ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಪಾದಯಾತ್ರೆ ಬಿರುಸಾಗಿದೆ. ಒಂದೆಡೆ ಬಿಜೆಪಿ ಬೆಂಗಳೂರು ಮತ್ತು ಕರಾವಳಿಯಲ್ಲಿ ಪಾದಯಾತ್ರೆ ನಡೆಸುತ್ತಿದ್ದರೆ ಇತ್ತ ಕಾಂಗ್ರೆಸ್ ನಾಯಕರು ಕೂಡ ಮನೆ ಮನೆ ಸುತ್ತಲು ಮುಂದಾಗಿದ್ದಾರೆ. ಹೀಗೆ ಕಾಂಗ್ರೆಸ್ ಕಡೆಯಿಂದ ಪಾದಯಾತ್ರೆಗೆ ಹೊರಟಿರುವವರು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯ್ದೀನ್ ಬಾವಾ. ಶಾಸಕ ಬಾವಾರ ನಡೆ-ಸಾಮರಸ್ಯದ ಕಡೆ’ ಹೆಸರಿನಲ್ಲಿ ಅವರು ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ.
ಇದೇ ಬರುವ ಮಾರ್ಚ್ 7 ರಿಂದ 10 ದಿನಗಳ ಸೌಹಾರ್ದ ನಡಿಗೆಯನ್ನು ಅವರು ಆಯೋಜಿಸಿದ್ದಾರೆ. ತಮ್ಮ ವಿಧಾನಸಭಾ ಕ್ಷೇತ್ರದ 23 ವಾರ್ಡ್ ಹಾಗೂ 13 ಗ್ರಾಮ ಪಂಚಾಯಿತಿಗಳಲ್ಲಿ ಈ ಪಾದಯಾತ್ರೆ ನಡೆಯಲಿದೆ. ಬ್ಯಾಂಡ್, ವಾಲಗದೊಂದಿಗೆ ಭರ್ಜರಿಯಾಗಿ ನಡೆಯುವ ಈ ನಡಿಗೆಯುದ್ದಕ್ಕೂ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನಡೆಯಲಿದೆ. ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಸೀರೆ ಹಂಚುವ ಕಾರ್ಯಕ್ರಮವನ್ನೂ ಮುಂದುವರಿಸಲು ಬಾವಾ ನಿರ್ಧರಿಸಿದ್ದಾರೆ.
ಬಾವಾ ಅವರ ಪಾದಯಾತ್ರೆಗೆ ಮಾರ್ಚ್ 7 ರಂದು ಮುಂಜಾನೆ ಮಂಗಳೂರು ಹೊರವಲಯದ ಮುಕ್ಕ ಜಂಕ್ಷನ್‍ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಚಿತ್ರನಟ ಪ್ರಕಾಶ್ ರೈ ಕೂಡ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. 16 ರಂದು ಸಂಜೆ ಕೈಕಂಬದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಹಾಗೂ ಜಿಲ್ಲಾ ಉಸ್ತುವಾರಿ ವಿಷ್ಣುನಾಥನ್ ಭಾಗವಹಿಸಲಿದ್ದಾರೆ.
ನಡಿಗೆ ಸಂದರ್ಭದಲ್ಲಿ ಸಭೆ, ಮನೆ ಮನೆ ಭೇಟಿ ಸೇರಿದಂತೆ ಸಾಧನೆಯ ಚಿತ್ರಣವನ್ನು ಜನತೆಗೆ ತಿಳಿಸಲು ಶಾಸಕ ಬಾವಾ ನಿರ್ಧರಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಶಾಸಕ ಮೊಯ್ದೀನ್ ಬಾವಾ, “ನನ್ನ ಕ್ಷೇತ್ರದಲ್ಲಿ ಸಾಮರಸ್ಯವನ್ನು ಕಾಪಾಡುವ ಸಲುವಾಗಿ ಈ ನಡಿಗೆಯನ್ನು ಆಯೋಜಿಸಲಾಗಿದೆ. ಮಾ. 15ರಂದು ನನ್ನ ಹುಟ್ಟುವನ್ನು ಆಚರಿಸಲಾಗುತ್ತಿದೆ. ಅಂದು ಕ್ಷೇತ್ರದ ಮಹಿಳೆಯರಿಗೆ ಸೀರೆ, ಮಕ್ಕಳಿಗೆ ನನ್ನ ಚಿತ್ರ ಇರುವ ನೋಟ್ಸ್ ಪುಸ್ತಕ, ಕ್ಯಾಲೆಂಡರ್, ಸಾಧನೆಯ ಪುಸ್ತಕವನ್ನು ಹಂಚಲಾಗುವುದು,” ಎಂದು ತಿಳಿಸಿದ್ದಾರೆ.
Click this button or press Ctrl+G to toggle between Kannada and English