ಮಂಗಳೂರು: ಸುರತ್ಕಲ್ ಮಾರುಕಟ್ಟೆ ನಿರ್ಮಾಣ ಪ್ರಕ್ರಿಯೆ ಭ್ರಷ್ಟಾಚಾರದಿಂದ ಕೂಡಿದೆ ಎಂದು ಆರೋಪಿಸಿ ಕಳೆದ ಏಳು ದಿನಗಳಿಂದ ಹಗಲು ರಾತ್ರಿ ಧರಣಿ ನಡೆಸುತ್ತಿರುವ ಡಿವೈಎಫ್‌ಐ ಸಂಘಟನೆ, ತಾತ್ಕಾಲಿಕ ಮಾರಕುಟ್ಟೆ ಕಟ್ಟಡ ನಿರ್ಮಾಣ ಹಾಗೂ ಟೆಂಡರ್ ಪ್ರಕ್ರಿಯೆಯಲ್ಲಿ ಆಗಿರುವ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
ಸುರತ್ಕಲ್‌ನ ಇಂದಿರಾ ಕ್ಯಾಂಟೀನ್ ಬಳಿ ಅನಿರ್ದಿಷ್ಟ ಧರಣಿ ನಡೆಸಲಾಗುತ್ತಿರುವ ಸ್ಥಳದಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸುರತ್ಕಲ್ ಮಾರುಕಟ್ಟೆ ಭ್ರಷ್ಟಾಚಾರದ ಆಗರವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಬೇಕು. ಸಾರ್ವಜನಿಕ ಆಸ್ತಿಯನ್ನು ದುರ್ಬಳಕೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆ ಸ್ಥಳಾಂತರ, ನಿರ್ಮಾಣ, ಅಂಗಡಿ ಹಂಚಿಕೆಯನ್ನು ಕ್ರಮಬದ್ಧವಾಗಿರಬೇಕು. ಅಕ್ರಮವಾಗಿ ನಡೆದಿರುವ ಅಂಗಡಿ ಹಂಚಿಕೆ ಪ್ರಕ್ರಿಯೆಯನ್ನು ರದ್ದುಪಡಿಸಿ ಹೊಸತಾಗಿ ನಡೆಸಬೇಕು ಎಂದು ಒತ್ತಾಯಿಸಿದರು.
120 ಕೋಟಿ ರೂ. ವೆಚ್ಚದಲ್ಲಿ ಬಹುಮಹಡಿ ಮಾರುಕಟ್ಟೆ ನಿರ್ಮಿಸುವ ಯೋಜನೆಯ ಹಿನ್ನೆಲೆಯಲ್ಲಿ ಹಳೆಯ ಮಾರುಕಟ್ಟೆಯ ವ್ಯಾಪಾರಸ್ಥರನ್ನು ತಾತ್ಕಾಲಿಕ ವಾಗಿ ಸ್ಥಳಾಂತರಿಸಲು ಸಮೀಪದ ರಂಗ ಮಂದಿರದ ಮೈದಾನದಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ಅಂಗಡಿ ಕಟ್ಟಡ ನಿರ್ಮಿಸಲಾಗಿದೆ.
ಈ ಅಂಗಡಿಗಳನ್ನು ವಿತರಿಸುವಾಗ ನಗರ ಪಾಲಿಕೆ ನಿಯಮಗಳನ್ನು ಪೂರ್ಣವಾಗಿ ಉಲ್ಲಂಘಿಸಿದೆ. ಸಾಮಾನ್ಯವಾಗಿ ಮಾರುಕಟ್ಟೆ ವ್ಯಾಪಾರಿಗಳನ್ನು ಸ್ಥಳಾಂತರಿಸುವ ವೇಳೆ ಸಾಕಷ್ಟು ಕಾಲಾವಕಾಶ ನೀಡಿ ಪ್ರತಿ ಅಂಗಡಿದಾರರಿಗೂ ಪ್ರತ್ಯೇಕ ನೋಟೀಸು ನೀಡಬೇಕಿದೆ ನೋಟೀಸಿನಲ್ಲಿ ಸ್ಥಳಾಂತರದ ಉದ್ದೇಶ, ತಾತ್ಕಾಲಿಕ ಅಂಗಡಿ ವಿತರಿಸುವ ವಿಧಾನ, ಹೊಸ ಮಾರುಕಟ್ಟೆ ನಿರ್ಮಾಣವಾಗಲು ಬೇಕಾಗುವ ಅವಧಿ, ಹೊಸ ಮಾರುಕಟ್ಟೆಯಲ್ಲಿ ಅಂಗಡಿ ಪಡೆಯುವಾಗ ಪಾಲಿಸಬೇಕಾದ ನಿಯಮಗಳನ್ನು ಸ್ಪಷ್ಟವಾಗಿ ನಮೂದಿಸಬೇಕು.
