ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆದ 10ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ತೆರೆ ಬಿದ್ದಿದೆ. ಕಳೆದ 7 ದಿನಗಳಿಂದ 11 ವಿವಿಧ ಚಿತ್ರಮಂದಿರಗಳಲ್ಲಿ 50 ದೇಶದ 200ಕ್ಕೂ ಹೆಚ್ಚುಗಳು ಪ್ರದರ್ಶನಗೊಂಡ ಸಿನಿಮಾ ಹಬ್ಬಕ್ಕೆ ಗುರುವಾರ ತೆರೆ ಎಳೆಯಲಾಯಿತು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಿನಿಮೋತ್ಸವದ ಸಮಾರಂಭ ನಡೆಸಲಾಯಿತು. ರಾಜ್ಯಪಾಲ ವಜೂಭಾಯ್ ವಾಲಾ, ಸಿಎಂ ಸಿದ್ದರಾಮಯ್ಯ, ನಿರ್ದೇಶಕ ಮಣಿರತ್ನಂ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಚ್, ಮೇಯರ್ ಸಂಪತ್ ರಾಜ್ ನಾಗಾಭರಣ, ಸುಮಲತಾ ಅಂಬರೀಶ್, ಭಾರತಿ ವಿಷ್ಣುವರ್ಧನ್, ಹಿರಿಯ ನಿರ್ದೇಶಕ ದೊರೆ-ಭಗವಾನ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಸೇರಿದಂತೆ ಹಲವರು ಭಾಗಿಯಾಗಿದ್ದರು. ಸಮಾರೋಪ ಸಮಾರಂಭದ ಆರಂಭದಲ್ಲಿ ಆಗಲಿದ ನಟಿ ಶ್ರೀದೇವಿಗೆ ಸಂತಾಪ ಸೂಚಿಸಲಾಯಿತು.
ನಂತರ ಸಿನಿಮೋತ್ಸವದಲ್ಲಿ ಅತ್ಯುತ್ತಮ ಚಿತ್ರಕ್ಕೆ ಪ್ರಶಸ್ತಿ ಪ್ರದಾನಿಸಲಾಯಿತು. ಕನ್ನಡ ವಿಭಾಗದ ಮೂರು ಸಿನಿಮಾಗಳಿಗೆ ಪ್ರಶಸ್ತಿ ಪ್ರಕಟಿಸಲಾಯಿತು. ಮೊದಲ ಅತ್ಯುತ್ತಮ ಚಿತ್ರ ನಿಖಿಲ್ ಮಂಜು ನಿರ್ದೇಶನದ ರಿಸರ್ವೇಷನ್, ಎರಡನೇ ಅತ್ಯುತ್ತಮ ಚಿತ್ರ ಶಿವರುದ್ರಯ್ಯ ನಿರ್ದೇಶನದ ‘ಮೂಡಲ ಸೀಮೆಯಲ್ಲಿ’ ಹಾಗೂ ಮೂರನೇ ಚಿತ್ರ ನಾಗಾಭರಣ ನಿರ್ದೇಶನದ ‘ಅಲ್ಲಮ’ ಪ್ರಶಸ್ತಿ ಪಡೆದವು.
