ಮೂಡುಬಿದಿರ: ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪರಿಸರ ಪ್ರವಾಸೋದ್ಯಮದ ಪ್ರಗತಿಗೆ ವಿಫುಲ ಅವಕಾಶಗಳಿವೆ. ಆದರೆ ಈ ಅವಕಾಶಗಳಿಗೆ ಇನ್ನೂ ಹೆಚ್ಚಿನ ಪ್ರಚಾರ ಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯ ಪ್ರವೃತ್ತವಾದರೆ ಸರ್ಕಾರಕ್ಕೆ ಹೇರಳ ಆದಾಯ ಬರುವುದರ ಜೊತೆಗೆ ಸ್ಥಳೀಯರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತದೆ ಎಂದು ನಿಟ್ಟೆ ಉದ್ಯಮಾಡಳಿತ ಸಂಸ್ಥೆಯ ಪ್ರಾಧ್ಯಾಪಕಿ ಡಾ.ಕೆ.ಪಿ.ಸಂಧ್ಯಾ ರಾವ್ ಹೇಳಿದರು.
ಇಲ್ಲಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದಲ್ಲಿ ಅವರು ಬುಧವಾರ ವಿಶೇಷ ಉಪನ್ಯಾಸ ನೀಡಿದರು.
ಪರಿಸರ ಪ್ರವಾಸದಲ್ಲಿ ಆಸಕ್ತಿಯುಳ್ಳವರು ಇತರ ಪ್ರವಾಸಿಗಳಿಗಿಂತ ಭಿನ್ನರಾಗಿರುತ್ತಾರೆ. ಅವರು ನಿಸರ್ಗ ಸೌಂದರ್ಯವನ್ನು ಕಾಪಾಡಿಕೊಳ್ಳುತ್ತಾರೆ. ಕರಾವಳಿ ಕರ್ನಾಟಕಕ್ಕೆ ಇಂತಹ ಪ್ರವಾಸಿಗಳು ಬರುವಂತಾದರೆ ಮುಂದಿನ ದಿನಗಳಲ್ಲಿ ಈ ಪ್ರದೇಶದ ಒಟ್ಟಾರೆ ಪ್ರಗತಿಗೆ ಬೇಕಾದ ವಾತಾವರಣ ಸೃಷ್ಟಿಯಾಗಲಿದೆ.
ಈ ಪ್ರವಾಸೋದ್ಯಮವನ್ನು ಬೆಳೆಸಲು ಸರ್ಕಾರ ವಿಶೇಷ ಖರ್ಚು ಮಾಡಬೇಕಾದ ಅಗತ್ಯವಿಲ್ಲ. ಸಾಮಾನ್ಯ ಮೂಲ ಸೌಕರ್ಯಗಳನ್ನು ಸೃಷ್ಟಿಸಿದರೆ ಸಾಕು ಎಂದು ಅವರು ತಿಳಿಸಿದರು.
ಸಂಧ್ಯಾ ರಾವ್ ಅವರ ಪಿ.ಎಚ್.ಡಿ. ಮಾರ್ಗದರ್ಶಕ ಡಾ.ಜಿ.ವಿ.ಜೋಶಿ ಮಾತನಾಡಿ, ಸಂಧ್ಯಾ ರಾವ್ ಅವರ ಪ್ರಬಂಧದಲ್ಲಿ ಸರ್ಕಾರಕ್ಕೆ ಬೇಕಾದ ಎಷ್ಟೋ ಸಲಹೆಗಳಿವೆ. ಪಿ.ಎಚ್.ಡಿ ಅಧ್ಯಯನಗಳಲ್ಲಿ ಇರುವ ಧನಾತ್ಮಕ ಸಲಹೆಗಳನ್ನು ಆಧುನಿಕ ತಂತ್ರಜ್ಞಾನದ ಯುಗದಲ್ಲೂ ಸರ್ಕಾರಕ್ಕೆ ಸುಲಭವಾಗಿ ತಲುಪಿಸುವ ಆಡಳಿತ ವ್ಯವಸ್ಥೆ ಇಲ್ಲದಿರುವುದು ದೊಡ್ಡ ನ್ಯೂನತೆ ಎಂದು ಅಭಿಪ್ರಾಯಿಸಿದರು.
ಎಂಬಿಎ ವಿಭಾಗದ ಡೀನ್ ಪ್ರೊ.ಪಿ.ರಾಮಕೃಷ್ಣ ಚಡಗ ಅಧ್ಯಕ್ಷತೆ ವಹಿಸಿದ್ದರು. ಕಅರ್ಪಿತಾ ಕಾರ್ಯಕ್ರಮ ನಿರ್ವಹಿಸಿದರು. ಡಾ.ನಾಗೇಂದ್ರ ಸಾಣೂರು ಮತ್ತು ಪ್ರೊ.ಗುರುದತ್ ಸೋಮಯಾಜಿ ಕಾರ್ಯಕ್ರಮ ಸಂಯೋಜಿಸಿದ್ದರು.
Click this button or press Ctrl+G to toggle between Kannada and English