ಸಿನಿಮಾ ಬದುಕಿನ ವಾಸ್ತವಕ್ಕೆ ಕನ್ನಡಿ ಹಿಡಿದ ಶ್ರೀದೇವಿ ಅಂತ್ಯ

3:26 PM, Wednesday, February 28th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

actorಕೊನೆಗೂ ನಟಿ ಶ್ರೀದೇವಿಯ ಸಾವಿನ ಕುರಿತಂತೆ ಇದ್ದ ಸಂಶಯ ದೂರವಾಗಿದೆ. ‘ಶ್ರೀದೇವಿ ಅವರ ಸಾವು ಈ ಮೊದಲು ಹೇಳಿದಂತೆ ಹೃದಯ ಸ್ತಂಭನದಿಂದ ನಡೆದಿಲ್ಲ, ‘ಬಾತ್ ಟಬ್‌ನಲ್ಲಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ’ ಎಂದು ದುಬೈ ಪೊಲೀಸರೇ ಹೇಳಿಕೆ ನೀಡಿ, ತನಿಖೆಯನ್ನು ಮುಗಿಸಿರುವುದರಿಂದ ಈ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.

ಭಾರತದ ಒಂದು ಕಾಲದ ಸೂಪರ್ ಸ್ಟಾರ್ ಕಲಾವಿದೆಯ ಸಾವಿನ ಕುರಿತಂತೆ ಕುಟುಂಬ ದ್ವಂದ್ವ ಹೇಳಿಕೆಯನ್ನು ನೀಡಿದಾಗ ಅನುಮಾನ ಹುಟ್ಟುವುದು ಸಹಜವೇ ಆಗಿದೆ. ಆಕೆಯ ಪತಿ ಬೋನಿಕಪೂರ್ ಸಹಿತ ಕುಟುಂಬ ಸದಸ್ಯರೇ ವದಂತಿಗಳಿಗೆ ಮೂಲ ಕಾರಣರು. ಶ್ರೀದೇವಿ ಬಾತ್‌ಟಬ್‌ನಲ್ಲಿ ಮೃತಪಟ್ಟಿರುವ ಸಂದರ್ಭದಲ್ಲಿ, ಪತಿಯೂ ಸೇರಿದಂತೆ ಕುಟುಂಬದ ಸದಸ್ಯರಿಗೆ ಕೆಲವು ಹೊಣೆಗಾರಿಕೆಗಳಿದ್ದವು.

ಮೊತ್ತ ಮೊದಲಾಗಿ ತಕ್ಷಣ ಪೊಲೀಸರಿಗೆ ಮಾಹಿತಿಯನ್ನು ನೀಡಬೇಕಾಗಿತ್ತು. ಹಾಗೆಯೇ ಹೊಟೇಲ್ ಸಿಬ್ಬಂದಿಯ ಗಮನಕ್ಕೂ ತರಬೇಕಾಗಿತ್ತು. ಮೃತಪಟ್ಟಿರುವುದು ಸಾಮಾನ್ಯ ಮಹಿಳೆಯಲ್ಲ. ಯಾವುದೇ ಗೊಂದಲಕಾರಿ ಹೇಳಿಕೆಗಳು ಬೀರಬಹುದಾದ ಪರಿಣಾಮಗಳ ಬಗ್ಗೆ ಅವರೆಲ್ಲರೂ ಅರಿವುಳ್ಳವರೇ ಆಗಿದ್ದಾರೆ. ಹೀಗಿರುವಾಗ, ಅವಸರವಸರವಾಗಿ ನಿರ್ಧಾರಕ್ಕೆ ಬಂದುದು ಎಲ್ಲ ಅನಾಹುತಗಳಿಗೆ ಕಾರಣವಾಯಿತು.