ಆದರೆ ಸುರತ್ಕಲ್ ಮಾರುಕಟ್ಟೆದಾರರಿಗೆ ಈ ಬಗ್ಗೆ ಯಾವುದೇ ಅಧಿಕೃತ ನೋಟೀಸು ನೀಡಿಲ್ಲ. ಮಾನ್ಯತೆ ಇಲ್ಲದ ಪತ್ರಗಳನ್ನು ಹಂಚಿ ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿದೆ. ಮುಂದಕ್ಕೆ ನಿರ್ಮಾಣವಾಗಲಿರುವ ನೂತನ ಮಾರುಕಟ್ಟೆಯಲ್ಲಿ ಅಂಗಡಿ ನೀಡುವ ಯಾವುದೇ ಖಾತರಿ ಅಂಗಡಿದಾರರಿಗೆ ನೀಡಲಾಗಿಲ್ಲ. ತಾತ್ಕಾಲಿಕ ಮಾರುಕಟ್ಟೆ ಅಂಗಡಿಗಳನ್ನು ಹಂಚುವಾಗಲೂ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದರು.
ಅಂಗಡಿ ಹಂಚಿಕೆಯ ಲಾಟರಿ ಎತ್ತುವ ವಿಧಾನದಲ್ಲಿ ಪಾಲಿಕೆ ಆಯುಕ್ತರು ಹಾಗೂ ಶಾಸಕರ ಆಪ್ತರಿಗೆ, ಬಲಾಢ್ಯ ಮಾರುಕಟ್ಟೆ ಲಾಬಿಗಳಿಗೆ ಆಯಕಟ್ಟಿನ ಸ್ಥಳದ ಅಂಗಡಿಗಳನ್ನು ದೊರಕಿಸಲು ಅನುಕೂಲವಾಗುವಂತೆ ಮಾಡಲಾಗಿದೆ. ಇಂತಹ ತಪ್ಪಾದ ದಾರಿಯಲ್ಲಿ ಅಂಗಡಿಗಳನ್ನು ಪಡೆದವರು ನಂತರ ಅಂಗಡಿ ಕಟ್ಟಡವನ್ನು ತಮಗೆ ಬೇಕಾದಂತೆ ಒಡೆದು ಹಾಕಿ ವಿರೂಪಗೊಳಿಸಿದ್ದಾರೆ. ಮನಬಂದಂತೆ ಕಟ್ಟಡ ಬದಲಾಯಿಸಿದ್ದಾರೆ.
ಇದರಿಂದ ಪಾಲಿಕೆಗೆ ಲಕ್ಷಾಂತರ ರೂ. ನಷ್ಟವಾಗಿದೆ. ಜಿಲ್ಲಾಧಿಕಾರಿಗೆ ದೂರು ನೀಡಿದ ನಂತರ ನಗರ ಪಾಲಿಕೆಯು ಕಟ್ಟಡ ಕೆಡವಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಆದರೆ ಶಾಸಕರು ಹಾಗೂ ಪಾಲಿಕೆ ಆಯುಕ್ತರ ಕುಮ್ಮಕ್ಕಿನಿಂದ ಮತ್ತೆ ಅದೇ ಮಾರುಕಟ್ಟೆ ಲಾಬಿಗಳು ಕಟ್ಟಡ ಒಡೆಯುವುದ್ನು ಮುಂದುವರಿಸಿದಾಗ ಡಿವೈಎಫ್‌ಐನಿಂದ ಅದಕ್ಕೆ ತಡೆಯೊಡ್ಡಿ ಕಾನೂನು ಪಾಲಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿದರು.
ಗೋಷ್ಠಿಯಲ್ಲಿ ಬಿ.ಕೆ. ಇಮ್ತಿಯಾಝ್, ಅಜ್ಮಲ್ ಅಹ್ಮದ್, ಮಕ್ಸೂದ್, ಶ್ರೀನಿವಾಸ ಹೊಸಬೆಟ್ಟು, ಯಾದವ ದೇವಾಡಿಗ, ಅಶ್ರಫ್, ಚೆರಿಯೋನು, ಸುನೀತಾ, ಎಂ.ಡಿ. ಇಸ್ಮಾಯಿಲ್, ಅಬೂಬಕರ್ ಬಾವ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English