ಕಾಪು: ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ಸಿಗರು ನಿಸ್ಸೀಮರು. ಚುನಾವಣೆ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಆರೋಪ ಗಳನ್ನು ಮಾಡಲಾಗುತ್ತಿದೆ. ಇದು ಪಿತೂರಿ. ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಕಾಪುವಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ, ಯೋಗಿ ಆದಿತ್ಯನಾಥರ ವಿರುದ್ಧವೂ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ಯೋಗಿ ಉತ್ತರ ಪ್ರದೇಶದಲ್ಲಿ ದರೋಡೆಕೋರರು ಹಾಗೂ ಕ್ರಿಮಿನಲ್ಗಳ ಹೆಡೆಮುರಿ ಕಟ್ಟಿದ್ದಾರೆ. ಆದರೆ ರಾಜ್ಯದಲ್ಲಿ ಕೆಎಫ್ಡಿ ಹಾಗೂ ಪಿಎಫ್ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಲಾಗುತ್ತದೆ. ಇದೇ ಸಿದ್ಧರಾಮಯ್ಯರಿಗೂ ಯೋಗಿಗೂ ಇರುವ ವ್ಯತ್ಯಾಸ ಎಂದು ಶೋಭಾ ಹೇಳಿದರು.
ಸೋಮವಾರ ಉಡುಪಿಯಲ್ಲಿ ಜನ ಸುರಕ್ಷಾ ಯಾತ್ರೆಯನ್ನು ಟೀಕಿಸಿದ ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡ ಶೋಭಾ, ರೆಡ್ಡಿ ಅವರು ಕರಾವಳಿ ಭಾಗದಲ್ಲಿ ಕೋಮು ಭಾವನೆ ಕೆರಳಿಸುವ ಕೆಲಸ ಮಾಡಿದ್ದಾರೆ. ಅವರು ಸುಳ್ಳು ಹೇಳ್ಕೊಂಡು ತಿರುಗುತಿದ್ದಾರೆ ಎಂದರು.ಗೃಹ ಸಚಿವರು ಸ್ವಲ್ಪ ಜವಾಬ್ದಾರಿಯಿಂದ ಮಾತನಾಡಲಿ. ಸಂಘ ಪರಿವಾರದ ಬೇಳೆ ಬೇಯೊಕೆ ಬಿಡಲ್ಲ ಅಂತಾರೆ. ನೆಹರು-ಇಂದಿರಾ ಗಾಂಧಿಗೂ ಸಂಘ ಪರಿವಾರವನ್ನು ಮಟ್ಟ ಹಾಕಲು ಆಗಿಲ್ಲ. ಇವರೇನು ಮಾಡ್ತಾರೆ. ಜನ ನಮ್ ಜೊತೆಗಿದ್ದಾರೆ ಎಂದರು.
ಗೌರಿ ಹತ್ಯೆ ಪ್ರಕರಣದ ತನಿಖೆಯಲ್ಲಿ ಸರಕಾರ ವ್ಯವಸ್ಥಿತ ಷಡ್ಯಂತ್ರ ಮಾಡಿದೆ. ಹಿಂದು ಕಾರ್ಯಕರ್ತರನ್ನು ಫಿಕ್ಸ್ ಮಾಡಿದೆ. ಗೌರಿ ಹತ್ಯೆ ಆರೋಪಿ ರೇಖಾ ಚಿತ್ರಕ್ಕೆ ಇದು ತಾಳೆಯಾಗುತ್ತಿಲ್ಲ. ಹಾಗಿದ್ದರೆ ರೇಖಾ ಚಿತ್ರ ಯಾರದ್ದು ಎಂದು ಪ್ರಶ್ನಿಸಿದ ಶೋಭಾ, ನವೀನ್ ಅನ್ನೊ ವ್ಯಕ್ತಿನ ಟಾರ್ಗೆಟ್ ಮಾಡಲಾಗಿದೆ. ಪೊಲೀಸರ ಮೂಲಕ ಅವರನ್ನು ಫಿಕ್ಸ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
Click this button or press Ctrl+G to toggle between Kannada and English