ಮಂಗಳೂರು: ಸರ್ಕಾರಿ ಸಮಾರಂಭ ಹಮ್ಮಿಕೊಂಡು ರಾಜಕೀಯ ಉದ್ದೇಶಕ್ಕೆ ಬಳಸುವ ರಾಜಕೀಯ ನಾಯಕರ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ನೀಡುವಂತೆ ಸಾಮಾಜಿಕ ಕಾರ್ಯಕರ್ತ ಶಶಿಧರ ಶೆಟ್ಟಿ ರಾಜ್ಯಪಾಲರನ್ನು ವಿನಂತಿಸಿ, ದಾಖಲೆ ಪತ್ರಗಳನ್ನು ನೀಡಿದ್ದಾರೆ.
ಕಳೆದ ವರ್ಷ ಅ. 22ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಸರ್ಕಾರಿ ಸಮಾರಂಭ ಹಮ್ಮಿಕೊಂಡು ಆ ಸಮಾರಂಭವನ್ನು ಪಕ್ಷದ ಉದ್ದೇಶಕ್ಕೆ ಬಳಸಿದ್ದರು ಎಂದು ಆರೋಪಿಸಲಾಗಿದೆ. ಈ ಬಗ್ಗೆ ಸಿಆರ್‌ಪಿಸಿ ಸೆಕ್ಷನ್ 197ರ ಅಡಿಯಲ್ಲಿ ಸ್ವಯಂ ಆಗಿ ಕೇಸು ದಾಖಲಿಸಬೇಕು. ಇಲ್ಲವೇ ತನಗೆ ಕೇಸು ದಾಖಲಿಸಲು ಅನುಮತಿ ನೀಡಬೇಕೆಂದು ಶಶಿಧರ ಶೆಟ್ಟಿ ಕೋರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಶಿಧರ ಶೆಟ್ಟಿ, ಪ್ರಕರಣ ದಾಖಲಿಸಲು ರಾಜ್ಯಪಾಲರು ಅನುಮತಿ ನೀಡಿದರೆ, ಅಧಿಕಾರ ದುರುಪಯೋಗಪಡಿಸಿದ ಆರೋಪದಡಿ ಮುಖ್ಯಮಂತ್ರಿ ಸಮೇತ ಸಚಿವರಾದ ಡಿ.ಕೆ.ಶಿವಕುಮಾರ್, ರಮಾನಾಥ ರೈ ಹಾಗೂ ಯು.ಟಿ.ಖಾದರ್ ಅವರ ವಿರುದ್ಧ ನ್ಯಾಯಾಲಯದಲ್ಲಿ ಕೇಸು ದಾಖಲಾಗಲಿದೆ. ಇದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಇವರಿಗೆ ಕಂಟಕವಾಗಲಿದೆ ಎಂದರು.
ಮುಖ್ಯಮಂತ್ರಿ ಭೇಟಿಯ ವೇಳೆ ಪ್ರತಿ ಸರ್ಕಾರಿ ಕಾರ್ಯಕ್ರಮಗಳಲ್ಲೂ ಸರ್ಕಾರದ ಸಾಧನೆಯನ್ನು ಹೇಳುವುದರ ಜೊತೆಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಿದ್ದರು. ಈ ಮೂಲಕ ಸರ್ಕಾರಿ ಸಮಾರಂಭವನ್ನು ರಾಜಕೀಯ ಉದ್ದೇಶಕ್ಕೆ ಬಳಸಿದ್ದಾರೆ ಎಂದು ಆರೋಪಿಸಿದರು.
ಸರ್ಕಾರಿ ಕಾರ್ಯಕ್ರಮಗಳ ಶಿಲಾನ್ಯಾಸ ಹಾಗೂ ಉದ್ಘಾಟನೆಗೆ ಆಯಾ ಇಲಾಖೆಗಳ ಅನುದಾನವನ್ನು ಬಳಸಿಕೊಳ್ಳಲಾಗಿದೆ. ಜನರ ತೆರಿಗೆ ಹಣದಿಂದ ನಡೆಸಿದ ಈ ಕಾರ್ಯಕ್ರಮದಲ್ಲಿ ಜವಾಬ್ದಾರಿಯುತ ಜನಪ್ರತಿನಿಧಿಗಳು ರಾಜಕೀಯ ಭಾಷಣ ಮಾಡಿದ್ದಾರೆ. ತಮ್ಮ ಪಕ್ಷವನ್ನು ಹೊಗಳಿದ್ದಲ್ಲದೆ, ಇನ್ನೊಂದು ಪಕ್ಷವನ್ನು ಟೀಕಿಸಲು ಈ ವೇದಿಕೆಯನ್ನು ಬಳಸಿಕೊಂಡಿದ್ದಾರೆ. ಇದರ ವಿವರವನ್ನು ಮಾಹಿತಿ ಹಕ್ಕಿನಡಿ ಪಡೆದುಕೊಂಡಿದ್ದು, ಒಂದು ದಿನದ ಕಾರ್ಯಕ್ರಮಕ್ಕೆ ಸುಮಾರು 65 ಲಕ್ಷ ರೂ. ವಿನಿಯೋಗಿಸಲಾಗಿದೆ ಎಂದು ಆರೋಪಿಸಿದರು.
ಇದು ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷಗಳಿಗೆ ಹಾಗೂ ಅಧಿಕಾರಿಗಳಿಗೂ ಅನ್ವಯಿಸಲಿದೆ ಎಂದರು. ಮುಂದಿನ ದಿನಗಳಲ್ಲಿ ಯಾರೇ ಆಗಲಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ಕಂಡುಬಂದರೆ ದಾಖಲೆ ಸಮೇತ ಕ್ರಿಮಿನಲ್ ಕೇಸು ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
Click this button or press Ctrl+G to toggle between Kannada and English