ಜನ ಸುರಕ್ಷಾ ಯಾತ್ರೆ ಜನರ ದಾರಿ ತಪ್ಪಿಸುವ ಯಾತ್ರೆ: ಸಚಿವ ರೈ

3:29 PM, Monday, March 5th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

ramanath-raiಮಂಗಳೂರು: ಬಿಜೆಪಿಯು ಜನ ಸುರಕ್ಷಾ ಯಾತ್ರೆಯನ್ನು ಪ್ರಚೋದನಾಕಾರಿ ಭಾಷಣ ಮಾಡುವ ಉದ್ದೇಶದಿಂದ ನಡೆಸಲಾಗುತ್ತಿದ್ದು, ಇದು ಜನರ ದಾರಿ ತಪ್ಪಿಸುವ ಯಾತ್ರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಆರೋಪಿಸಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಸಾಮಾಜಿಕ ಸಾಮರಸ್ಯವನ್ನು ಕದಡುವವರು, ಬಿಜೆಪಿಗೆ ಸುರಕ್ಷಾ ಯಾತ್ರೆ ಕೈಗೊಳ್ಳುವ ಯೋಗ್ಯತೆ ಇಲ್ಲ ಎಂದವರು ಹೇಳಿದರು.

ಜಿಲ್ಲೆಯಲ್ಲಿ ಎರಡು ಮತೀಯ ಸಂಘಟನೆಗಳೇ ಘರ್ಷಣೆ, ಹತ್ಯೆ ಹಾಗೂ ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿವೆ. ಯಾವುದೇ ಪ್ರಕರಣಗಳಲ್ಲಿ ಪಕ್ಷದ ಕಾರ್ಯಕರ್ತರ ಪಾತ್ರ ಇಲ್ಲ ಎಂಬುದನ್ನು ನಾನು ಧೈರ್ಯವಾಗಿ ಹೇಳುತ್ತೇನೆ. ಆದರೆ, ಬಿಜೆಪಿಯವರು ಹಿಂದೂಗಳ ಹತ್ಯೆಯಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ಹತ್ಯೆ ಮಾಡಿರುವವರು ಯಾರು? ಬಾಳಿಗಾ, ಪ್ರಶಾಂತ್ ಪೂಜಾರಿ, ಹರೀಶ್ ಪೂಜಾರಿ, ಕಾರ್ತಿಕ್ ರಾಜ್ ಹತ್ಯೆ ಮಾಡಿದವರು ಯಾರು? ಪ್ರತಿಯೊಂದು ಹತ್ಯೆ ಆದ ಸಂದರ್ಭದಲ್ಲೂ ಬಿಜೆಪಿಯವರು ಸುಳ್ಳು ಪ್ರಚಾರ ಮಾಡುತ್ತಾ ಬಂದಿದ್ದಾರೆ. ಹಾಗಿರುವಾಗ ಇದೀಗ ಯಾವ ಮುಖ ತೋರಿಸಿಕೊಂಡು ಜನ ಸುರಕ್ಷಾ ಯಾತ್ರೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಯನ್ನು ಅವರಿಗೆ ಕೇಳಬೇಕಾಗಿದೆ ಎಂದು ಸಚಿವ ರೈ ಹೇಳಿದರು.

ಕಾಂಗ್ರೆಸ್ ಪಕ್ಷ ಯಾವುದೇ ಹತ್ಯೆಯ ಪರ ವಕಲತ್ತಾಗಲಿ, ಸಮರ್ಥನೆಯಾಗಲಿ ಮಾಡಿಲ್ಲ. ಜಿಲ್ಲೆಯಲ್ಲಿ ಅಹಿತಕರ ಘಟನೆ ನಡೆದಾದ ಸಾಮರಸ್ಯ ನಡಿಗೆಯ ಮೂಲಕ ಶಾಂತಿ ಕಾಪಾಡಲು ಪ್ರಯತ್ನಿಸಲಾಯಿತು. ಯಾವುದೇ ಹತ್ಯೆಗಳು ನಡೆದಾಗ ಅದನ್ನು ಧರ್ಮದ ಹೆಸರಿನಲ್ಲಿ ಸಮೀಕರಿಸುವುದು ಸರಿಯಲ್ಲ. ಹತ್ಯೆಯು ಮಾನವ ಹತ್ಯೆ. ಅದಕ್ಕೆ ಕಾರಣಕರ್ತರು ಯಾರು ಎಂಬುದು ಮುಖ್ಯ. ದ.ಕ. ಜಿಲ್ಲೆಯಲ್ಲಿ ಜೈಲಿನಲ್ಲಿ ಕುಳಿತು ವ್ಯಕ್ತಿಯನ್ನು ಹತ್ಯೆ ಮಾಡುವ ಸ್ಕೆಚ್ ಹಾಕಲಾಗುತ್ತದೆ. ಇದು ಅಮಾನವೀಯ. ಬಿಜೆಪಿಯ ಮುಖಂಡರು, ಪಕ್ಷದ ಅಧ್ಯಕ್ಷರು ಅದನ್ನು ಸಮರ್ಥಿಸುತ್ತಾರೆಂದರೆ ನಾವು ಎತ್ತ ಸಾಗುತ್ತಿದ್ದೇವೆ ಎಂಬುದನ್ನು ಆಲೋಚಿಸಬೇಕು ಎಂದವರು ಹೇಳಿದರು.

ಜನಸಾಮಾನ್ಯರು ಇದನ್ನು ತಿಳಿಯಬೇಕು. ಪ್ರಚೋದನೆಗೆ ಒಳಗಾಗದೆ, ಅಹಿತಕರ ಘಟನೆಗಳಿಗೆ ಕಾರಣವಾಗದೆ ಜಿಲ್ಲೆಯಲ್ಲಿ ಶಾಂತಿಯ ವಾತಾವರಣವನ್ನು ಮುಂದುವರಿಸಬೇಕು ಎಂದು ಸಚಿವ ರೈ ಹೇಳಿದರು.

ಬಿಜೆಪಿಯ ಕಾರ್ಯಕ್ರಮಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನಿಂದ ಕಾರ್ಯಕ್ರಮ ನಡೆಯಲಿದೆಯೇ ಎಂಬ ಪ್ರಶ್ನೆಗೆ, ಸಾಮರಸ್ಯಕ್ಕೆ ತೊಂದರೆ ಆಗುವ ಯಾವುದೇ ಕಾರ್ಯಕ್ರಮ ಇಲ್ಲ. ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿಯವರ ಕಾರ್ಯಕ್ರಮವನ್ನು ಅವಿಭಜಿತ ದ.ಕ. ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಅದರ ದಿನಾಂಕ ಇನ್ನಷ್ಟೆ ನಿಗದಿಯಾಗಬೇಕಾಗಿದೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಮೇಯರ್ ಕವಿತಾ ಸನಿಲ್, ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಹಿರಿಯರಾದ ಇಬ್ರಾಹೀಂ ಕೋಡಿಜಾಲ್, ಮುಖಂಡರಾದ ಸಲೀಂ, ವಿಶ್ವಾಸ್ ಕುಮಾರ್ ದಾಸ್, ಅಪ್ಪಿ, ವಿನಯ ರಾಜ್, ಪ್ರಭಾಕರ ಶ್ರೀಯಾನ್, ಸಂತೋಷ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English