ಜೆಡಿಎಸ್ ಅಧಿಕಾರಕ್ಕೆ ಬಂದರೆ ನಾನು ನೆಪಮಾತ್ರಕ್ಕೆ ಸಿಎಂ: ಹೆಚ್‌ಡಿಕೆ

5:49 PM, Tuesday, March 6th, 2018
Share
1 Star2 Stars3 Stars4 Stars5 Stars
(No Ratings Yet)
Loading...

JDs-mangaluruಮಂಗಳೂರು: ಜೆಡಿಎಸ್ ಅಧಿಕಾರಕ್ಕೆ ಬಂದರೆ ನಾನು ನೆಪಮಾತ್ರಕ್ಕೆ ಸಿಎಂ. ರಾಜ್ಯದ ಆರೂವರೆ ಕೋಟಿ ಜನರೇ ನಿಜವಾದ ಮುಖ್ಯಮಂತ್ರಿಗಳು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಬಲ್ಲವರೊಡನೆ ಬೌದ್ಧಿಕ ಸಂವಾದ ನಡೆಸಿದ ಅವರು, ಕೇವಲ ಅಧಿಕಾರಿಗಳ ಸಲಹೆಯನ್ನು ಅನುಸರಿಸಿ ರಾಜ್ಯಾಡಳಿತ ಮಾಡುವುದಲ್ಲ. ಜನರ ಸಲಹೆಗೆ ಮನ್ನಣೆ ಕೊಡುವುದೇ ಜೆಡಿಎಸ್‌ನ ಕಲ್ಪನೆ ಎಂದರು.

ಎತ್ತಿನಹೊಳೆ ಯೋಜನೆಯ ಬಗ್ಗೆ ತಮ್ಮ ನಿಲುವೇನು ಎಂದು ಪರಿಸರವಾದಿ ದಿನೇಶ್ ಹೊಳ್ಳ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು, ಅರಣ್ಯ ಸಂರಕ್ಷಣೆಗೆ ಗಾಡ್‌ಗೀಳ್ ಯೋಜನೆಯನ್ನು ಜಾರಿ ಮಾಡುವುದು ಜೆಡಿಎಸ್ ಪ್ರಣಾಳಿಕೆಯಲ್ಲೇ ಇದೆ. ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರ ಎತ್ತಿನಹೊಳೆಗೆ ಕೋಟ್ಯಂತರ ರೂ. ಹೂಡಿ ಪೋಲು ಮಾಡಿದೆ. ನೀರಿಲ್ಲದಿದ್ದರೂ ಜನರನ್ನು ನಂಬಿಸಿದೆ. ಇದೊಂದು ಬರೀ ಹಣ ಹೊಡೆಯುವ ಯೋಜನೆಯಾಗಿದೆ. ತಾನು ಸಿಎಂ ಆದರೆ ಎತ್ತಿನಹೊಳೆ ಯೋಜನೆಯನ್ನು ಕೈಬಿಡುತ್ತೇನೆ.

ಬದಲಾಗಿ ನಾಡಿನ ಜನರಿಗೆ ಉಪಯುಕ್ತವಾಗುವ ನೀರಾವರಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು. ಪರಿಸರಕ್ಕೆ ಹಾನಿಯಾಗದ, ಜನರಿಗೆ ತೊಂದರೆಯಾಗದ ಯೋಜನೆ ನನ್ನ ಗುರಿ ಎಂದರು. ಇದನ್ನು ಹೇಳಿದಾಗ, ಕಾಂಗ್ರೆಸ್‌ನವರು ಕೋಲಾರ, ಚಿಕ್ಕಬಳ್ಳಾಪುರಗಳಲ್ಲಿ ತನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾರೆ ಎಂದರು.

ಶಿಕ್ಷಣ ಹಾಗೂ ಆರೋಗ್ಯಕ್ಕೆ ನಮ್ಮದು ಮೊದಲು ಆದ್ಯತೆ. ಬೀಡಿ ಕಟ್ಟುವವರ ಮಕ್ಕಳೂ ಗುಣಮಟ್ಟದ ಶಿಕ್ಷಣ ಪಡೆಯಬೇಕು. ಇಂದಿಗೂ ನೂರಾರು ಜನ ಆರೋಗ್ಯದ ಕಾರಣಕ್ಕಾಗಿ, ಆಸ್ಪತ್ರೆಗಳ ದುಬಾರಿ ಬಿಲ್ ಪಾವತಿಸಲು ಸಾಧ್ಯವಾಗದೇ ನಮ್ಮ ಮನೆ ಮುಂದೆ ನಿಲ್ಲುತ್ತಾರೆ. ಪ್ರತಿ ತಿಂಗಳು ಗಂಭೀರ ಸಮಸ್ಯೆಗಳನ್ನು ಜಿಲ್ಲೆಗಳ ಮುಖಂಡರನ್ನು ವಿಧಾನಸಭೆಯ ಮೂರನೇ ಮಹಡಿಗೆ ಕರೆಸಿ ಸಮಾಲೋಚನೆ ನಡೆಸಲಾಗುವುದು ಎಂದು ಹೆಚ್‌ಡಿಕೆ ಭವಿಷ್ಯದ ಯೋಜನೆಗಳನ್ನು ಯೋಜನೆಗಳನ್ನು ಸಭಿಕರ ಮುಂದಿಟ್ಟರು.