ಇಂಗ್ಲೀಷ್‌ನ “ಎಕ್ಸ್ ಕವೇಜ್” ಚಿತ್ರಕ್ಕೆ ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿ. ಅತ್ಯುತ್ತಮ ವಿಮರ್ಶಾತ್ಮಕ ಸಿನಿಮಾ ತಮಿಳಿನ ” ಟು ಲೆಟ್” ಕನ್ನಡದಲ್ಲಿ ಬ್ಲಾಕ್ ಬಾಸ್ಟರ್ ಸಿನಿಮಾ “ಭರ್ಜರಿ”. ನಿರ್ದೇಶಕ ಚೇತನ್ ಕುಮಾರ್, ನಿರ್ಮಾಪಕ ಆರ್.ಎಸ್.ಶ್ರೀನಿವಾಸ್. ಕನ್ನಡದ ಅತ್ಯುತ್ತಮ ಮನೋರಂಜನಾ ಚಿತ್ರ “ರಾಜಕುಮಾರ “. ನಿರ್ದೇಶಕ ಸಂತೋಷ್ ಆನಂದರಾಮ್, ನಿರ್ಮಾಪಕ ವಿಜಯ ಕಿರಂಗದೂರು. ಚಿತ್ರರಂಗದಲ್ಲಿನ ಸಾಧನೆಗಾಗಿ ಶ್ರೇಷ್ಠ ಜೀವಮಾನ ಪ್ರಶಸ್ತಿ “ಮಣಿರತ್ನಂ” ಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಈ ವೇಳೆ ಮಾತನಾಡಿದ ರಾಜ್ಯಪಾಲ ವಜುಭಾಯ್ ವಾಲಾ, ಅಂತಾರಾಷ್ಟ್ರೀಯ ಸಿನಿಮೋತ್ಸವ ಕಾರ್ಯಕ್ರಮ ಮಾಡುವ ಏಕೈಕ ರಾಜ್ಯ ಕರ್ನಾಟಕ, ಸಿನಿಮಾ ಮನೋರಂಜನೆಯಾಗಿ ಉಳಿದಿಲ್ಲ. ಬದುಕನ್ನು ಪರಿವರ್ತಿಸುವಂತಹ ಮಾಧ್ಯಮವಾಗಿದೆ. ಉತ್ತಮ ಚಿತ್ರ, ಮನುಷ್ಯನ ಕೆಟ್ಟ ಗುಣವನ್ನು ಕಳೆಯುತ್ತೆ. ಉತ್ತಮ ಬದುಕಿಗೆ ಸಾಹಿತ್ಯ ಹಾಗೂ ಸಿನಿಮಾ ಬಹು ಮುಖ್ಯ. ಎಲ್ಲ ರಾಜ್ಯಗಳು ಸಿನಿಮಾದ ಮೇಲಿರುವ ಮನೋರಂಜನಾ ಟ್ಯಾಕ್ಸ್ ತೆಗೆಯಬೇಕು. ಇದರಿಂದ ಕಡಿಮೆ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗತ್ತೆ. ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಸಿನಿಮಾ ನೋಡಲು ಸಾಧ್ಯವಾಗತ್ತೆ. ಸಿಎಂ ಸಿದ್ದರಾಮಯ್ಯ ಮೊದಲು ಈ ಕೆಲಸ ಮಾಡಬೇಕು. ಆಗ ಎಲ್ಲ ರಾಜ್ಯಗಳು ಮನೋರಂಜನಾ ತೆರಿಗೆ ತೆಗೆಯಲೇಬೇಕಾದ ಪರಿಸ್ಥಿತಿ ಬರತ್ತೆ. ಜನರು ಥೀಯೇಟರ್‌ಗೆ ಹೋಗಿಯೇ ಸಿನಿಮಾ ನೋಡಬೇಕು. ಇದು ಕಲಾಕಾರರನ್ನ ಪ್ರೋತ್ಸಾಹಿಸಿದಂತೆ ಆಗುತ್ತದೆ ಎಂದರು.
ಪ್ರಶಸ್ತಿ ಪ್ರದಾನ ಮಾಡಿದ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ,ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಯಾವುದೇ ಭಾಷೆಯ ಚಿತ್ರವನ್ನ ಬೆಂಬಲಿಸಬೇಕು ಎಷ್ಟು ಸಿನಿಮಾ ನಿರ್ಮಾಣ ಮಾಡಿದರು ಅನ್ನೋದು ಮುಖ್ಯ ಅಲ್ಲ ಎಷ್ಟು ಗುಣಮಟ್ಟದ ಚಿತ್ರ ನಿರ್ಮಾಣ ಮಾಡಿದರು ಅನ್ನೋದು ಮುಖ್ಯ ಕನ್ನಡ ಚಿತ್ರರಂಗದ ಎಲ್ಲ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದೆ. ಇನ್ನೂ ಯಾವುದೂ ಬಾಕಿ ಉಳಿದಿಲ್ಲ ಎಂದರು.
