ದೈಹಿಕ ಅಸಾಮರ್ಥ್ಯ ಕುರಿತು ಕೊರಗುತ್ತಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ: ಸಬಿತಾ ಮೊನಿಸ್

12:43 PM, Friday, March 9th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

alwas-studentಮಂಗಳೂರು: `ಹುಟ್ಟಿನಿಂದಲೇ ಎರಡೂ ಕೈಗಳಿಲ್ಲದೆ ಬೆಳೆದು ಬಂದವಳು ನಾನು. ಶಾಲೆಗೆ ಸೇರಲು ಕೂಡ ಹರಸಾಹಸ ಪಡಬೇಕಾಯಿತು. ಈ ಸಮಸ್ಯೆಯನ್ನೇ ಸವಾಲಾಗಿ ಸ್ವೀಕರಿಸಿದೆ ಎಂದು ಮೂಡಬಿದಿರೆ ಆಳ್ವಾಸ್ ಮಹಾ ವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸಬಿತಾ ಮೊನಿಸ್ ಹೇಳಿಕೊಂಡಿದ್ದಾರೆ.

ಏಳನೇ ತರಗತಿಯಿಂದ ಕಾಲಿನಲ್ಲಿ ಬರೆಯಲು ಆರಂಭಿಸಿದೆ. ಅದರಲ್ಲೂ ಯಶಸ್ವಿಯಾದೆ. ಸಮಾಜ ನನ್ನನ್ನು ಗುರುತಿಸಿ ನನ್ನ ಸಾಧನೆಗೆ ಮಾನ್ಯತೆ ನೀಡಿತು. ನಾನು ಒಂದು ವೇಳೆ ನನ್ನ ದೈಹಿಕ ಅಸಾಮರ್ಥ್ಯದ ಬಗ್ಗೆ ಕೊರಗುತ್ತಾ ಕೂತಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ’ ಸಬಿತಾ ಮೊನಿಸ್ ಹೇಳಿದರು.

ಕಾಲೇಜು ಶಿಕ್ಷಣ ಇಲಾಖೆ ಮತ್ತು ಪುತ್ತೂರಿನ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಜಂಟಿ ಆಶ್ರಯದಲ್ಲಿ ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ವಿದ್ಯಾರ್ಥಿಗಳೊಂದಿಗೆ ಅವರು ಸಂವಾದ ನಡೆಸಿದರು.

ವಿಕಲಚೇತನ ಎಂಬುದು ಕೇವಲ ನನ್ನ ದೇಹಕ್ಕೆ ಮಾತ್ರವೇ ಹೊರತು, ಮನಸ್ಸಿಗಲ್ಲ. ಕೊರಗುವುದನ್ನು ಬಿಟ್ಟು ಆತ್ಮವಿಶ್ವಾಸದಿಂದ ಬದುಕಲು ಕಲಿತೆ. ಉದ್ಯೋಗ ಮಾಡಬೇಕೆಂಬ ಆಸೆಯಿದ್ದರೂ ಅಳುಕಿತ್ತು. ಅಂಥ ಸಂದರ್ಭದಲ್ಲಿ ಆಳ್ವಾಸ್ ಸಂಸ್ಥೆಯ ಡಾ. ಎಂ. ಮೋಹನ ಆಳ್ವ ಅವರು ಅವಕಾಶ ಕೊಟ್ಟರು.

ನನಗೆ ಯಾರೂ ಪ್ರೇರಣೆಯಿಲ್ಲ. ನನಗೆ ನಾನೇ ಪ್ರೇರಣೆ. ಏನಾದರೂ ಸಾಧಿಸಬೇಕು. ಬದುಕಿನಲ್ಲಿ ಮೂಲೆ ಗುಂಪಾಗಬಾರದು ಎಂದು ಭಾವಿಸಿಕೊಂಡೆ. ಅದೇ ನನಗೆ ಪ್ರೇರಣೆ ಆಯಿತು.

“ನಾನು ಡಿಫ್ರೆಂಟ್ ಆಗಿದ್ದೇನೆ ಎಂದು ನನಗೆ ಯಾವತ್ತೂ ಅನಿಸಿಲ್ಲ. ಎಲ್ಲರಂತೆ ಇದ್ದೇನೆ ಎಂದೇ ಭಾವಿಸಿಕೊಂಡಿದ್ದೇನೆ’. ನನಗಾಗಲಿ, ನನ್ನಂಥವರಿಗಾಗಲಿ ಸಮಾಜ ಅನುಕಂಪ ತೋರಿಸಬೇಕಾಗಿಲ್ಲ. ಅನುಕಂಪವನ್ನು ನಾವು ನಿರೀಕ್ಷಿಸುವುದೂ ಇಲ್ಲ. ಅದರ ಬದಲಾಗಿ ಅವಕಾಶ ನೀಡಿ ಎಂದಷ್ಟೇ ಕೇಳುತ್ತೇನೆ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English