ಮಂಗಳೂರು: ಸುಮಾರು 11 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಮುಖ್ಯ ರಸ್ತೆಯನ್ನು ಶನಿವಾರ ಮಂಗಳೂರು ಉತ್ತರ ಶಾಸಕ ಬಿ.ಎ. ಮೊಹಿದೀನ್ ಬಾವಾ ಉದ್ಘಾಟಿಸಿದರು.
ಬಳಿಕ ಕೆಐಎಡಿಬಿ ಕಚೇರಿ ಮುಂಭಾಗ ನಡೆದ ಸಮಾರಂಭದಲ್ಲಿ ಮಾತನಾಡಿದ ಶಾಸಕರು, ರಾಜ್ಯದ ಪ್ರಮುಖ ಕೈಗಾರಿಕಾ ಪ್ರದೇಶವಾಗಿರುವ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬೃಹತ್ ಮೊತ್ತದ ಅನುದಾನವನ್ನು ನೀಡಿ, ರಸ್ತೆ . ಇಲ್ಲಿನ ರಸ್ತೆ ಅಭಿವೃದ್ಧಿ ಪಡಿಸಬೇಕೆಂಬ ಉದ್ಯಮಿಗಳ ಹಾಗೂ ಸ್ಥಳೀಯ ನಾಗರೀಕರ ಎರಡು ದಶಕಗಳ ಬೇಡಿಕೆಯನ್ನು ಈಡೇರಿಸಲಾಗಿದೆ. ಉತ್ತಮ ಗುಣಮಟ್ಟದ ಕಾಂಕ್ರೀಟಿ ರಸ್ತೆ, ಚರಂಡಿ ಹಾಗೂ ಫುಟ್‌ಪಾತ್ ನಿಮಾಣವನ್ನು ಮಾಡಲಾಗಿದೆ ಎಂದರು.
ಪ್ರಸಕ್ತ ಬೈಕಂಪಾಡಿ ಬಿ.ಎಸ್.ಎನ್.ಎಲ್. ಕಚೇರಿಯಿಂದ ಕೆಐಎಡಿಬಿ-ಅಡ್ಕಾ-ಪೊಲೀಸ್ ಸ್ಟೇಷನ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಯವರೆಗೆ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಕೆಐಎಡಿಬಿ ಕಚೇರಿಯಿಂದ ಅಂಗರಗುಂಡಿ-ಕುಡುಂಬೂರು-ಮುಂಗಾರು ಮೂಲಕ ಜೋಕಟ್ಟೆ ಮಾಡಿಲ ಸೇತುವೆಯರೆಗೆ ರಸ್ತೆ ಅಬಿವೃದ್ಧಿಪಡಿಸಲಾಗುವುದು. ಇದರಿಂದ ಬೈಕಂಪಾಡಿ ಕೈಗಾರಿಕಾ ಪ್ರದೇಶ ಮುಖ್ಯ ರಸ್ತೆ ಸಂಪೂರ್ಣವಾಗಿ ಸಂಚಾರಕ್ಕೆ ಸುಗಮವಾಗಲಿದೆ ಎಂದು ಶಾಸಕ ಮೊಹಿದೀನ್ ಬಾವಾ ತಿಳಿಸಿದರು.
ಬೈಕಂಪಾಡಿಯಿಂದ ಜೋಕಟ್ಟೆ ಮೂಲಕ ಕೆಂಜಾರು ವಿಮಾನನಿಲ್ದಾಣಕ್ಕೆ ನೇರರಸ್ತೆ ನಿರ್ಮಿಸಲು ತನ್ನ ಚಿಂತನೆಯಲ್ಲಿದೆ. ಇದು ನಿರ್ಮಾಣವಾದರೆ ಬೈಕಂಪಾಡಿ ಕೈಗಾರಿಕಾ ಪ್ರದೇಶದಿಂದ ವಿಮಾನನಿಲ್ದಾಣಕ್ಕೆ ಸುಮಾರು 5 ಕಿಲೋ ಮೀಟರ್ ಹತ್ತಿರವಾಗಲಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಒತ್ತು ನೀಡಲಾಗುವುದು ಎಂದು ಶಾಸಕರು ತಿಳಿಸಿದರು.
ಬೈಕಂಪಾಡಿ ಕೈಗಾರಿಕಾ ಪ್ರದೇಶಲ್ಲಿ ಇರುವ ಅಂಗರಗುಂಡಿ ಮತ್ತು ಕುಡುಂಬೂರು ಜನವಸತಿ ಪ್ರದೇಶಗಳಿಗೆ ಒಣಚರಂಡಿ ಡ್ರೈನೇಜ್ ವ್ಯವಸ್ಥೆಗೆ ಈಗಾಗಲೆ ಮಹಾನಗರಪಾಲಿಕೆಯ ಎಡಿಬಿ ೨ನೇ ಹಂತದ ಯೋಜನೆಯಲ್ಲಿ ಅನುಮೋದನೆ ಸಿಕ್ಕಿದ್ದು, ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕರು ತಿಳಿಸಿದರು.
ಸಮಾರಂಭದಲ್ಲಿ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಉದ್ಯಮಿಗಳಾದ ಹೇಮಂತ್, ನಝೀರ್, ಆಸ್ಗರ್ ಆಲಿ, ನಾಸೀರ್ ಲಕ್ಕಿಸ್ಟಾರ್, ಸದಾಶಿವ ಶೆಟ್ಟಿ, ಬೈಕಂಪಾಡಿ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ನವೀನ್ ಶ್ರೀಯಾನ್, ಹಾರೀಸ್, ಸ್ಥಳೀಯ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಇಲ್ಯಾಸ್ ಮತ್ತಿತರರು ಇದ್ದರು. ಸೈದುದ್ದೀನ್ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English