ಜನಸ್ನೇಹಿ ಚುನಾವಣೆಗೆ ಪರಿಶ್ರಮಿಸಲು ಪ್ರಾದೇಶಿಕ ಆಯುಕ್ತರ ಕರೆ

10:47 AM, Friday, March 9th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Election-meetingಮಂಗಳೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಹೆಚ್ಚು ಆಸಕ್ತಿಯಿಂದ ಭಾಗವಹಿಸಲು ಜಿಲ್ಲಾಡಳಿತ ಪರಿಶ್ರಮಿಸಬೇಕು ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಶಿವಯೋಗಿ ಸಿ. ಕಳಸದ ಸೂಚಿಸಿದ್ದಾರೆ.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚುನಾವಣಾ ಸಿದ್ಧತೆಗಳ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಬಂದ ಅರ್ಜಿಗಳನ್ನು ಜಾಗರೂಕತೆಯಿಂದ ಪರಿಶೀಲಿಸಬೇಕು. ಅರ್ಜಿಗಳನ್ನು ತಿರಸ್ಕರಿಸುವ ಸಂದರ್ಭ ಬಂದರೆ ಆ ಬಗ್ಗೆಯೂ ಹೆಚ್ಚು ಜಾಗರೂಕರಾಗಿರಬೇಕು. ಈಗಾಗಲೇ ಅಂತಿಮ ಮತದಾರರ ಪಟ್ಟಿ ಫೆಬ್ರವರಿ 24ರಂದು ಪ್ರಕಟವಾಗಿದೆ. ಅರ್ಹರ ಹೆಸರು ಬಿಟ್ಟು ಹೋಗಿದ್ದಲ್ಲಿ ಈಗಲೂ ಅರ್ಜಿ ಸಲ್ಲಿಸಲು ಅವಕಾಶ ಇರುವುದರಿಂದ ಈ ಬಗ್ಗೆ ಜಿಲ್ಲಾಡಳಿತ ಕ್ರಮ ವಹಿಸುವಂತೆ ಅವರು ತಿಳಿಸಿದರು.

ವಿಕಲಚೇತನರು ಹಾಗೂ80-90 ಪ್ರಾಯ ಮೀರಿದ ಹಿರಿಯ ನಾಗರೀಕರು ಮತದಾನದಲ್ಲಿ ಪಾಲ್ಗೊಳ್ಳಲು ಗಮನಹರಿಸಬೇಕು. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳಲ್ಲೂ ಭದ್ರತೆ ಹೆಚ್ಚುಗೊಳಿಸಲು ಪ್ರಾದೇಶಿಕ ಆಯುಕ್ತರು ಸೂಚಿಸಿದರು.

ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ಮಾತನಾಡಿ, ಈಗಾಗಲೇ ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ತಿರಸ್ಕೃತಗೊಂಡಿರುವ ಸೇರ್ಪಡೆ ಅರ್ಜಿಗಳನ್ನು ಮತ್ತೊಮ್ಮೆ ಪರಿಶೀಲಿಸಿ, ಅರ್ಹರಿದ್ದರೆ ಸೇರ್ಪಡೆಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಚುನಾವಣೆ ಪ್ರಕ್ರಿಯೆ ಅಗತ್ಯವಿರುವ ಎಲ್ಲಾ ಸಮಿತಿ ಮತ್ತು ತಂಡಗಳನ್ನು ರಚಿಸಲಾಗಿದ್ದು, ಚುನಾವಣೆ ಘೋಷಣೆಯಾದ ತಕ್ಷಣವೇ ಕಾರ್ಯಪ್ರವೃತ್ತರಾಗಲಿದೆ ಎಂದು ತಿಳಿಸಿದರು. ನೆರೆರಾಜ್ಯದೊಂದಿಗೆ ಚುನಾವಣೆ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಭದ್ರತೆ ಮತ್ತಿತರ ಕ್ರಮಗಳ ಬಗ್ಗೆ ಕಾಸರಗೋಡು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಂ.ಆರ್. ರವಿ ಮಾತನಾಡಿ, ಮತದಾರರಲ್ಲಿ ಚುನಾವಣೆ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಂದು ಕಾಲೇಜುಗಳಲ್ಲೂ ಅಂಬಾಸಿಡರ್‌ಗಳ ನೇಮಕಾತಿ ಮಾಡಿಕೊಳ್ಳಲಾಗಿದೆ. ಪ್ರತಿಯೊಂದು ಬೂತ್‌ನಲ್ಲಿರುವ ವಿಕಲಚೇತನರ ಮಾಹಿತಿ ಪಡೆಯಲಾಗುತ್ತಿದ್ದು, ಅವರು ಮತದಾನ ಮಾಡಲು ಅಗತ್ಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಆರ್. ರವಿಕಾಂತೇಗೌಡ ಮಾತನಾಡಿ, ಜಿಲ್ಲೆಯಲ್ಲಿ 64 ಬೂತ್‌ಗಳು ನಕ್ಸಲ್ ಬಾಧಿತ ಪ್ರದೇಶದಲ್ಲಿ ಬರುತ್ತದೆ. ಇಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ಮುಂಬರುವ ಚುನಾವಣೆ ಸುಗಮವಾಗಿ ನಡೆಯಲು ಸುಬ್ರಮಣ್ಯ ಕೇಂದ್ರೀಕರಿಸಿ ನಕ್ಸಲ್ ಪೊಲೀಸ್ ಕ್ಯಾಂಪ್ ಕಾರ್ಯಾಚರಿಸಲಿದೆ ಎಂದು ಹೇಳಿದರು.

ಸಭೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಅಪರ ಜಿಲ್ಲಾಧಿಕಾರಿ ಕುಮಾರ್, ವಿವಿಧ ಚುನಾವಣಾ ಸಮಿತಿಗಳ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಜಿಲ್ಲಾ ಸ್ವೀಪ್ ಸಮಿತಿಯು ಮತದಾರರ ಜಾಗೃತಿಗೆ ಹೊರತಂದಿರುವ ಬ್ಯಾನರ್ ಹಾಗೂ ಸ್ಟಿಕ್ಕರ್‌ಗಳನ್ನು ಪ್ರಾದೇಶಿಕ ಆಯುಕ್ತ ಶಿವಯೋಗಿ ಸಿ. ಕಳಸದ ಅವರು ಬಿಡುಗಡೆ ಮಾಡಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English