ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಣಿ ಅಬ್ಬಕ್ಕ ರಾಷ್ಟ್ರೀಯ ಉತ್ಸವಕ್ಕೆ ಚಾಲನೆ

11:10 AM, Monday, March 12th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

abbakkaಮಂಗಳೂರು: ಇತಿಹಾಸದಲ್ಲಿ ಅವಾಸ್ತವಿಕ ಅಂಶಗಳನ್ನು ತುರುಕಲಾಗಿದ್ದು, ಇತಿಹಾಸದ ಮರುಪರಿಶೀಲನೆ ಆಗಬೇಕಿದೆ. ರಾಣಿ ಅಬ್ಬಕ್ಕ ಅವರಿಗೆ ಇತಿಹಾಸದಲ್ಲಿ ಸೂಕ್ತ ಸ್ಥಾನ-ಮನ್ನಣೆ ಸಿಗಬೇಕು. ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಝಾನ್ಸಿ ಅವರಂತೆ ಪಠ್ಯದಲ್ಲಿ ಹಾಗೂ ಸಮಾಜದಲ್ಲಿ ಅಬ್ಬಕ್ಕನವರ ಹೋರಾಟ, ಧೀಮಂತಿಕೆಯನ್ನು ಸಾರುವ ಅಗತ್ಯವಿದೆ ಎಂದು ಖ್ಯಾತ ಚಿತ್ರಕಲಾವಿದ ಹಾಗೂ ಕೇಂದ್ರ ಲಲಿತ ಕಲಾ ಅಕಾಡೆಮಿಯ ಆಡಳಿತಾಧಿಕಾರಿ ಕೃಷ್ಣ ಶೆಟ್ಟಿ ಅಭಿಪ್ರಾಯಪಟ್ಟರು.

ಅವರು ದೆಹಲಿ ಕರ್ನಾಟಕ ಸಂಘದ ಸಹಯೋಗದಲ್ಲಿ ದಿನಾಂಕ11-03-2018ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಅಬ್ಬಕ್ಕ ಉತ್ಸವ ಸಮಿತಿ ಆಯೋಜಸಿದ್ದ ರಾಣಿ ಅಬ್ಬಕ್ಕ ರಾಷ್ಟ್ರೀಯ ಉತ್ಸವ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪೋರ್ಚುಗೀಸರನ್ನು ಹಲವು ಯುದ್ಧಗಳಲ್ಲಿ ಸೋಲಿಸಿದ ದಿಟ್ಟ ಮಹಿಳೆ ಅಬ್ಬಕ್ಕ. 13ನೇ ಶತಮಾನದಲ್ಲಿ ಅತ್ಯಾಧುನಿಕ ಸೈನ್ಯ ಹೊಂದಿದ್ದ ಪೋರ್ಚುಗೀಸರನ್ನು ತಮ್ಮ ಸಾಂಪ್ರದಾಯಿಕ ಯುದ್ಧ ಪರಿಣತಿ ಮೂಲಕ ಮಣಿಸಿದ ಅಬ್ಬಕ್ಕ ಅವರ ಸಾಧನೆ ಶೌರ್ಯದ ಪ್ರತೀಕ ಎಂದು ದೆಹಲಿ ಸರಕಾರದ ಜಿಎಸ್‌ಟಿ ಕಮಿಷನರ್, ಐಎಎಸ್ ಅಧಿಕಾರಿ ರಾಜೇಶ್ ಪ್ರಸಾದ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಣಿ ಅಬ್ಬಕ್ಕ ಸಿಂಹಾಸನ ಲಾಲಸೆಗಾಗಿ ಹೋರಾಡಲಿಲ್ಲ. ಅವರ ಹೋರಾಟದಲ್ಲಿ ಸ್ವಾಭಿಮಾನವಿತ್ತು. ಪೋರ್ಚುಗೀಸರಿಗೆ ಕಪ್ಪ ಕಾಣಿಕೆ ನೀಡಬಾರದು ಎನ್ನುತ್ತಾ ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧವೂ ಸೆಟೆದು ನಿಂತರು. ಆದರೆ ಪಠ್ಯ ಪುಸ್ತಕಗಳಲ್ಲಿ ಅಬ್ಬಕ್ಕ ಅವರ ಸಾಧನೆಯ ಬಗ್ಗೆ ಉಲ್ಲೇಖವಿಲ್ಲ. ಅಬ್ಬಕ್ಕರ ಬಗ್ಗೆ ಇನ್ನಷ್ಟು ಸಂಶೋಧನೆ ಆಗಬೇಕು ಎಂದು ರಾಣಿ ಅಬ್ಬಕ್ಕ ಬಗ್ಗೆ ತುಳುವಿನಲ್ಲಿ ಉಪನ್ಯಾಸ ನೀಡಿದ ದೆಹಲಿ ಕನ್ನಡ ಶಾಲೆಯ ಅಧ್ಯಾಪಕ ಅರವಿಂದ ಬಿಜೈ ಹೇಳಿದರು.