ಮಕ್ಕಳನ್ನು ಶಾಲೆಗೆ ಸೇರಿಸುವಾಗ ಜಾತಿ ಪ್ರಮಾಣಪತ್ರ ಸಲ್ಲಿಸುವುದನ್ನು ರದ್ದು ಮಾಡಬೇಕು. ಪ್ರಾಥಮಿಕ ಶಿಕ್ಷಣದಲ್ಲಿಯೇ ಕೆಲವು ಕಾನೂನು, ಕಾಯ್ದೆಗಳ ಬಗ್ಗೆ ಸಿಲಬಸ್‌ನಲ್ಲಿ ಸೇರಿಸಬೇಕು ಎಂಬ ಸಾಮಾಜಿಕ ಕಾರ್ಯಕರ್ತ ಶಶಿಧರ ಶೆಟ್ಟಿಯವರ ಸಲಹೆಗಳಿಗೆ, ಇದೊಂದು ಉತ್ತಮ ಸಲಹೆ. ಆದರೆ, ಜಾತಿ ಪ್ರಮಾಣಪತ್ರವನ್ನು ಈ ಹಂತದಲ್ಲಿ ರದ್ದು ಮಾಡಬೇಕೆಂಬುದರ ಬಗ್ಗೆ ಮತ್ತೊಮ್ಮೆ ಸಮಾಲೋಚನೆ ನಡೆಸಲಾಗುವುದು. ಡಾ. ಬಿ.ಆರ್. ಅಂಬೇಡ್ಕರ್ ನೇತೃತ್ವದ ಸಮಿತಿ ಭದ್ರವಾದ ಸಂವಿಧಾನವನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಯಾವುದೇ ಪಕ್ಷಗಳು ಆಡಳಿತ ಮಾಡಿದರೂ ಬದಲಾಯಿಸಲಾಗದ ಸಮರ್ಥ ಸಂವಿಧಾನವನ್ನು ಗೌರವಿಸಿ, ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುವುದೇ ಜೆಡಿಎಸ್‌ನ ಉದ್ದೇಶ ಎಂದರು.

ಅಂಗನವಾಡಿಯರಿಗೆ ವೇತನ ಹೆಚ್ಚಿಸುವ ಬಗ್ಗೆ ಬೈಂದೂರಿನ ಸಬಿತಾ ಅವರ ವಿನಂತಿಗೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಕರಾವಳಿಯಲ್ಲಿ ಕೋಮು ಸಂಘರ್ಷಗಳಿಲ್ಲ. ಆದರೆ, ಜನಸಾಮಾನ್ಯರು ಮಾತ್ರ ನೆಮ್ಮದಿಯಿಂದ ಓಡಾಡುವಂತಿಲ್ಲ. ಮುಸ್ಲಿಮರೆಲ್ಲಾ ಭಯೋತ್ಪಾದಕರಲ್ಲ. ಮದರಸಾಗಳು ಕೇವಲ ಧಾರ್ಮಿಕ ಕ್ರಮಗಳನ್ನು ಬೋಧಿಸುವ ಕೇಂದ್ರಗಳಷ್ಟೇ. ಇಲ್ಲಿಯ ಮೌಲ್ವಿಗಳಿಗೂ ಸರ್ಕಾರಿ ವೇತನ ನೀಡಬೇಕೆಂಬ ಮೌಲಾನ ಅಬ್ದುಲ್ ಅಝೀಝ್ ದಾರಿಮಿಯವರ ಮಾತಿಗೆ ಮಾಜಿ ಸಿಎಂ ಸಮ್ಮತಿ ಸೂಚಿಸಿದ್ದಾರೆ.

ಜನಸಾಮಾನ್ಯರು ಭಯದಿಂದ ಓಡಾಡಬೇಕಾಗಿದೆ ಎಂಬ ಆತಂಕಕ್ಕೆ ಪ್ರತಿಕ್ರಿಯಿಸಿದ ಹೆಚ್‌ಡಿಕೆ, ರೌಡಿಗಳು, ಪೊಲೀಸರು ಒಟ್ಟಿಗೆ ಕುಳಿತು ಊಟ ಮಾಡುವ ಪರಿಸ್ಥಿತಿ ಇದೆ. ಕಾನೂನು ಎಲ್ಲರಿಗೂ ಒಂದೇ. ನಮ್ಮ ಸರ್ಕಾರ ಬಂದರೆ ಶಾಸಕ, ಸಂಸದರೂ ಕಾನೂನು ಉಲ್ಲಂಘಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಖಂಡಿತ. ಹತ್ತಿಪ್ಪತ್ತು ವರ್ಷಗಳಿಂದ ಒಂದೇ ಕಡೆ ಇರುವ ಪೊಲೀಸರನ್ನು ಎತ್ತಂಗಡಿ ಮಾಡಿದರೆ ವ್ಯವಸ್ಥೆ ಸರಿಯಾಗುತ್ತದೆ ಎಂದರು.

ಹೀಗೆ ರಾಜ್ಯ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಬೇಕಾದ ಹಲವಾರು ಸಲಹೆಗಳಿಗೆ ಕುಮಾರಸ್ವಾಮಿ ಸ್ಪಂದಿಸಿದರು. ಸಂವಾದವನ್ನು ಹಿಂಗಾರವನ್ನು ಅರಳಿಸುವ ಮೂಲಕ ಚಾಲನೆ ನೀಡಲಾಯಿತು.

ಮಾಜಿ ಸಚಿವರಾದ ಅಮರನಾಥ ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮೊಹಮ್ಮದ್ ಕುಂಞ, ಖ್ಯಾತ ಮೂಳೆತಜ್ಞರಾದ ಡಾ. ಶಾಂತಾರಾಮ ಶೆಟ್ಟಿ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English