ನವದೆಹಲಿ : ರಾಜ್ಯಸಭೆ ಸದಸ್ಯೆ, ಬಾಲಿವುಡ್ ಹಿರಿಯ ನಟಿ ಜಯಾ ಬಚ್ಚನ್ ದೇಶದ ಶ್ರೀಮಂತ ಸಂಸದೆ ಎಂಬ ಸಂಗತಿ ಬಯಲಾಗಿದೆ. 4ನೇ ಬಾರಿಗೆ ರಾಜ್ಯಸಭಾ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಜಯಾ ಬಚ್ಚನ್ ತಮ್ಮ ಆಸ್ತಿ ಮೌಲ್ಯ ಒಂದು ಸಾವಿರ ಕೋಟಿ ಎಂದು ಘೋಷಿಸಿಕೊಂಡಿದ್ದಾರೆ.
ಇದರ ಬೆನ್ನಲ್ಲೇ ಸಮಾಜವಾದಿ ಪಕ್ಷದ ಜಯಾ ಬಚ್ಚನ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ನರೇಶ್ ಅಗರ್ವಾಲ್ ಕ್ಷಮೆಯಾಚಿಸಿದ್ದಾರೆ. ಒಬ್ಬ ನಟಿಯಿಂದಾಗಿ ನಾನು ಟಿಕೆಟ್ ಕಳೆದುಕೊಂಡಿರುವುದು ಅವಮಾನಕರ ಎಂದು ನಿನ್ನೆ ಅಗರ್ವಾಲ್ ಹೇಳಿಕೆ ನೀಡಿದ್ದರು. ಇಂದು ತಮ್ಮ ಹೇಳಿಕೆಯನ್ನು ವಾಪಸ್ ಪಡೆದ ಅಗರ್ವಾಲ್ ಕ್ಷಮೆಯಾಚಿಸಿದ್ದಾರೆ.
ಯಾರನ್ನೂ ನೋಯಿಸುವ ಉದ್ದೇಶ ನನಗಿರಲಿಲ್ಲ, ಯಾರಿಯಾಗದರೂ ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆಯಾಚಿಸುವೆ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಅಗರ್ವಾಲ್ ಸ್ಪಷ್ಟಪಡಿಸಿದರು. ಜಯಾ ಬಚ್ಚನ್ ರಾಜ್ಯಸಭೆ ಸದಸ್ಯತ್ವದ ಅವಧಿ ಏಪ್ರಿಲ್ 3ಕ್ಕೆ ಮುಕ್ತಾಯಗೊಂಡಿದ್ದು, ಮರು ಆಯ್ಕೆಗೆ ನಾಮಪತ್ರ ಸಲ್ಲಿಸಿದ್ದಾರೆ.
2012ರಲ್ಲಿ ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಆಸ್ತಿ ಮೌಲ್ಯ 493 ಕೋಟಿ ಎಂದು ಜಯಾ ಘೋಷಿಸಿಕೊಂಡಿದ್ದರು. ಕೇವಲ 6 ವರ್ಷದಲ್ಲಿ ಆಸ್ತಿ ಮೌಲ್ಯ ದುಪ್ಪಟ್ಟಾಗಿರುವುದು ಎಲ್ಲರ ಹುಬ್ಬೇರಿಸಿದೆ. ಬಚ್ಚನ್ ಫ್ಯಾಮಿಲಿಯ ಒಟ್ಟು ಆಸ್ತಿ ಮೌಲ್ಯ ಎಷ್ಟಿರಬಹುದೆಂಬ ಲೆಕ್ಕಾಚಾರ ಬಾಲಿವುಡ್ನಲ್ಲಿ ಜೋರಾಗಿದೆ.
Click this button or press Ctrl+G to toggle between Kannada and English