ಪ್ರಜ್ಞಾಹೀನರಾಗಿ ಬಾತ್‌ಟಬ್‌ಗೆ ಬಿದ್ದು ಮುಳುಗಿ ಸತ್ತಿರುವುದು ಸಣ್ಣ ವಿಷಯವೇನೂ ಅಲ್ಲ. ಈ ಕುರಿತಂತೆ ವಿಷಯಗಳನ್ನು ಮುಚ್ಚಿಟ್ಟಷ್ಟ್ಟು ಅನುಮಾನಗಳು ಏಳುತ್ತವೆ; ವದಂತಿಗಳು ಹರಡುತ್ತವೆ. ಮಾಧ್ಯಮಗಳು ಈ ಕಾರಣಕ್ಕಾಗಿಯೇ ಶ್ರೀದೇವಿಯ ವಿಷಯದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಆಸಕ್ತಿ ವಹಿಸಿದವು. ‘ಕೊಲೆಯಾಗಿರಬಹುದು’ ಎಂಬ ಅನುಮಾನವೂ ಎದ್ದಿತು. ಇದೀಗ ಎಲ್ಲ ಅನುಮಾನಗಳು ಪರಿಹಾರವಾಗಿವೆ. ಬಹುತೇಕ ನಟಿಯರ ಬದುಕು ದುರಂತದಲ್ಲಿ ಮುಕ್ತಾಯವಾಗುತ್ತದೆ. ಸಿನೆಮಾ ಎನ್ನುವ ಮಾಯಾಬಝಾರ್ ಸೃಷ್ಟಿಸುವ ಭ್ರಮೆಗಳು ಮತ್ತು ಅವರು ಎದುರಿಸಬೇಕಾದ ವಾಸ್ತವಗಳ ನಡುವಿನ ಸಂಘರ್ಷ ಇದಕ್ಕೆ ಮುಖ್ಯ ಕಾರಣ. ಸಿನೆಮಾ ತಾರೆಯರ ಬದುಕು ಇಂದು ಇದ್ದಂತೆ, ನಾಳೆ ಇರುವುದಿಲ್ಲ. ಒಂದೆರಡು ಚಿತ್ರಗಳು ಯಶಸ್ವಿಯಾಯಿತು ಎಂದು ಅಮಲು ತಲೆಗೇರಿ ಬಿಟ್ಟರೆ, ಮತ್ತೊಂದು ಚಿತ್ರದ ಸೋಲು ಅವರನ್ನು ಪಾತಾಳಕ್ಕೆ ಎಸೆಯಬಹುದು.

ಶಿಸ್ತು, ಶ್ರಮ, ವಿವೇಕ, ನೈತಿಕತೆಯ ಚೌಕಟ್ಟಿನಲ್ದ್‌ದ್ದು ವಾಸ್ತವವನ್ನು ಅರ್ಥ ಮಾಡಿಕೊಂಡು ಹೆಜ್ಜೆ ಮುಂದಿಟ್ಟ ಹಲವು ತಾರೆಯರು ವೈಯಕ್ತಿಕ ಬದುಕಿನಲ್ಲೂ ಯಶಸ್ವಿಯಾಗಿದ್ದಾರೆ. ಎರಡು ಚಿತ್ರಗಳು ಸೂಪರ್ ಹಿಟ್ ಆದಾಕ್ಷಣ ಮೈಮರೆಯುವ ತಾರೆಯರು ತಮ್ಮ ಜೀವನಮಟ್ಟವನ್ನು ಒಮ್ಮೆಲೇ ಎತ್ತರಕ್ಕೇರಿಸುತ್ತಾರೆ. ಹಾಗೆಯೇ ವ್ಯಸನಗಳಿಗೆ ಬಲಿಯಾಗುತ್ತಾರೆ. ಬೆಳ್ಳಿ ತೆರೆಯಲ್ಲಿ ಅವರು ಯಾವ ಪಾತ್ರಗಳಾಗಿ ಜನಮನಸೂರೆಗೊಂಡಿರುತ್ತಾರೋ ಆ ಪಾತ್ರಗಳಿಗೆ ವಿರುದ್ಧವಾಗಿ ಜೀವಿಸುತ್ತಾರೆ. ಆರ್ಥಿಕವಾಗಿ ಯಾವುದೇ ಶಿಸ್ತನ್ನು ಅವರು ಹೊಂದಿರುವುದಿಲ್ಲ. ಹಾಗೆಯೇ ತನ್ನನ್ನು ಸುತ್ತುವರಿದಿರುವ ಭ್ರಮೆಗಳೇ ನಿಜವೆಂದು ತಪ್ಪು ತಿಳಿದುಕೊಳ್ಳುತ್ತಾರೆ. ತಾರೆಯರು ಪಾತಾಳಕ್ಕಿಳಿಯಲು ಚಿತ್ರರಂಗದ ಒಂದು ಸೋಲು ಸಾಕಾಗುತ್ತದೆ.

