ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯರ ಅಕ್ರಮಗಳ ದಾಖಲೆಗಳನ್ನು ಶೀಘ್ರವೇ ಬಯಲುಗೊಳಿಸುವುದಾಗಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಕೇರಳ ತಳಿಪರಂಬ ರಾಜರಾಜೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ರೈಲು ಮೂಲಕ ಮಂಗಳೂರಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಮೊದಲು ಚಾರ್ಜ್‌ಶೀಟ್ ಮೊದಲು ಬಿಡುಗಡೆಗೊಳಿಸಲಿ. ಮುಖ್ಯಮಂತ್ರಿ ನಡೆಸಿದ ಅಕ್ರಮಗಳ ದಾಖಲೆ ನಮ್ಮ ಬಳಿಯೂ ಇದೆ. ಅದನ್ನು ನಾವು ಕೂಡಾ ಬಿಡುಗಡೆಗೊಳಿಸುತ್ತೇವೆ ಎಂದರು.
ಮುಖ್ಯಮಂತ್ರಿ ತಲೆ ತಿರುಕನಂತೆ ಮಾತನಾಡುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಮುಖ್ಯಮಂತ್ರಿ ಕೇಳುವ ಪ್ರಶ್ನೆಗೆ ಚುನಾವಣೆಯಲ್ಲಿ ರಾಜ್ಯದ ಜನತೆ ಸೂಕ್ತ ಉತ್ತರ ನೀಡಲಿದ್ದಾರೆ. ಮಣ್ಣಿನ ಮಕ್ಕಳು ಯಾರು ಎಂಬುದಕ್ಕಿಂತ ರೈತ ಪರವಾಗಿ ನಾವು ಹೋರಾಟ ಮಾಡಿದ್ದೇವೆ. ರೈತರ ಕಷ್ಟಗಳಿಗೆ ಸ್ಪಂದಿಸಿದ್ದೇವೆ. ರೈತರ ಪರವಾಗಿ ಹಲವಾರು ಯೋಜನೆಗಳನ್ನ ಜಾರಿಗೆ ತಂದಿದ್ದೇವೆ.
ತಾನು ಮುಖ್ಯಮಂತ್ರಿಯಾಗಿದ್ದಾಗ 50 ಸಾವಿರ ಮೊತ್ತದ ರೈತರ ಸಾಲವನ್ನು ಮನ್ನಾ ಮಾಡಿದ್ದೇವೆ. ನೀವು ಮಾಡುವುದೇನು ಘನಂದಾರಿ ಕೆಲಸವೇ..? ಮೋಜು ಮಾಡುವ ಮುಖ್ಯಮಂತ್ರಿಗೇನು ಗೊತ್ತು ಎಂದು ಪ್ರಶ್ನಿಸಿದರು.
ನೀವೂ ಬನ್ನಿ, ನಾನೂ ಬರುತ್ತೇನೆ. ಇಬ್ಬರು ನೇಗಿಲು ಹಿಡಿದುಕೊಳ್ಳುವ. ನಾನು ಬೆಳಗ್ಗೆ ಹೊಲಕ್ಕೆ ಹೋದರೆ ಬರುತ್ತಿದ್ದುದು ರಾತ್ರಿ. ಅವನೂ ನೇಗಿಲು ಕಟ್ಟಲಿ, ನಾನೂ ಕಟ್ಟುತ್ತೇನೆ. ಅದರಿಂದ ಗೊತ್ತಾಗುತ್ತದೆ ಯಾರು ನೇಗಿಲು ಹಿಡಿದುಕೊಂಡವರು ಎಂದು ಟೀಕಿಸಿದ ಅವರು, ಮೊದಲು ಸಿದ್ದರಾಮಯ್ಯ ಅವರು ನೇಗಿಲು ಹಿಡಿದು ಉಳುಮೆ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.
Click this button or press Ctrl+G to toggle between Kannada and English