ನಮ್ಮ ಸರ್ಕಾರ ಬಂದ ಮೇಲೆ ಚಿತ್ರರಂಗಕ್ಕೆ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದೇವೆ. ಕನ್ನಡ ಚಿತ್ರರಂಗ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕೆಂಬುದು ನನ್ನ ಆಶಯ. ಹೀಗಾಗಿ ನಾನು ಯಾವಾಗಲೂ ಚಿತ್ರರಂಗದವರಿಗೆ ಒಂದು ಮಾತನ್ನ ಹೇಳ್ತಾಯಿರುತ್ತೇನೆ. ನಾವು ಎಷ್ಟು ಚಿತ್ರ ನಿರ್ಮಾಣ ಮಾಡಿದ್ದೇವೆ ಎಂಬುದು ಮುಖ್ಯವಲ್ಲ. ಶ್ರೇಷ್ಠ ಗುಣಮಟ್ಟದ ಎಷ್ಟು ಚಿತ್ರಗಳನ್ನು ಕೊಟ್ಟಿದ್ದೇವೆ ಎಂಬುದು ಮುಖ್ಯ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದು ಅವರಿಗೆ ಬೇಡಿಕೆಗಳನ್ನು ಸಲ್ಲಿಸಿ ಎಲ್ಲವನ್ನೂ ಈಡೇರಿಸೋಣವೆಂದು ಹೇಳಿದರು.
ಸಿನಿಮೋತ್ಸವದ ಸಮಾರೋಪ ಸಮಾರಂಭದ ಭಾಷಣ ವೇಳೆ ಸಿಎಂ ಎಡವಟ್ಟು ಮಾಡಿದರು. ವೇದಿಕೆ ಮೇಲೆ ಗಣ್ಯರಿಗೆ ಸ್ವಾಗತ ಕೋರುವ ವೇಳೆ, ಮಣಿರತ್ನಂ ಹೆಸರಿನ ಬದಲು ಮುನಿರತ್ನ ಎಂದು ಉಲ್ಲೇಖಿಸಿದರು. ನೆರೆದಿದ್ದ ಸಭಿಕರಿಂದ ಸಿಎಂಗೆ ಮಣಿರತ್ನಂ ಎಂಬ ಕೂಗನ್ನು ಆಲಿಸದೇ ಮಣಿರತ್ನಂ ಎಂದು ಸಂಬೋಧಿಸಿ ಮಾತು ಮುಂದುವರೆಸಿದರು.
ನಿರ್ದೇಶಕ ಮಣಿರತ್ನಂ ಮಾತನಾಡಿ, ನಾನು ಮೊದಲ ಚಿತ್ರ ನಿರ್ದೇಶನ ಮಾಡಿದ್ದು, ಕನ್ನಡದ “ಪಲ್ಲವಿ-ಅನುಪಲ್ಲವಿ”. ಅಂದು ನಾನು ಚಿತ್ರೀಕರಣ ಮಾಡುವಾಗ ವಿಧಾನಸೌಧದ ಮುಂಭಾಗ ಚಿತ್ರೀಕರಿಸಿದ್ದೆ. ಇಂದು ಇಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿದ್ದೇನೆ. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನನ್ನ ಒಳ್ಳೆಯ ಸ್ನೇಹಿತ. ಇಂದು ಪ್ರಶಸ್ತಿ ಸ್ವೀಕರಿಸಿರುವುದು ಬಹಳ ಸಂತೋಷ ತಂದಿದೆ ಎಂದರು.
Click this button or press Ctrl+G to toggle between Kannada and English