ಅವಕಾಶಗಳು ಕಡಿಮೆಯಾಗುತ್ತಾ ಬಂದ ಹಾಗೆ ಅವರು ಆರ್ಥಿಕವಾಗಿ ಕೆಳಗೆ ತಳ್ಳಲ್ಪಡುತ್ತಾರೆ. ತಮ್ಮ ವೈಭವೋಪೇತ ಜೀವನ ಮಟ್ಟವನ್ನು ಮುಂದುವರಿಸಲು ಅವರಿಗೆ ಹಣದ ಅಗತ್ಯವಿರುತ್ತದೆ. ಆಗ ಅವರು ಕಳಪೆ ಸಿನೆಮಾಗಳಲ್ಲಿ ಕೂಡ ನಟಿಸಬೇಕಾಗುತ್ತದೆ. ಅಡ್ಡ ಹಾದಿ ಹಿಡಿಯಬೇಕಾಗುತ್ತದೆ. ತಲೆಮೇಲೆ ಇಟ್ಟು ಮೆರೆಸಿದ ಚಿತ್ರೋದ್ಯಮ ತಾರೆಯರನ್ನು ಶೋಷಣೆಗಿಳಿಸುತ್ತದೆ. ಇದರಿಂದ ಅವರು ಮಾನಸಿಕವಾಗಿ ತೀವ್ರ ಖಿನ್ನತೆಗೊಳಗಾಗುತ್ತಾರೆ.

ಹೆಚ್ಚಿನವರು ಈ ಸಂದರ್ಭದಲ್ಲೇ ಆತ್ಮಹತ್ಯೆಗೆ ಮೊರೆ ಹೋಗುತ್ತಾರೆ. ಹಲವರು ತಮ್ಮ ಗ್ಲಾಮರ್ ಇಳಿಯೆತೆನ್ನುವುದು ಅರಿವಿಗೆ ಬರುವಷ್ಟರಲ್ಲಿ ಎಚ್ಚರಗೊಂಡು ಯಾರಾದರೂ ಉದ್ಯಮಿಗಳನ್ನು ವರಿಸಿ ಬದುಕಿಗೆ ಭದ್ರತೆ ತುಂಬಲು ಹವಣಿಸುತ್ತಾರೆ. ಹಿರಿಯ ನಿರ್ಮಾಪಕ, ನಿರ್ದೇಶಕ ಬೋನಿಕಪೂರ್‌ರನ್ನು ವರಿಸುವ ಸಂದರ್ಭದಲ್ಲಿ ಶ್ರೀದೇವಿಯೂ ಇಂತಹದ್ದೇ ಒಂದು ಸನ್ನಿವೇಶದಲ್ಲಿ ನಿಂತಿದ್ದರು. ಆದರೆ ಹತಾಶರಾಗದೆ ಬದುಕು ಹಳಿ ತಪ್ಪದಂತೆ ನೋಡಿಕೊಂಡರು.

