ತಪ್ಪಿದ ಮೇಯರ್ ಸ್ಥಾನ: ಕಾಂಗ್ರೆಸ್‌ನ ಮುಸ್ಲಿಂ ನಾಯಕರ ಆಕ್ರೋಶ

3:52 PM, Thursday, March 8th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

muslimsಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಅಲ್ಪ ಸಂಖ್ಯಾತ ನಾಯಕರ ಗುಂಪೊಂದು ಗುರುವಾರ ನಗರದ ಜಮೀಯ್ಯತುಲ್ ಫಲಾಹ್ ಹಾಲ್‌ನಲ್ಲಿ ಸಭೆ ನಡೆಸಿ ಪಕ್ಷದ ಜಿಲ್ಲಾ ಹೈಕಮಾಂಡ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ, ಶುಕ್ರವಾರ ಮತ್ತೊಂದು ಸುತ್ತಿನ ಸಭೆ ನಡೆಸಿ ಪಕ್ಷದ ವಿವಿಧ ಜವಾಬ್ದಾರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ.

ಮಂಗಳೂರು ಮನಪಾಕ್ಕೆ ಒಂದು ಅವಧಿಯಲ್ಲಿ ಮುಸ್ಲಿಮ್ ಕಾರ್ಪೊರೇಟರ್‌ಗೆ ಮೇಯರ್ ಸ್ಥಾನ ಕೊಡಬೇಕು ಎಂದು ಕಳೆದ ವಾರ ಸಭೆ ಸೇರಿ ಆಗ್ರಹಿಸಿದ್ದ ಕಾಂಗ್ರೆಸ್ ಪಕ್ಷದ ನಾಯಕರು ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರಿಗೂ ಮನವಿ ಸಲ್ಲಿಸಿದ್ದರು.

ಈ ಸಂದರ್ಭ ನಗರದ ಮುಸ್ಲಿಂ ಉದ್ಯಮಿಗಳು ಕೂಡ ಉಪಸ್ಥಿತರಿದ್ದರು. ಆದರೆ ಸಚಿವರು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ಈ ಮಧ್ಯೆ ಉಪಮೇಯರ್ ಸ್ಥಾನವನ್ನು ಮುಸ್ಲಿಂ ಕಾರ್ಪೊರೇಟರ್‌ಗೆ ನೀಡಿ ಸಮಾಧಾನ ಪಡಿಸುವ ತಂತ್ರಗಾರಿಕೆಯನ್ನು ಸಚಿವರು ನಡೆಸಿದ್ದರು. ಇದಕ್ಕೆ ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್‌ನ ಅತೃಪ್ತ ನಾಯಕರು, ಜನಪ್ರತಿನಿಧಿಗಳು ಗುರುವಾರ ಸಭೆ ನಡೆಸಿ ಪಕ್ಷದ ವಿವಿಧ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ನೀಡಿ ಸಚಿವ ರಮಾನಾಥ ರೈಗೆ ಬಿಸಿಮುಟ್ಟಿಸಲು ಮುಂದಾಗಿದ್ದಾರೆ.

ಚುನಾವಣೆ ಸಂದರ್ಭ ಮುಸ್ಲಿಮರು ಇಂತಹ ನಿರ್ಧಾರಕ್ಕೆ ಬಂದಿರುವುದು ಇದೀಗ ಪಕ್ಷದ ಜಿಲ್ಲಾ ಹೈಕಮಾಂಡ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಶುಕ್ರವಾರ ನಡೆಯಲಿರುವ ಸಭೆಗೆ ಸಚಿವ ಯು.ಟಿ.ಖಾದರ್, ಶಾಸಕ ಬಿ.ಎ. ಮೊಯ್ದಿನ್ ಬಾವ ಹಾಗೂ ಪಕ್ಷದ ವಿವಿಧ ಹುದ್ದೆ, ಸ್ಥಾನಗಳಲ್ಲಿರುವ ಕಾಂಗ್ರೆಸ್‌ನ ನಾಯಕರು, ಜನಪ್ರತಿನಿಧಿಗಳನ್ನು ಆಹ್ವಾನಿಸುವ ಬಗ್ಗೆ ನಿರ್ಧರಿಸಲಾಗಿದೆ.

ಗುರುವಾರ ನಡೆದ ಸಭೆಯಲ್ಲಿ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಕಣಚೂರು ಮೋನು, ದ.ಕ. ಜಿಪಂ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಶಾಹುಲ್ ಹಮೀದ್, ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎನ್.ಎಸ್.ಕರೀಂ, ಕರಾವಳಿ ವಲಯ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಯು.ಬಿ.ಸಲೀಂ ಉಳ್ಳಾಲ್, ಕಾರ್ಪೊರೇಟರ್ ಅಬ್ದುರ್ರವೂಫ್, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್‌ಮಾನ್ ಬಂಟ್ವಾಳ, ಎನ್‌ಎಸ್‌ಯುಐ ಮಾಜಿ ಜಿಲ್ಲಾಧ್ಯಕ್ಷ ಅಲ್ತಾಫ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾರಿಸ್ ಬೈಕಂಪಾಡಿ, ಪಕ್ಷದ ಮುಖಂಡರಾದ ಜಲೀಲ್ ಬದ್ರಿಯಾ, ಜಲೀಲ್ ಕೃಷ್ಣಾಪುರ, ಶರೀಫ್ ಚೊಕ್ಕಬೆಟ್ಟು, ತಾಪಂ ಸದಸ್ಯರಾದ ಅಬ್ದುಸ್ಸಮದ್ ಅಡ್ಯಾರ್, ಬಶೀರ್ ಅಹ್ಮದ್ ಜೋಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English