ಅಂಗವೈಕಲ್ಯತೆ ದೇಹಕ್ಕೆ ಮನಸ್ಸಿಗಲ್ಲ… ಸ್ವಚ್ಛ ಭಾರತಕ್ಕೆ ಕೊಡುಗೆ ನೀಡುತ್ತಿರುವ ವಿಶೇಷಚೇತನ ಜಗನ್‌

3:35 PM, Saturday, March 3rd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

swaccha-bharatಮಂಗಳೂರು: ರಾಮಕೃಷ್ಣ ಮಿಷನ್ ಜಿಲ್ಲೆಯಲ್ಲಿ ಹಮ್ಮಿಕೊಳ್ಳುತ್ತಿರುವ ಸ್ವಚ್ಛ ಭಾರತ್ ಕಾರ್ಯಕ್ರಮ ಈಗಾಗಲೇ ಸಾವಿರಾರು ಮನಸ್ಸುಗಳನ್ನು ಜಾಗೃತಗೊಳಿಸಿವೆ.

ಜಾತಿ, ಧರ್ಮ ಮರೆತು ಶಿಕ್ಷಕರು, ವಿದ್ಯಾರ್ಥಿಗಳು, ಗೃಹಿಣಿಯರು, ಐಟಿ ಸಿಬಂದಿ, ರಿಕ್ಷಾ ಚಾಲಕರು, ಜನಸಾಮಾನ್ಯರು, ಅಷ್ಟೇ ಏಕೆ ಜಪಾನಿನ ಉದ್ಯಮಿಯೊಬ್ಬರು ಕೂಡಾ ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಭಾರತೀಯರಿಗೆ ಸ್ವಚ್ಛತೆಯ ಪಾಠ ಹೇಳಿದ್ದಾರೆ. ಇತ್ತೀಚೆಗೆ ಯುವಕನೊಬ್ಬ ಕಸಗಳನ್ನು ಎಲ್ಲೆಂದರಲ್ಲಿ ಬಿಸಾಕುವ ಕಚೇರಿಗೇ ಕಸಗಳನ್ನು ಸುರಿಯುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆಯ ಸುರಿಮಳೆಗೆ ಪಾತ್ರರಾಗಿದ್ದರು. ಹೀಗೆ ಮಠದ ಸ್ವಚ್ಛತಾ ಅಭಿಯಾನ ದೇಶವ್ಯಾಪಿ ಚರ್ಚೆಯಾಗುತ್ತಿದೆ.

ಇದೀಗ ಈ ಸ್ವಚ್ಛತಾ ಅಭಿಯಾನಕ್ಕೆ ಮತ್ತೊಂದು ಸೇರ್ಪಡೆ ಮಂಗಳೂರಿನ ಜಗನ್. ಇವರು ಕಳೆದ ಭಾನುವಾರ ರಾಮಕೃಷ್ಣ ಮಠ ಮಂಗಳೂರಿನಲ್ಲಿ ಹಮ್ಮಿಕೊಂಡ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.. ಇದರಲ್ಲೇನಿದೆ ವಿಶೇಷ ಅಂತ ಕೇಳ್ತೀರಾ? ಜಗನ್ ಹುಟ್ಟು ಅಂಗವೈಕಲ್ಯದಿಂದ ಬಳಲುತ್ತಿದ್ದಾರೆ. ಇತ್ತ ರಾಮಕೃಷ್ಣ ಮಿಷನ್ ಅವರ ಅಭಿಯಾನಕ್ಕೆ ಓಗೊಡದವರೇ ಇಲ್ಲ. ಹೀಗಾಗಿ ತನ್ನ ಅಂಗವೈಕಲ್ಯವನ್ನೂ ಮರೆತು ಜಗನ್ ಈ ಅಭಿಯಾನದಲ್ಲಿ ಧುಮುಕಿದ್ದಾರೆ. ತಮ್ಮ ಸುತ್ತಮುತ್ತ ಸ್ವಚ್ಛಗೊಳಿಸಲು ಮಾನಸಿಕವಾಗಿ ಸದೃಢರಾಗಿದ್ದರೆ ಸಾಕು ಎಂಬ ಸಂದೇಶವನ್ನು ಸಾರಿದ್ದಾರೆ.

