ಬೆಳ್ತಂಗಡಿ: ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ರಶ್ಯದ ಕಮ್ಯೂನಿಸ್ಟ್ ನಾಯಕ ಲೆನಿನ್ ಪಾತ್ರ ಮಹತ್ತರವಾದುದು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಆರೆಸ್ಸೆಸ್ ಇದೀಗ ಲೆನಿನ್ ಪ್ರತಿಮೆಯನ್ನು ಧ್ವಂಸ ಮಾಡುವ ಮೂಲಕ ಇತಿಹಾಸವನ್ನು ತಿರುಚಲು ಪ್ರಯತ್ನಿಸುತ್ತಿದೆ ಎಂದು ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ, ನ್ಯಾಯವಾದಿ ಶಿವಕುಮಾರ್ ಎಸ್.ಎಂ. ಟೀಕಿಸಿದ್ದಾರೆ.
ತ್ರಿಪುರದಲ್ಲಿ ಬಿಜೆಪಿ, ಐ.ಪಿ.ಎಫ್.ಟಿ. ಕಾರ್ಯಕರ್ತರು ಕಮ್ಯೂನಿಸ್ಟ್ ಪಕ್ಷದ ಕಚೇರಿ, ಕಾರ್ಯಕರ್ತರ ಮೇಲೆ ನಡೆಸುತ್ತಿರುವ ಧಾಳಿಯನ್ನು ಖಂಡಿಸಿ ಸೋಮವಾರ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಬಿಜೆಪಿ ದೇಶದಾದ್ಯಂತ ಅಧಿಕಾರದ ಮದದಲ್ಲಿ ಎದುರಾಳಿಗಳ ಮೇಲೆ ನಿರಂತರ ಧಾಳಿ ಮಾಡುತ್ತಿದ್ದು , ಹಿಟ್ಲರ್ ಇತಿಹಾಸವನ್ನು ದೇಶದಲ್ಲಿ ನೆನಪಿಸುವ ಕೆಲಸದಲ್ಲಿ ಆರೆಸ್ಸೆಸ್ ನಿರತವಾಗಿದೆ. ಆದರೆ ಕಮ್ಯೂನಿಸಂ ನಾಶ ಮಾಡಲು ಹೊರಟ ಹಿಟ್ಲರ್ ಅಂತಿಮವಾಗಿ ಆತ್ಮಹತ್ಯೆ ಮಾಡಿಕೊಂಡಂತೆ ಸಂಘ ಪರಿವಾರದ ಸ್ಥಿತಿ ಆಗಬಹುದು ಎಂದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ನಾಯಕ, ಸಿಐಟಿಯು ತಾಲೂಕು ಕಾರ್ಯದರ್ಶಿ ವಸಂತ ನಡ, ತ್ರಿಪುರಾ ಸೇರಿದಂತೆ ದೇಶಾದ್ಯಂತ ಸಂಘ ಪರಿವಾರದ ಗೂಂಡಗಳಿಂದ ದಾಳಿಗೊಳಗಾದ ಕಮ್ಯೂನಿಸ್ಟ್ ಕಾರ್ಯಕರ್ತರಿಗೆ ನೈತಿಕ ಬೆಂಬಲ ಘೋಷಿಸಿ ಈ ಹೋರಾಟ ನಡೆಸಲಾಗುತ್ತದೆ. ಸಂಘ ಪರಿವಾರ ತನ್ನ ಭಯೋತ್ಪಾದಕತೆಯನ್ನು ನಿಲ್ಲಿಸದಿದ್ದರೆ ಪ್ರತ್ಯುತ್ತರ ನೀಡಲು ನಾವು ಸಿದ್ದ ಎಂದರು.
ಪ್ರತಿಭಟನೆಯ ನೇತೃತ್ವವನ್ನು ಪಕ್ಷದ ಮುಖಂಡರಾದ ಶೇಖರ್ ಲಾಯಿಲ, ರೋಹಿಣಿ ಪೆರಾಡಿ, ಜಯಂತಿ ನೆಲ್ಲಿಂಗೇರಿ, ವಿವಿಧ ಸಾಮೂಹಿಕ ಸಂಘಟನೆಗಳ ನಾಯಕರಾದ ಸುಕನ್ಯಾ ಎಚ್ , ಆಶಾ ಅತ್ತಾಜೆ , ಕೃಷ್ಣ ನೆರಿಯ, ಪದ್ಮನಾಭ ಗರ್ಡಾಡಿ, ಸುಧಾ ಅತ್ತಾಜೆ, ಅನಿಲ್ ಎಂ., ಪದ್ಮಾವತಿ ಮೊದಲಾದವರು ವಹಿಸಿದ್ದರು.
Click this button or press Ctrl+G to toggle between Kannada and English