ಒಂದು ಕಾಲದಲ್ಲಿ ಶ್ರೀದೇವಿ ಯಾವುದೇ ಸೂಪರ್ ಸ್ಟಾರ್‌ಗಳಿಗೆ ಕಮ್ಮಿಯಿಲ್ಲದೆ ಬಾಲಿವುಡ್‌ನ್ನು ಆಳಿದವರು. ಅಮಿತಾಭ್ ಬಚ್ಚನ್ ಅವರಿಗೆ ಎಷ್ಟರಮಟ್ಟಿನ ವರ್ಚಸ್ಸಿತ್ತೋ ಅಷ್ಟೇ ವರ್ಚಸ್ಸು ಶ್ರೀದೇವಿಗಿತ್ತು. ದಕ್ಷಿಣ ಭಾರತದ ಶ್ರೇಷ್ಠ ನಟರಾದ ಕಮಲ್ ಹಾಸನ್ ಮತ್ತು ರಜನಿಕಾಂತ್ ಜೊತೆಗೆ ಶ್ರೀದೇವಿ ಹಲವು ಯಶಸ್ವೀ ಚಿತ್ರಗಳನ್ನು ನೀಡಿದ್ದರು. ಶ್ರೀದೇವಿಯಿಂದಲೇ ಚಿತ್ರ ಗೆಲ್ಲುತ್ತದೆ ಎನ್ನುವಂತಹ ನಂಬಿಕೆ ಹುಟ್ಟಿಕೊಂಡಿತ್ತು. ಸಿನೆಮಾದಲ್ಲಿ ಹೀರೋಗಳಿಗೆ ಹೋಲಿಸಿದರೆ ಹಿರೋಯಿನ್‌ಗಳು ಎರಡನೇ ದರ್ಜೆಯ ಕಲಾವಿದರು.

ನಾಯಕರಿಗೆ ನೀಡುವ ಸಂಭಾವನೆ ನಾಯಕಿಯರಿಗೆ ದೊರಕುವುದಿಲ್ಲ. ಸಿನಿಮೋದ್ಯಮದ ಈ ಮನಸ್ಥಿತಿಯನ್ನು ಬದಲಿಸಿದ್ದು ಶ್ರೀದೇವಿ. ಯಾವುದೇ ಸೂಪರ್ ಸ್ಟಾರ್‌ಗಳಿಗೆ ಕಡಿಮೆಯಿಲ್ಲದಂತೆ ಅವರು ಸಂಭಾವನೆಗಳನ್ನು ಗಿಟ್ಟಿಸಿಕೊಂಡರು. ಇದು ಎಷ್ಟರಮಟ್ಟಿಗೆ ಹೋಯಿತು ಎಂದರೆ, ಕೆಲವು ಖ್ಯಾತ ನಟರು ಶ್ರೀದೇವಿಯ ಜೊತೆಗೆ ನಟಿಸುವುದಕ್ಕೇ ಹಿಂಜರಿಕೆ ತೋರಿಸುತ್ತಿದ್ದರು. ಕೀಳರಿಮೆ ತಾಳುತ್ತಿದ್ದರು. ಆಕೆ ನಟಿಸಿದ ಸಿನಿಮಾದಲ್ಲಿ ನಾಯಕ ಬದಿಗೆ ಸರಿಯುತ್ತಾನೆ ಎನ್ನುವುದೇ ಅವರ ಆತಂಕವಾಗಿತ್ತು. ಇದಕ್ಕೆ ಅತ್ಯುತ್ತಮ ಉದಾಹರಣೆ ‘ಮಿಸ್ಟರ್ ಇಂಡಿಯಾ’ ಚಿತ್ರ.

ಅನಿಲ್ ಕಪೂರ್ ನಾಯಕನಾಗಿದ್ದರೂ, ಮಿಂಚಿದ್ದು ಶ್ರೀದೇವಿ. ಆಕೆ ಆ ಚಿತ್ರದ ಮೂಲಕ ‘ಮಿಸ್ ಇಂಡಿಯಾ’ ಎಂದು ಗುರುತಿಸಲ್ಪಟ್ಟರು. ಇಷ್ಟೊಂದು ಎತ್ತರಕ್ಕೆ ಏರಿದ್ದ ಶ್ರೀದೇವಿಗೆ ನಿಧಾನಕ್ಕೆ ಒಂದೊಂದೇ ಅವಕಾಶಗಳು ಕೈ ತಪ್ಪುತ್ತಿದ್ದ ಹಾಗೆ ಅವರೂ ಆತಂಕಕ್ಕೊಳಗಾಗಿದ್ದರು. ಮುಖದ ಮೇಲೆ ಒಂದೊಂದು ಸುಕ್ಕುಗಳು ಬಿದ್ದಂತೆಯೇ ಅವರು ಖಿನ್ನರಾಗುತ್ತಾ ಹೋದರು. ಆದರೆ ಅವೆಲ್ಲವನ್ನೂ ಅವರು ಸರಿದೂಗಿಸಿಕೊಂಡದ್ದು ಬೋನಿಕಪೂರ್ ಅವರನ್ನು ವರಿಸುವ ಮೂಲಕ.

