ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಮುಸ್ಲಿಮರಿಗೆ ನೀಡದ ಹಿನ್ನೆಲೆಯಲ್ಲಿ ಅತೃಪ್ತಗೊಂಡಿರುವ ಕಾಂಗ್ರೆಸ್ಸಿನ ಮುಸ್ಲಿಮರ ನಿಯೋಗ ಶುಕ್ರವಾರ ಬೆಳಗ್ಗೆ ಸರ್ಕ್ಯೂಟ್ ಹೌಸ್‌ನಲ್ಲಿ ಸಚಿವ ಖಾದರ್ ರನ್ನು ಭೇಟಿಯಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಸಚಿವ ರಮಾನಾಥ ರೈ ಅವರ ಕಾರ್ಯವೈಖರಿಯ ಬಗ್ಗೆ ತೀವ್ರ ಆಕ್ಷೇಪ ಸಲ್ಲಿಸಿದ ಕಾಂಗ್ರೆಸ್ಸಿನ ಮುಸ್ಲಿಮರ ನಿಯೋಗ ‘ತಾವು ನ್ಯಾಯಯುತವಾಗಿ ಬೇಡಿಕೆ ಸಲ್ಲಿಸಿದ್ದೆವು. ಒಗ್ಗಟ್ಟು ಮೂಡಿಸುವುದಕ್ಕಾಗಿ ಸಭೆ ನಡೆಸಿದೆವು. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡ ಸಚಿವ ರೈ ತಮ್ಮನ್ನು ಮೂಲಭೂತವಾದಿ ಎನ್ನುತ್ತಿದ್ದಾರೆ. ಕಾಂಗ್ರೆಸ್ಸಿಗರೇ ಅಲ್ಲ ಎನ್ನುತ್ತಿದ್ದಾರೆ. ಇದಕ್ಕೆ ಸ್ಪಷ್ಟಣೆ ಬೇಕು’ ಎಂದು ಒತ್ತಾಯಿಸಿದರು. ಅಲ್ಲದೆ ಪಕ್ಷದ ವಿವಿಧ ಜವಾಬ್ದಾರಿಯುತ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸುವುದಾಗಿ ತಿಳಿಸಿದರು.
ಅತೃಪ್ತ ಕಾಂಗ್ರೆಸ್ಸಿಗರ ಅಹವಾಲನ್ನು ಆಲಿಸಿದ ಸಚಿವ ಖಾದರ್, ಆತುರಪಡದೆ ಸಂಯಮ ಪಾಲಿಸುವಂತೆ ಸೂಚಿಸಿದರಲ್ಲದೆ, ರಾಜೀನಾಮೆ ಸಲ್ಲಿಸದಂತೆ ಮನ ಒಲಿಸುವ ಪ್ರಯತ್ನ ಮಾಡಿದರು. ಆದರೆ, ಅತೃಪ್ತ ಕಾಂಗ್ರೆಸ್ಸಿಗರು ತಮ್ಮ ಪಟ್ಟನ್ನು ಬಿಗಿಗೊಳಿಸಿದ್ದಾರೆ.
ಸಭೆಯಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎನ್.ಎಸ್.ಕರೀಂ, ಕರಾವಳಿ ವಲಯ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಯು.ಬಿ.ಸಲೀಂ ಉಳ್ಳಾಲ, ಎನ್‌ಎಸ್‌ಯುಐ ಮಾಜಿ ಅಧ್ಯಕ್ಷ ಅಲ್ತಾಫ್, ಶರೀಫ್ ಚೊಕ್ಕಬೆಟ್ಟು, ಹಾರಿಸ್ ಬೈಕಂಪಾಡಿ ಮತ್ತಿತರರು ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English