ಮಂಗಳೂರು: ತಾರಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕರು ಸಿಡಿಸಿದ ಹಾಸ್ಯ ಚಟಾಕಿಯೊಂದು ಗಂಭೀರ ರೂಪ ತಾಳಿ ಶಾಸಕದ್ವಯರಾದ ಅಭಯಚಂದ್ರ ಜೈನ್ ಹಾಗೂ ಮೊಯ್ದಿನ್ ಬಾವ ನಡುವೆ ತಳ್ಳಾಟ, ಚೀರಾಟ ನಡೆಯಿತು.
ಪಿಲಿಕುಳದಲ್ಲಿ ತಾರಾಲಯ ವೀಕ್ಷಣೆಗೂ ಮುನ್ನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎಂ.ಆರ್. ಸೀತಾರಾಂ ಅವರನ್ನು ಮಾತಿಗೆಳೆದ ಶಾಸಕ ಮೊಯ್ದಿನ್ ಬಾವ, ಮೇಯರ್ ಕವಿತಾ ಅವರ ಅಧಿಕಾರವಧಿ ಮುಗಿಯುತ್ತಾ ಬಂತು ಎಂದರು. ಅದಕ್ಕೆ ಪ್ರತಿಯಾಗಿ ಸಚಿವರು, ಹಾಗಂತ ಅವರನ್ನು ಸುಮ್ಮನೆ ಇರಲು ಬಿಡಬೇಡಿ. ಏನಾದರೂ ಅವಕಾಶ ಕಲ್ಪಿಸಿಕೊಡಿ. ನಾವೆಲ್ಲಾ ಬೆಂಬಲಿಸೋಣ ಎಂದರು.
ಅದಕ್ಕೆ ಶಾಸಕ ಬಾವ, ಕವಿತಾ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದಾರೆ ಎಂದರು. ಇದನ್ನು ಕೇಳಿಸಿಕೊಂಡ ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್ ಕೆಂಡಾಮಂಡಲವಾದರು.
`ಮೂಡಬಿದ್ರೆಯೇನು ನಿಮ್ಮ ಅಪ್ಪನದ್ದೇ. ಅಣ್ಣ-ತಮ್ಮ (ಮೊಯ್ದಿನ್ ಬಾವ-ಫಾರೂಕ್) ಈಗ ಜೆಡಿಎಸ್‌ನ್ನು ಬೆಂಬಲಿಸುತ್ತಿದ್ದೀರಿ. ಮುಂದೆ ಬಿಜೆಪಿಗೆ ಹೋದರೂ ಸಂಶಯವಿಲ್ಲ’ ಎಂದರು.
ಇದರಿಂದ ಕೋಪಗೊಂಡ ಮೊಯ್ದಿನ್ ಬಾವ ಕೂಡಾ ಜಗಳಕ್ಕೆ ನಿಂತರು. ಮಾತಿಗೆ ಮಾತು ಬೆಳೆದು, ಪರಸ್ಪರ ತಳ್ಳಾಟದವರೆಗೆ ಸಾಗಿತು. ಕೊನೆಗೆ ಇಬ್ಬರು ಶಾಸಕರನ್ನ ಬೆಂಬಲಿಗರು ಸಮಾಧಾನಗೊಳಿಸಿ ಪರಿಸ್ಥಿತಿ ತಿಳಿಗೊಳಿಸಿದರು.
Click this button or press Ctrl+G to toggle between Kannada and English