ಮಂಗಳೂರಿನ ಬ್ಯಾಟರಿ ಅಂಗಡಿಯೊಂದರಲ್ಲಿ ನೌಕರಿ ಮಾಡುತ್ತಿರುವ ಜಗನ್, ಸರಿಯಾಗಿ ನಿಂತುಕೊಳ್ಳಲು ಕಷ್ಟಪಡುತ್ತಿದ್ದಾರೆ. ದಿನದ ಕಾರ್ಯಗಳಿಗೆ ಇವರು ಮೂರು ಗಾಲಿಗಳಿರುವ ವಾಹನದಲ್ಲಿ ಓಡಾಡುತ್ತಿದ್ದಾರೆ. ಹೀಗಿರುವಾಗಲೇ ಯಾವುದೇ ದೊಡ್ಡ ಮಟ್ಟದ ಪ್ರಚಾರ ಮಾಡದೆ ಪ್ರತೀ ವಾರ ಶ್ರದ್ಧೆಯಿಂದ ಅಭಿಯಾನವನ್ನು ಕೈಗೊಂಡಿರುವ ರಾಮಕೃಷ್ಣ ಮಠದ ಕಾರ್ಯಕ್ಕೆ ಜಗನ್ ಕೂಡಾ ಆಕರ್ಷಿತರಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಈ ಬಾರಿ ಅವರು ಅಭಿಯಾನದಲ್ಲಿ ಪಾಲ್ಗೊಂಡರು.

ಇವರ ಕಾರ್ಯತತ್ಪರತೆಯನ್ನು ಮೆಚ್ಚಿ ಸುಜಿತ್ ಎಂಬುವರು ತಮ್ಮ ಟ್ವಿಟ್ಟರ್‌ನಲ್ಲಿ ಹಾಕಿರುವ ಸಂದೇಶಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾಗಿರುವ ಡಿ. ವಿ. ಸದಾನಂದ ಗೌಡ ಕೂಡ ಈ ಸಂದೇಶವನ್ನು ರಿಟ್ವೀಟ್ ಮಾಡುವ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಮಂಗಳೂರಿನ ನೂರು ಶಾಲೆಗಳನ್ನು ಈಗಾಗಲೇ ಗುರುತಿಸಿಕೊಂಡಿರುವ ರಾಮಕೃಷ್ಣ ಮಠ, ಸ್ವಚ್ಛತಾ ಅಭಿಯಾನದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಸ್ವಚ್ಛ ಮನಸು ಎಂಬುದು ಕಾರ್ಯಕ್ರಮದ ಹೆಸರು. ಇಡೀ ಸ್ವಚ್ಛತಾ ಅಭಿಯಾನಕ್ಕೆ ಈ ಶಾಲೆಗಳ ವಿದ್ಯಾರ್ಥಿಗಳೇ ರಾಯಭಾರಿಗಳು. ಜೊತೆಗೆ ಪ್ರತೀ ದಿನ ನೂರು ಮನೆಗಳಂತೆ 300 ದಿನಗಳಲ್ಲಿ ಮೂರು ಸಾವಿರ ಮನೆಗಳಿಗೆ ಸ್ವಯಂಸೇವಕರು ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ.

ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನ ನೂರು ಗ್ರಾಮಗಳಲ್ಲಿ ಪ್ರತೀ ಭಾನುವಾರ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ಪ್ರತೀ ಪಂಚಾಯತ್ ಅಧ್ಯಕ್ಷರು ಹಾಗೂ ಪಿಡಿಒಗಳಿಗೆ ರಾಮಕೃಷ್ಣಾಶ್ರಮದಲ್ಲಿ ತರಬೇತಿಯನ್ನೂ ಕೈಗೊಳ್ಳಲಾಗಿತ್ತು. ಇದಲ್ಲದೆ ಪ್ರತೀ ಭಾನುವಾರ ನಗರ ಸ್ವಚ್ಛತಾ ಕಾರ್ಯಕ್ರಮದಡಿ, ಬಸ್ ನಿಲ್ದಾಣಗಳ ಸಣ್ಣಪುಟ್ಟ ರಿಪೇರಿ, ನಿರ್ವಹಣೆ, ಸಾರ್ವಜನಿಕ ಶೌಚಾಲಯಗಳ ರಿಪೇರಿ, ಶಾಲಾ ಕಟ್ಟಡಗಳ ನಿರ್ವಹಣೆಯತ್ತಲೂ ರಾಮಕೃಷ್ಣಮಠ ಗಮನಹರಿಸುತ್ತಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English