡಿ ಚೆನ್ನೈನ ಸೂರ್ಯ ಎಂಬುವವರ ಸಹಯೋಗದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ತಯಾರಿಕಾ ಕಂಪನಿಯನ್ನು ಆರಂಭಿಸಿದ್ದು, ಆಳ್ವಾಸ್ ಶಿಕ್ಷಣ ಪ್ರತಿಪ್ಠಾನದ ಕುವೆಂಪು ಸಭಾಂಗಣದಲ್ಲಿ ‘ಬೆಸ್ಟಿ'(ಸ್ಯಾನಿಟರ್ ನ್ಯಾಪ್ಕಿನ್) ಎಂಬ ಹೊಸ ಪ್ರೊಡಕ್ಟ್ ಬಿಡುಗಡೆಯಾಗಿದೆ.

ಆಳ್ವಾಸ್ ಶಿಕ್ಷಣ ಪ್ರತಿಷ್ಢಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಉತ್ಪನ್ನವನ್ನು ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು, ಸಂಸ್ಥೆಯ ಹೋರಾಟ ಮನೋಭಾವ, ಇಚ್ಛಾಶಕ್ತಿ ಹಾಗೂ ಸೃಜನಾತ್ಮಕ ಚಿಂತನೆಗಳು ಇದ್ದಲ್ಲಿ ಯಾರು ಬೇಕಾದರೂ ಸಾಧಿಸಬಹುದು ಎಂದರು. ಒಂದು ಲಕ್ಷ ರೂ. ಮೌಲ್ಯದ “ಬೆಸ್ಟಿ” ಉತ್ಪನ್ನವನ್ನು ಖರೀದಿಸಿ ಅದನ್ನು ಕಾಲೇಜು ಸ್ಟೇಷನರಿಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ಘೋಷಿಸಿದರು.

ಕಿರಣ್ ಕಿರಿಯ ವಯಸ್ಸಿಗೆ ಕಂಪನಿಯ ಮಾಲೀಕರಾಗಿದ್ದಾರೆ. ಈ ರೀತಿಯ ಕ್ರಿಯಾತ್ಮಕ ಮನೋಭಾವವನ್ನು ರೂಢಿಸಿಕೊಂಡಿರುವ ಮಕ್ಕಳನ್ನು ಕಂಡಾಗ ಮನ ತುಂಬಿ ಬರುತ್ತದೆ. ಹೆಣ್ಣುಮಕ್ಕಳಿಗೆ ಅಗತ್ಯವಿರುವ ಉತ್ಪನ್ನವನ್ನು ತಯಾರಿಸಿರುವುದು ಉತ್ತಮ ಕಾರ್ಯ. ಇದು ದೊಡ್ಡ ಮಟ್ಟದಲ್ಲಿ ಮಾರುಕಟ್ಟೆ ಗಳಿಸುವುದರಲ್ಲಿ ಸಂಶಯವಿಲ್ಲ. ಕಿರಣ್‌‌ರಂತೆ ಇನ್ನಷ್ಟು ವಿದ್ಯಾರ್ಥಿಗಳು ಹೊಸ ಆಲೋಚನೆಗಳೊಂದಿಗೆ ಹೊರಬರಬೇಕು. ಅಂತಹವರಿಗೆ ನನ್ನ ಸಂಪೂರ್ಣ ಬೆಂಬಲ ಇರುತ್ತದೆ ಎಂದು ಕಿರಣ್ ರೆಡ್ಡಿಯ ಕಾರ್ಯವನ್ನು ಶ್ಲಾಘಿಸಿದರು.

ಆಳ್ವಾಸ್ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಕುರಿಯನ್ ಮಾತನಾಡಿ,”ಋತುಚಕ್ರ ಹೆಣ್ಣಿಗಷ್ಟೇ ಅಲ್ಲದೇ ಮಾನವ ಜೀವನ ವ್ಯವಸ್ಥೆಯ ಮುಖ್ಯ ಭಾಗ. ಆದರೆ ಇದನ್ನು ಋಣಾತ್ಮಕ ರೀತಿಯಲ್ಲಿ ಕಾಣುತ್ತಿರುವುದು ವಿಷಾದನೀಯ.ಋತುಚಕ್ರದ ಸಮಯದಲ್ಲಿ ಹೆಣ್ಣನ್ನು ಬಹಳ ಕೀಳು ಮಟ್ಟದಲ್ಲಿ ನಡೆಸಿಕೊಳ್ಳಲಾಗುತ್ತದೆ. ಈ ಮನೋಭಾವ ತೊಲಗಿಸುವ ಅಭಿಯಾನ ಆರಂಭವಾಗಬೇಕು” ಎಂದು ಅಭಿಪ್ರಾಯಪಟ್ಟರು.

