ತ್ರಿಪುರಾದಲ್ಲಿ ಬಿಜೆಪಿ ದೌರ್ಜನ್ಯ ವಿರುದ್ಧ ಸಿಪಿಎಂ ಪ್ರತಿಭಟನೆ

5:04 PM, Thursday, March 8th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

protest-CPIಮಂಗಳೂರು: ತ್ರಿಪುರಾದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಐಪಿಎಫ್‌ಟಿ ಒಕ್ಕೂಟವು ಜಯ ಗಳಿಸಿದ ಬಳಿಕ ಸಿಪಿಎಂ ಪಕ್ಷದ ಕಚೇರಿಗೆ ದಾಳಿ, ಕಾರ್ಯಕರ್ತರಿಗೆ ಹಲ್ಲೆ, ಲೆನಿನ್ ಪ್ರತಿಮೆಗೆ ಹಾನಿ ಇತ್ಯಾದಿಯ ಮೂಲಕ ದೌರ್ಜನ್ಯ ಎಸಗಿದೆ ಎಂದು ಆರೋಪಿಸಿ ಸಿಪಿಎಂ ದ.ಕ. ಜಿಲ್ಲಾ ಸಮಿತಿಯು ಗುರುವಾರ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ತ್ರಿಪುರಾದಲ್ಲಿ 25 ವರ್ಷಗಳ ಕಮ್ಯುನಿಸ್ಟ್ ಪಕ್ಷದ ನೇತೃತ್ವದ ಆಡಳಿತ ಕೊನೆಗೊಂಡಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಆಡಳಿತ ಪಕ್ಷಗಳ ಬದಲಾವಣೆ ಸಹಜವಾದರೂ ಬಿಜೆಪಿ ನೇತೃತ್ವದ ಒಕ್ಕೂಟವು ಚುನಾವಣಾ ಫಲಿತಾಂಶದಲ್ಲಿ ಗೆಲುವು ಸಾಧಿಸಿದ ಬಳಿಕ ಸಿಪಿಎಂ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದೆ. ಅವರ ಮನೆಗಳ ಮೇಲೆ ದಾಳಿ ನಡೆಸಿದೆ. ಕೆಲವರ ಮನೆಗಳಿಗೆ ಬೆಂಕಿ ಹಚ್ಚಿದೆ. ಸಿಪಿಎಂ ಪಕ್ಷದ ಕಚೇರಿಗಳ ಮೇಲೆ ದಾಳಿ ನಡೆಸಿದ್ದಲ್ಲದೆ, ಕೆಲವು ಕಚೇರಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದೆ. ಬೆಲೋನಿಯಾ ಜಿಲ್ಲಾ ಕೇಂದ್ರದ ಮಧ್ಯೆ ಸ್ಥಾಪಿತವಾಗಿದ್ದ ಲೆನಿನ್ ಪ್ರತಿಮೆಯನ್ನು ಬುಲ್ಡೋಝರ್ ಬಳಸಿ ಕೆಡವಿ ಹಾಕಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಎಂ ದ.ಕ. ಜಿಲ್ಲಾ ಸಮಿತಿ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿ, ಚುನಾವಣಾ ಫಲಿತಾಂಶ ಪ್ರಕಟವಾದ ತಕ್ಷಣ ಬಿಜೆಪಿ ಮತ್ತು ಐಪಿಎಫ್‌ಟಿ ಪಕ್ಷಗಳ ಪುಂಡಾಟ ಪ್ರಾರಂಭವಾಗಿದ್ದು, ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ. ಸಿಪಿಎಂ ಪಕ್ಷದ 514 ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ. ಪಕ್ಷ ಕಾರ್ಯಕರ್ತರ 1539 ಮನೆಗಳ ಮೇಲೆ ಹಲ್ಲೆ ನಡೆಸಲಾಗಿದೆ. 200 ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಅಲ್ಲದೆ 134 ಸಿಪಿಎಂ ಕಚೇರಿಗಳ ಮೇಲೆ ದಾಳಿ ನಡೆಸಿ 64 ಕಚೇರಿಗಳಿಗೆ ಬೆಂಕಿ ಹಚ್ಚಲಾಗಿದೆ. 90 ಕಚೇರಿಗಳನ್ನು ಬಿಜೆಪಿ ಐಪಿಎಫ್‌ಟಿ ಬೆಂಬಲಿಗರು ಬಲವಂತವಾಗಿ ವಶಕ್ಕೆ ಪಡೆದಿದ್ದಾರೆ. ಪ್ರತ್ಯೇಕತಾವಾದಿ ಉಗ್ರಗಾಮಿ ಐಪಿಎಫ್‌ಟಿ ಪಕ್ಷದೊಂದಿಗೆ ದೇಶಭಕ್ತರೆಂದು ಹೇಳಿಕೊಳ್ಳುವ ಬಿಜೆಪಿ ಮೈತ್ರಿ ಮಾಡಿ ಅಧಿಕಾರಕ್ಕೆ ಬಂದುದೇ ಒಂದು ವಿಪರ್ಯಾಸ ಎಂದರು.