abbakka-2ರಾಣಿ ಅಬ್ಬಕ್ಕ ದೇಶದಲ್ಲೇ ಮೊತ್ತ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದರೂ ಕರ್ನಾಟಕದ ಅಥವಾ ದೇಶದ ಚರಿತ್ರೆಯಲ್ಲಿ ಸೂಕ್ತ ಸ್ಥಾನ ಸಿಗದಿರುವುದು ವಿಷಾದನೀಯ ಎಂದು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ ಪ್ರಾಸ್ತವಿಕ ನುಡಿಯಲ್ಲಿ ತಿಳಿಸಿದರು. ಅವರ ಸಾಧನೆಯನ್ನು ದೇಶಾದ್ಯಂತ ಪ್ರಚುರಪಡಿಸಬೇಕಿದೆ. ಈ ನಿಟ್ಟಿನಲ್ಲಿ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಉತ್ಸವವನ್ನು ಒಂದು ವಾರಗಳ ಕಾಲ ದೆಹಲಿಯ ವಿವಿಧ ಭಾಗಗಳಲ್ಲಿ, ಬೇರೆಬೇರೆ ಭಾಷೆಗಳಲ್ಲಿ ಆಯೋಜಿಸುತ್ತಿದ್ದೇವೆ ಎಂದರು.

abbakka-3ಮಾರ್ಚ್ 18ರಂದು ಅಬ್ಬಕ್ಕ ರಾಷ್ಟ್ರೀಯ ಉತ್ಸವ ಸಮಾರೋಪ ಸಮಾರಂಭ ನಡೆಯಲಿದೆ. ಈ ವಾರಪೂರ್ತಿ ಅಬ್ಬಕ್ಕ ಅವರ ಬಗ್ಗೆ ಕನ್ನಡ, ಮರಾಠಿ, ಮಾಲಯಳಂ, ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲೀಷ್‌ನಲ್ಲಿ ಕರ್ನಾಟಕ ಸಂಘ, ಕನ್ನಡ ಶಾಲೆ ಮತ್ತು ಜೆಎನ್‌ಯುವಿನಲ್ಲಿ ಅಬ್ಬಕ್ಕ ಅವರ ಬಗ್ಗೆ ಉಪನ್ಯಾಸ ನಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗಮ ಕಲಾವಿದರು ಮಣಿಪಾಲ್ ಅವರಿಂದ ತುಳು ನಾಟಕ ’ವಾಲಿ ವಧೆ’ ಪ್ರದರ್ಶನ ನಡೆಯಿತು.

ಕಾರ್ಯಕಾರಿ ಸಮಿತಿ ಸದಸ್ಯೆ ಶ್ರೀಮತಿ ಪೂಜಾ ರಾವ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಎಂ.ನಾಗರಾಜ ವಂದಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English