ಸುಳ್ಯ: ಅಡಿಕೆ ಕ್ಯಾನ್ಸರ್ ಕಾರಕ ಎಂಬ ವರದಿಯನ್ನು ಹಿಂಪಡೆಯುವ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿಕೆ ನೀಡಬೇಕು. ಈ ಕುರಿತು ಸ್ಪಷ್ಟ ನಿಲುವು ವ್ಯಕ್ತಪಡಿಸದೇ ಇದ್ದರೆ ಪ್ರಧಾನಿ ರಾಜ್ಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಅಡಿಕೆ ಬೆಳೆಗಾರರನ್ನು ಸೇರಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿ’ಸೋಜಾ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡಿಕೆ ವಿಷಕಾರಕ ಎಂದು ಕೇಂದ್ರ ಆರೋಗ್ಯ ಸಚಿವರು ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಈ ಬಗ್ಗೆ ಅಡಿಕೆ ಬೆಳೆಗಾರರ ಮತ ಪಡೆದು ಗೆದ್ದ ನಮ್ಮ ರಾಜ್ಯದ ಬಿಜೆಪಿ ಸಂಸದರಾಗಲಿ, ಕೇಂದ್ರದಲ್ಲಿರುವ ರಾಜ್ಯದ ಸಚಿವರಾಗಲೀ ತುಟಿ ಬಿಚ್ಚಿಲ್ಲ ಎಂದು ಆರೋಪಿಸಿದರು.
ಅಡಿಕೆ ವಿಷಕಾರಕ ಎಂಬ ವರದಿಯನ್ನು ಯುಪಿಎ ಸರಕಾರ ಆರಂಭದಲ್ಲಿ ಸಲ್ಲಿಸಿದ್ದರೂ ಅನಂತರ ವಿಷಕಾರಕ ಅಲ್ಲ ಎಂಬ ವರದಿಯನ್ನು ನೀಡಿತ್ತು. ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಆದರೂ ಹಿಂದಿನ ವರದಿಯನ್ನು ಹಿಂಪಡೆದು ಹೊಸ ವರದಿಯನ್ನು ಸಲ್ಲಿಸಿಲ್ಲ ಎಂದು ಅವರು ಹೇಳಿದರು.
ರಾಜ್ಯ ಸರಕಾರ ಅಡಿಕೆ ಬೆಳೆಗಾರರ ಹಿತ ಕಾಯಲು ಹಲವು ಯೋಜನೆಗಳನ್ನು ರೂಪಿಸಿದೆ. ಅಡಿಕೆಗೆ ಕೊಳೆ ರೋಗ ತಗುಲಿದಾಗ ಅದಕ್ಕೆ ಪರಿಹಾರವನ್ನು ವಿತರಿಸಲಾಗಿದೆ. ಅಡಿಕೆ ಬೆಳೆಗಾರರ ರಕ್ಷಣೆಗೆ ಬೆಳೆಗಾರರ ಮಂಡಳಿ ರಚಿಸಬೇಕೆಂಬ ಬೇಡಿಕೆಯನ್ನು ಪರಿಗಣಿಸಿ ತಜ್ಞರ ವರದಿಯನ್ನು ತರಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಸಂಸದ ನಳಿನ್‌ಕುಮಾರ್ ಕಟೀಲು ಮುಖ್ಯಮಂತ್ರಿಯವರನ್ನು ನಿಂದಿಸಿ ಮಾತನಾಡಿರುವುದು ಖಂಡನೀಯ. ಸಂಸದರು ಕ್ಷಮೆಯಾಚಿಸಬೇಕು. ಸಂವಿಧಾನಾತ್ಮಕವಾಗಿ ಆಯ್ಕೆಯಾದ ಜನಪ್ರತಿನಿಧಿ ಈ ರೀತಿ ಮಾತನಾಡುವುದು ಅವರಿಗೆ ಶೋಭೆಯಲ್ಲ ಎಂದು ಐವನ್ ಡಿ’ಸೋಜಾ ಹೇಳಿದರು.
ಎಸ್.ಅಂಗಾರ ಅವರ ನಿರ್ಲಕ್ಷ್ಯತನ ಮತ್ತು ಸಾರ್ವಜನಿಕರ ಅಸಹಕಾರ ದಿಂದಾಗಿ ಸುಳ್ಯದ 110 ಕೆ.ವಿ. ಸಬ್‌ಸ್ಟೇಶನ್ ನನೆಗುದಿಗೆ ಬಿದ್ದಿದೆ ಎಂದು ಐವನ್ ಡಿ”ಸೋಜಾ ಆರೋಪಿಸಿದ್ದಾರೆ.
ಸುಳ್ಯಕ್ಕೆ 110 ಕೆ.ವಿ. ಸಬ್‌ಸ್ಟೇಶನ್ ಅನುಷ್ಠಾನ ಮಾಡಲು ಸರಕಾರ ಎಲ್ಲ ಸಹಕಾರವನ್ನು ನೀಡಿದೆ. ಆದರೆ ಸಬ್‌ಸ್ಟೇಶನ್ ಅನುಷ್ಠಾನ ಮಾಡಲು ಸ್ಥಳೀಯ ಶಾಸಕರು ಆಸಕ್ತಿ ವಹಿಸಿಲ್ಲ ಮತ್ತು ಲೈನ್ ಎಳೆಯಲು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ ಕಾರಣ ಇದು ಅನುಷ್ಠಾನ ಆಗಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡಗಾಯ, ಮುಖಂಡರಾದ ಕಾವು ಹೇಮನಾಥ ಶೆಟ್ಟಿ, ಎಸ್. ಸಂಶುದ್ದೀನ್, ಪಿ.ಎಸ್. ಗಂಗಾಧರ, ಅಶೋಕ್ ನೆಕ್ರಾಜೆ, ಗೀತಾ ಕೋಲ್ಚಾರ್, ಚಂದ್ರಶೇಖರ ಕಾಮತ್, ಸಿದ್ದಿಕ್, ಅಶೋಕ್ ಚೂಂತಾರು, ನಿತ್ಯಾನಂದ ಶೆಟ್ಟಿ, ಸಿ.ಜೆ. ಸೈಮನ್, ಮಹಮ್ಮದ್ ಫವಾಝ್, ಶರೀಫ್ ಕಂಠಿ, ಧರ್ಮಪಾಲ ಕೊçಂಗಾಜೆ, ಸುಧೀರ್ ರೈ ಮೇನಾಲ, ಸುಜಯಕೃಷ್ಣ, ಜೂಲಿಯಾ ಕ್ರಾಸ್ತಾ, ಕೆ.ಎಂ. ಮುಸ್ತಫಾ, ಭವಾನಿಶಂಕರ ಕಲ್ಮಡ್ಕ, ಸತ್ಯಕುಮಾರ ಆಡಿಂಜ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English