ಸಾವಿರಾರು ದುಡಿಯುವ ವರ್ಗಕ್ಕೆ ಪ್ರೇರಣೆ ನೀಡಿದ ಲೆನಿನ್‌ನ ಪ್ರತಿಮೆ ಕೆಡವಿದ್ದನ್ನು ಸುಬ್ರಮಣಿಯನ್ ಸ್ವಾಮಿಯಂತಹ ಬಿಜೆಪಿ ನಾಯಕರು ಸಮರ್ಥಿಸುವುದು ಖಂಡನೀಯ. ಹಿಂದುತ್ವದ ಸಿದ್ಧಾಂತವನ್ನು ಪ್ರಶ್ನಿಸುವ ವಿಚಾರವಾದಿಗಳ ಪ್ರತಿಮೆಗಳನ್ನು ಕೆಡಹುತ್ತಿರುವುದು ದೇಶದ ವೈಚಾರಿಕ ಚಿಂತನೆಯ ಮೇಲಿನ ಕ್ರಮ ಮೇಲಿನ ದಾಳಿಯಾಗಿದೆ. ಕಮ್ಯುನಿಸ್ಟ್ ಸರಕಾರವನ್ನು ಸೋಲಿಸುವಲ್ಲಿ ನರೇಂದ್ರ ಮೋದಿ ಸರಕಾರಕ್ಕೆ ಅಮೇರಿಕಾದ ಸಾಮ್ರಾಜ್ಯಶಾ ಸರಕಾರದ ಬೆಂಬಲವಿದೆ. ಕಮ್ಯುನಿಸಂ ಮುಕ್ತವಾದ ದೇಶವಾಗಬೇಕೆಂಬ ಸಂಘಪರಿವಾರದ ಕನಸನ್ನು ಎಂದೂ ನಿಜವಾಗಿಸಲು ಸಿಪಿಎಂ ಬಿಡುವುದಿಲ್ಲ ಎಂದು ವಸಂತ ಆಚಾರಿ ಎಚ್ಚರಿಕೆ ನೀಡಿದರು.

ಸಿಪಿಎಂ ದ.ಕ.ಜಿಲ್ಲಾ ಸೆಕ್ರಟರಿಯೆಟ್ ಸದಸ್ಯ ಜೆ.ಬಾಲಕೃಷ್ಣ ಶೆಟ್ಟಿ, ಯು.ಬಿ.ಲೋಕಯ್ಯ, ಕೃಷ್ಣಪ್ಪಸಾಲ್ಯಾನ್ ಹಾಗೂ ಪಕ್ಷದ ಜಿಲ್ಲಾ ಸಮಿತಿ ಸದಸ್ಯರು ಭಾಗವಹಿಸಿದ್ದರು. ಸುನೀಲ್ ಕುಮಾರ್ ಬಜಾಲ್ ಸ್ವಾಗತಿಸಿದರು. ಜೆ.ಬಾಲಕೃಷ್ಣ ಶೆಟ್ಟಿ ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English