ಕೊಲ್ಕತ್ತಾ: ಟೀಂ ಇಂಡಿಯಾ ಕ್ರಿಕೆಟರ್ ಮೊಹಮ್ಮದ್ ಶಮಿ ಪತ್ನಿ ಹಸೀನ್ ಜಹಾನ್ ನ್ಯಾಯಕ್ಕಾಗಿ ಸಿಎಂ ಮಮತಾ ಬ್ಯಾನರ್ಜಿ ಮೊರೆ ಹೋಗಲು ನಿರ್ಧರಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪತಿ ಶಮಿ ವಿರುದ್ಧ ಹಸೀನ್ ಜಹಾನ್ ಸರಣಿ ಆರೋಪಗಳನ್ನು ಮಾಡಿದ್ದರು.
ಮ್ಯಾಚ್ ಫಿಕ್ಸಿಂಗ್, ಕೊಲೆ ಯತ್ನ, ಕೌಟುಂಬಿಕ ದೌರ್ಜನ್ಯವೆಸಗಿದ್ದಾರೆ ಎಂದು ಜಹಾನ್ ಆರೋಪಿಸಿದ್ದರು. ಇಂದು ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿ ನ್ಯಾಯಕ್ಕಾಗಿ ಮನವಿ ಮಾಡಿಕೊಳ್ಳುವೆ ಎಂದು ಜಹಾನ್ ತಿಳಿಸಿದ್ದಾರೆ.
ಸಿಎಂ ನನ್ನ ಪರ ಆಗಲಿ, ಶಮಿ ಪರವಾಗಲಿ ಬೆಂಬಲಕ್ಕೆ ಬರಬೇಕಿಲ್ಲ. ಸತ್ಯದ ಪರ, ನ್ಯಾಯಕ್ಕಾಗಿ ಸಿಎಂ ಸಹಾಯಕ್ಕೆ ಬರಬೇಕಿದೆ ಎಂದು ಜಹಾನ್ ಆಗ್ರಹಿಸಿದರು. ಇದು ಸತ್ಯಕ್ಕಾಗಿ ನಡೆಯುತ್ತಿರುವ ಹೋರಾಟ. ಸೆಲೆಬ್ರೆಟಿ ಪತ್ನಿಯ ಹೀನಾಯ ಸ್ಥಿತಿ ಎಲ್ಲರಿಗೂ ತಿಳಿಯಬೇಕಿದೆ. ಕ್ರಿಕೆಟರ್ ಆಗಿರುವ ಶಮಿಗೆ ಖ್ಯಾತಿ, ಹಣ ಇದೆ. ನನಗೆ ಯಾರ ಬೆಂಬಲವೂ ಇಲ್ಲ. ಹಾಗಾಗಿ ಸಿಎಂ ಮೊರೆ ಹೋಗುತ್ತಿರುವುದಾಗಿ ಜಹಾನ್ ಹೇಳಿದರು.
ನನ್ನ ಮತ್ತು ಶಮಿ ನಡುವಿನ ಜಗಳ ಹೊಂದಾಣಿಕೆ ಮಾಡಿಕೊಳ್ಳಲಾಗದ ಮಟ್ಟಕ್ಕೆ ತಲುಪಿದೆ. ನಾನು ನನಗಾಗಿ ಹೋರಾಡಬೇಕಿದೆ. ನಾನೀಗ ಸುಮ್ಮನಾದರೆ ಅದು ಮಹಿಳಾ ಸಮುದಾಯಕ್ಕೆ ಮಾಡುವ ಅನ್ಯಾಯ. ನಾನೇಕು ಸುಮ್ಮನಿರಲಿ, ಖ್ಯಾತ ಪತಿ ನೀಡಿರುವ ಚಿತ್ರಹಿಂಸೆಗೆ ನನ್ನ ಬಳಿ ಸಾಕ್ಷ್ಯವಿದೆ ಎಂದು ಜಹಾನ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.
ಶಮಿ ಈಗಲೂ ನನಗೆ ಬೆದರಿಕೆವೊಡ್ಡುತ್ತಿದ್ದಾರೆ. ನಿನಗೆ ನಾಚಿಕೆ ಆಗುತ್ತಿಲ್ಲವಾ, ನನ್ನ ವಿರುದ್ಧ ಮಾಡಿರುವ ಎಲ್ಲಾ ಆರೋಪಗಳನ್ನು ಹಿಂಪಡೆದುಕೋ ಎಂದು ಒತ್ತಡ ಹೇರುತ್ತಿದ್ದಾರೆ. ಮಗಳಿಗಾಗಿ ಸುಮ್ಮನಿರಲೇಬೇಕು ಎಂದು ಬೆದರಿಸುತ್ತಿದ್ದಾರೆ ಎಂದು ಜಹಾನ್ ಆರೋಪಿಸಿದರು.
Click this button or press Ctrl+G to toggle between Kannada and English