ಕಿರಣ್ ರೆಡ್ಡಿ ಮಾತನಾಡಿ, ಆಳ್ವಾಸ್ ಸಂಸ್ಥೆಯಿಂದ ನಾನು ಸಾಕಷ್ಟು ಕಲಿತ್ತಿದ್ದೇನೆ. ನನ್ನ ಎಲ್ಲಾ ಚಿಂತನೆಗಳಿಗೆ ಬೆನ್ನೆಲುಬಾಗಿ ನಿಂತವರು ನನ್ನ ಪಾಲಕರು ಹಾಗೂ ಶಿಕ್ಷಕರು. ಅವರಿಗೆ ನಾನು ಸದಾ ಚಿರಋಣಿ ಎಂದು ಹೇಳಿದರು. “ಸ್ಯಾನಿಟರಿ ನ್ಯಾಪ್ಕಿನ್ ತಯಾರಿಕಾ ಕಂಪನಿಯನ್ನು ಆರಂಭಿಸುವ ಆಲೋಚನೆ ಹುಟ್ಟಿಕೊಂಡಿದ್ದು ನನ್ನ ತಾಯಿಯಿಂದ. ಮಾರುಕಟ್ಟೆಯಲ್ಲಿ ಲಭ್ಯವಿರುವ ನ್ಯಾಪ್ಕಿನ್ ಬಳಕೆಯಿಂದ ಅವರು ಅನುಭವಿಸುತ್ತಿದ್ದ ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದೇನೆ.

ಅದಕ್ಕಾಗಿ ಉತ್ತಮ ಗುಣಮಟ್ಟದ ನ್ಯಾಪ್ಕಿನ್‌ ತಯಾರಿಸಲು ಮುಂದಾದೆ. ಇದಕ್ಕೆ ನನಗೆ ಬೆಂಬಲವಾಗಿದ್ದು ನನ್ನ ತಂದೆ. ಅವರು ಕಂಪನಿ ಆರಂಭಿಸಲು ಬೇಕಿದ್ದ ಹಣವನ್ನು 10% ಬಡ್ಡಿ ದರದಲ್ಲಿ ನೀಡಿದ್ದಾರೆ. ಅದನ್ನು ನಾನು ಮೂರು ವರ್ಷದ ಒಳಗೆ ಹಿಂದುರಗಿಸದೇ ಇದ್ದಲ್ಲಿ 5% ವಾರ್ಷಿಕ ಬಡ್ಡಿ ದರ ಹೆಚ್ಚಾಗುತ್ತದೆ ಎಂದು ತಮ್ಮ ಕಂಪನಿ ಹುಟ್ಟಿಕೊಂಡ ಬಗೆಯನ್ನು ಬಿಚ್ಚಿಟ್ಟರು.

ಸ್ಯಾನಿಟರಿ ನ್ಯಾಪ್ಕಿನ್‌ಗಳ ಸಾಕಷ್ಟು ಉತ್ಪನ್ನಗಳು ಮಾರುಕಟ್ಟೆಯಲ್ಲಿವೆ. ಆದರೆ ಇದು ಎಲ್ಲದಕ್ಕಿಂತ ಭಿನ್ನ.”ಬೆಸ್ಟಿ” ಉತ್ಪನ್ನ ಡ್ರೈ ನೆಟ್ ಹೊಂದಿದ್ದು, ಪಲ್ಪ್ ಶೀಟ್‌ಗಳನ್ನು ಬಳಸಲಾಗಿದೆ. ಆರಾಮದಾಯಕ ಬಳಕೆಗಾಗಿ ಜೆಲ್ ಆಗಿ ಪರಿವರ್ತನೆಗೊಳ್ಳುವ ಸ್ಯಾಪ್ ಉಪಯೋಗಿಸಲಾಗಿದೆ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English