ಮಂಗಳೂರು: ಅನಿವಾಸಿ ಕರಾವಳಿಗರನ್ನು ದೂಷಿಸಿಲ್ಲ ಎಂದು ಆಹಾರ ಸಚಿವ ಯು. ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಪುತ್ತೂರಿನಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ನನ್ನ ವಿರುದ್ಧ ಪಿತೂರಿ ನಡೆಸಿ ಈಗ ವಿದೇಶದಲ್ಲಿ ಇರುವವರಿಗೆ ನಾನು ಬೈದಿದ್ದೇನೆ. ಅದನ್ನು ಹೊರತುಪಡಿಸಿದರೆ ಬೇರೆ ಯಾರನ್ನು ಉದ್ದೇಶಿ ನಾನು ದೂಷಣೆ ಮಾಡಿಲ್ಲ ಎಂದು ತಿಳಿಸಿದರು.
ಇತ್ತೀಚೆಗೆ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಗಳು ನನ್ನ ಜೊತೆಗೆ ಇರುವ ಫೋಟೋ ಜಾಲತಾಣಗಳಲ್ಲಿ ವೈರಲ್ ಆಗಿರುವುದು ನಿಜ. ಆದರೆ, ಪ್ರಕರಣಕ್ಕೆ ಮೊದಲು ತೆಗೆಸಿಕೊಂಡ ಫೋಟೋ ಅದು. ಇನ್ನು ಮುಂದೆ ಯಾರೂ ಗಲಾಟೆ ಮಾಡಬೇಡಿ. ಗಲಾಟೆ ಮಾಡುವವರು ನನ್ನ ಬಳಿ ಫೋಟೋಗೆ ಪೋಸ್ ನೀಡಬೇಡಿ ಎಂದು ಮನವಿ ಮಾಡಿದರು.
ನಾನು ಸೇರಿದಂತೆ ಸಿಎಂ ಹಾಗೂ ಸಚಿವರ ವಿರುದ್ಧ ರಾಜ್ಯಪಾಲರಿಗೆ ತಡವಾಗಿ ದೂರು ನೀಡಿದ್ದು ಯಾಕೆ ಎಂದು ಪ್ರಶ್ನಿಸಿದ ಸಚಿವ ಖಾದರ್, ಸರ್ಕಾರಿ ಕಾರ್ಯಕ್ರಮದಲ್ಲಿ ಸಾಧನೆ ಹೇಳಿದರೆ ತಪ್ಪೇನು. ನಮ್ಮ ಯೋಜನೆಯನ್ನು ಮತ್ತೆ ಎಲ್ಲಿ ಹೇಳಬೇಕು? 6 ತಿಂಗಳ ಹಿಂದಿನ ಕಾರ್ಯಕ್ರಮದ ವಿರುದ್ಧ ಈಗ ದೂರು ನೀಡಿದ್ದು ಬಹಳ ವಿಳಂಬವಾಯಿತು ಎಂದರು.
ನಾಡದೋಣಿ ಮೀನುಗಾರರಿಗೆ ನೀಡುತ್ತಿದ್ದ ಸಬ್ಸಿಡಿ ಸೀಮೆಎಣ್ಣೆಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ ಕಾರಣ ರಾಜ್ಯ ಸರ್ಕಾರವೇ ಇದನ್ನು ಮುಂದುವರಿಸಲಿದೆ. ಈವರೆಗೆ ಕೇಂದ್ರ ಸರ್ಕಾರ ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆಯನ್ನು ಪೂರೈಸುತ್ತಿತ್ತು. ಆದರೆ ಮೂರು ತಿಂಗಳ ಹಿಂದೆ ಸೀಮೆಎಣ್ಣೆಯನ್ನು ಅಡುಗೆಯ ಉದ್ದೇಶಕ್ಕೆ ಮಾತ್ರ ಬಳಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದರಿಂದಾಗಿ ಈಗ ಮೀನುಗಾರರಿಗೆ ಸಬ್ಸಿಡಿ ಸೀಮೆಎಣ್ಣೆ ಸಿಗುತ್ತಿಲ್ಲ.
ಮೀನುಗಾರರಿಗೆ ವಿನಾಯ್ತಿ ನೀಡುವಂತೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಆದರೆ ವಿನಾಯ್ತಿ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಆದ್ದರಿಂದ ರಾಜ್ಯ ಸರ್ಕಾರವೇ ಮುಕ್ತ ಮಾರುಕಟ್ಟೆಯಲ್ಲಿ ಸೀಮೆಎಣ್ಣೆಯನ್ನು ಖರೀದಿಸಿ ಸಬ್ಸಿಡಿ ದರದಲ್ಲಿ ಮೀನುಗಾರರಿಗೆ ನೀಡಲಿದೆ. ಸೀಮೆಎಣ್ಣೆ ಸಬ್ಸಿಡಿ ವಿಚಾರದಲ್ಲಿ ಪ್ರತಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ ಎಂದರು.
Click this button or press Ctrl+G to toggle between Kannada and English