ಮಂಗಳೂರು: ಪುತ್ತೂರು ಸಮೀಪದ ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡಮಿ ಸಂಸ್ಥೆಯಲ್ಲಿ ಫೆ.3ರಂದು ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಸಚಿವ ಯು.ಟಿ.ಖಾದರ್ ಅವಹೇಳನಕಾರಿ ಪದ ಬಳಕೆ ಮಾಡಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅದೇ ಭಾಷಣದಲ್ಲಿ ಖಾದರ್ ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯಲು ಹೋಗುವವರನ್ನು ಅವಮಾನಿಸಿದ್ದಾರೆ ಎಂಬ ದೂರು ವ್ಯಾಪಕವಾಗಿ ಕೇಳಿ ಬಂದಿದೆ.
ಈ ಬಗ್ಗೆ ಕಳೆದ ಮೂರು ದಿನದಿಂದ ಸಚಿವ ಖಾದರ್ ಪರ ಮತ್ತು ವಿರೋಧವಾಗಿ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಹಾಗೂ ಆಡಿಯೊ ಹರಿದಾಡುತ್ತಿವೆ.
ಹಿರಿಯ ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರು ಪಾಲ್ಗೊಂಡಿದ್ದ ಈ ಸಭೆಯಲ್ಲಿ ಮಾತನಾಡಿದ್ದ ಸಚಿವ ಖಾದರ್ ಈಗ ಮನುಷ್ಯರ ಕಾಲ ಅಲ್ಲ, ತಂತ್ರಜ್ಞಾನದ ಕಾಲ. ಸಚಿವ ರಮಾನಾಥ ರೈ, ಖಾದರ್ ಹೇಳಿದ್ದನ್ನು ನಂಬಬೇಕೋ ಬೇಡವೋ ಎಂದು ಸಂಶಯಿಸುವ ಕಾಲ. ವಾಟ್ಸ್‌ಆ್ಯಪ್, ಫೇಸ್‌ಬುಕ್ ನಲ್ಲಿ ಬಂದುದನ್ನು ಪರಾಮರ್ಶಿಸದೆ ಇತರರಿಗೆ ಕಳುಹಿಸುವ ಕಾಲ. ನಮ್ಮ ಅರ್ಧ ಆಯಸ್ಸು ಅದರಲ್ಲೇ ಮುಗಿಯುತ್ತದೆ. ಈಗಿನ ಕೆಲವು ಯುವಕರ ಸ್ಟೈಲ್ ತರಾತುರಿ ನೋಡುವಾಗ ಅವರು ಎಲ್ಲಿಗೆ ಹೋಗುವುದು ಎಂದು ಸ್ವತಃ ಅವರಿಗೇ ಗೊತ್ತಿರಲಿಕ್ಕಿಲ್ಲ.
ಅಷ್ಟೊಂದು ಅರ್ಜೆಂಟ್‌ನಲ್ಲಿರುತ್ತಾರೆ ಎನ್ನುತ್ತಲೇ, ನಮಗೆ ಇಂದು ಇಂತಹ ಬಹಿರಂಗವಾಗಿ ನಡೆಯುವ ಕಾರ್ಯಕ್ರಮ ಅಗತ್ಯವಿದೆ. ಎಲ್ಲೋ ಕತ್ತಲಲ್ಲಿ, ಗುಡ್ಡೆಯಲ್ಲಿ ಲೈಟ್ ಆಫ್ ಮಾಡಿ, ಬಾಡಿಗಾರ್ಡ್‌ಗಳನ್ನು ನಿಲ್ಲಿಸಿ ಸಭೆ ಮಾಡುವ ಅಗತ್ಯವಿಲ್ಲ. ಇಂತಹವರಿಗೆ ನೀವು ಬೆಂಬಲ ಕೊಡಬೇಡಿ, ಉಲೆಮಾಗಳ ಬೆಂಬಲವೂ ಅವರಿಗಿಲ್ಲ ಎಂದರಲ್ಲದೆ, ಡೋಂಗಿ ಮಾಡಿ ಗಲ್ಫ್‌ಗೆ ಹೋದ ಲೋ….ಗಳಿಂದ ನಾನು ಪಾಠ ಕಲಿಯಬೇಕಿಲ್ಲ’ ಎಂದಿದ್ದರು.
ಸಚಿವರ ಈ ಹೇಳಿಕೆಯು ಇದೀಗ ವೈರಲ್ ಆಗಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ವಾಟ್ಸ್ಆ್ಯಪ್, ಫೇಸ್ ಬುಕ್ ಗಳ ಮೂಲಕ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಉಲೆಮಾಗಳು ಹಾಜರಿದ್ದ ಧಾರ್ಮಿಕ ಸಭೆಯಲ್ಲಿ ಸಚಿವರು ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂಬ ಮಾತುಗಳೂ ವ್ಯಕ್ತವಾಗಿದೆ. ಇನ್ನು ಕೆಲವು ಕಡೆ ಸಚಿವ ಖಾದರ್ ಪರ ಅಲ್ಲಲ್ಲಿ ಹಾಕಲಾದ ಬ್ಯಾನರ್-ಹೋರ್ಡಿಂಗ್‌ಗಳನ್ನು ಹರಿದು ಹಾಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾವು ಗಲ್ಫ್‌ಗೆ ಡೋಂಗಿ ಮಾಡಿ ಬಂದಿಲ್ಲ, ನಾವಿಲ್ಲಿ ಬಂದು ಮೈಮುರಿದು ದುಡಿದು, ನಮ್ಮ ಸಹೋದರಿಯರ ಮದುವೆ ಮಾಡಿಸಿದ್ದೇವೆ, ಮನೆ ಕಟ್ಟಿಸಿದ್ದೇವೆ, ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದೇವೆ. ನಿಮ್ಮ ಹಾಗೆ ಹಣ ಲೂಟಿ ಮಾಡಿ ಇಲ್ಲಿಗೆ ಬಂದು ಹಾಕಿಲ್ಲ. ನೀವು ತಿಂಗಳಿಗೊಮ್ಮೆ ಇಲ್ಲಿಗೆ ಯಾಕೆ ಬರುತ್ತಿದ್ದೀರಿ ಎಂದೆಲ್ಲಾ ವಾಟ್ಸ್‌ಆ್ಯಪ್ ಸಂದೇಶ ರವಾನಿಸುವ ಮೂಲಕ ಸಚಿವ ಖಾದರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲೇ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
ತನ್ಮ್ಯೆ ಖಾದರ್ ಪರವೂ ಕೆಲವರು ಬ್ಯಾಟಿಂಗ್ ಮಾಡಿದ್ದು, ಅದೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಒಟ್ಟಿನಲ್ಲಿ ಕಳೆದ ಮೂರು ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಖಾದರ್ ಪರ ಮತ್ತು ವಿರೋಧದ ಸಂದೇಶ ರವಾನೆಯಾಗುತ್ತಿದೆ.
Click this button or press Ctrl+G to toggle between Kannada and English