ಅವರು ಆ ನಿರ್ಧಾರವನ್ನು ಆ ಸಂದರ್ಭದಲ್ಲಿ ತೆಗೆದುಕೊಳ್ಳದೇ ಇದ್ದಿದ್ದರೆ ಇನ್ನಷ್ಟು ಪತನಕ್ಕೆ ಜಾರುವ ಸಾಧ್ಯತೆಗಳಿದ್ದವು. ಇದೇ ಸಂದರ್ಭದಲ್ಲಿ ಕಲೆಗೂ ವಯಸ್ಸಿಗೂ ಸಂಬಂಧವಿಲ್ಲ ಎನ್ನುವುದನ್ನೂ ಶ್ರೀದೇವಿ ಸಾಧಿಸಿ ತೋರಿಸಿದರು. ‘ಇಂಗ್ಲಿಷ್ ವಿಂಗ್ಲಿಷ್’ ಮೂಲಕ ಮತ್ತೆ ಬಾಲಿವುಡ್‌ಗೆ ಕಾಲಿಟ್ಟರು. ತನ್ನ ಅಪ್ಪಟ್ಟ ಪ್ರತಿಭೆಯ ಮೂಲಕವೇ ಸುದ್ದಿಯಾದರು. ಇದಾದ ಬಳಿಕ ಅವರು ನಟಿಸಿದ ‘ಮಾಮ್’ ಚಿತ್ರದಲ್ಲೂ ಅವರು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಅವರು ಅಭಿನಯಿಸಿದ ಕೊನೆಯ ಎರಡೂ ಚಿತ್ರಗಳು ಬಾಲಿವುಡ್‌ನಲ್ಲಿ ಯಶಸ್ವಿಯಾಗಿರುವುದು ಅವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ.

ಶ್ರೀದೇವಿಯ ಬದುಕಿನ ಮೂಲಕ ಸಿನೆಮಾರಂಗದ ತಾರೆಯರಿಗೆ ಕಲಿಯಲು ಸಾಕಷ್ಟು ಪಾಠಗಳಿವೆ. ಹೆಜ್ಜೆ ಸಣ್ಣದಾಗಿ ಜಾರಿದರೂ ದುರಂತದ ಬಾತ್‌ಟಬ್‌ನೊಳಗೆ ಬೀಳಬೇಕಾಗುತ್ತದೆ. ಒಂದು ಸಣ್ಣ ತಪ್ಪು ಹೆಜ್ಜೆಗೆ ತೆರಬೇಕಾದ ದುಬಾರಿ ಬೆಲೆಯೆಷ್ಟು ಎನ್ನುವುದನ್ನು ಅವರ ಸಾವು ಸಿನೆಮಾಮಂದಿಗೆ ಸಾರಿ ಹೇಳುತ್ತಿದೆ.

ಅದೇನೇ ಇರಲಿ, ಶ್ರೀದೇವಿಯ ಸಾವು ಕೊಲೆಯಲ್ಲ, ಆತ್ಮಹತ್ಯೆಯೂ ಅಲ್ಲ ಎಂದು ಪೊಲೀಸರ ತನಿಖೆಯಿಂದ ಸಾಬೀತಾಗಿರುವುದು ಸಮಾಧಾನ ತರುವ ವಿಷಯ. ಮಾಧ್ಯಮಗಳು ಇನ್ನಾದರೂ ಶ್ರೀದೇವಿಯನ್ನು ಮರೆತು, ಸಮಾಜದ ಇನ್ನಿತರ ದುರಂತಗಳ ಕಡೆಗೆ ಕಣ್ಣಾಯಿಸಬೇಕು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English