ಉಡುಪಿ: ಭೂ ಕಬಳಿಕೆ ಹಾಗೂ ಒತ್ತುವರಿ ವಿಚಾರವಾಗಿ ಬೆಂಗಳೂರಿನ ವಿಶೇಷ ನ್ಯಾಯಾಲಯ ಉಡುಪಿ ಜಿಲ್ಲಾಧಿಕಾರಿಗೆ ಬಂಧನ ವಾರೆಂಟ್ ಜಾರಿಗೊಳಿಸಿದೆ. ಭೂ ಕಬಳಿಕೆ ಹಾಗೂ ಒತ್ತುವರಿ ವಿಚಾರವಾಗಿ ಉಡುಪಿ ಜಿಲ್ಲಾಧಿಕಾರಿ ನ್ಯಾಯಾಲಯದ ಆದೇಶ ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಬಂಧನ ವಾರಂಟ್ ಜಾರಿ ಮಾಡಲಾಗಿದೆ.
ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆಯಡಿ ಸ್ಥಾಪಿಸಲಾದ ಈ ನ್ಯಾಯಾಲಯವು ಜಿಲ್ಲೆಯಲ್ಲಿ ನಡೆದ ಭೂ ಒತ್ತುವರಿ, ಕೆರೆ ಒತ್ತುವರಿ ಬಗ್ಗೆ ಜಿಲ್ಲಾಡಳಿತ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಕೇಳಿತ್ತು. ಆದರೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾಹಿತಿ ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯವು ಮಾರ್ಚ್ 8 ರಂದು ಮಂಗಳೂರು ಐಜಿ ಕಚೇರಿಗೆ ವಾರೆಂಟ್ ಪ್ರತಿ ಕಳುಹಿಸಿತ್ತು.
ಇದೀಗ ಆ ವಾರೆಂಟ್ ಪ್ರತಿ ಉಡುಪಿ ಎಸ್ಪಿ ಕಚೇರಿ ತಲುಪಿದ್ದು, ಜಿಲ್ಲಾಧಿಕಾರಿಗೆ ಬಂಧನ ಭೀತಿ ಎದುರಾಗಿದೆ. ಆದರೆ ಇದೊಂದು ಜಾಮೀನು ಸಹಿತ ವಾರೆಂಟ್ ಆಗಿದ್ದು, 10 ಸಾವಿರ ರೂಪಾಯಿಯ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ಒದಗಿಸಿದಲ್ಲಿ ಜಾಮೀನು ಸಿಗಲಿದೆ. ಇನ್ನು ಮಾರ್ಚ್ 13 ರಂದು ವಿಶೇಷ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ನಾಯಾಲಯ ಸೂಚಿಸಿದೆ.
ಇದರಿಂದಾಗಿ ಜಿಲ್ಲಾಧಿಕಾರಿಯವರು ನ್ಯಾಯಾಲಯಕ್ಕೆ ಹಾಜರಾಗಲು ಮುಂದಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಭೂ ಒತ್ತುವರಿ ಕುರಿತು ತಾಲೂಕಿನ ತಹಶೀಲ್ದಾರರು ವರದಿ ನೀಡುವಲ್ಲಿ ವಿಫಲರಾದ ಕಾರಣ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ನ್ಯಾಯಾಲಯಕ್ಕೆ ಸಮರ್ಪಕ ಮಾಹಿತಿ ಒದಗಿಸಲು ವಿಫಲರಾಗಿದ್ದರು. ಇದರಿಂದ ಬಂಧನ ವಾರೆಂಟ್ ಎದುರಿಸುವಂತಾಗಿದೆ ಎಂದು ಹೇಳಲಾಗಿದೆ.
Click this button or press Ctrl+G to toggle between Kannada and English