ಸ್ವಾತಂತ್ರ್ಯ ಹೋರಾಟದ ಆರಂಭದ ಕುರುಹುಗಳಿರುವುದೇ ಕರ್ನಾಟಕದಲ್ಲಿ, ಇದಕ್ಕೆ ಸಾಕ್ಷಿ ವೀರರಾಣಿ ಅಬ್ಬಕ್ಕ. – ಡಾ.ಕೈಲಾಶ್ ಕುಮಾರ್ ಮಿಶ್ರಾ

12:07 PM, Wednesday, March 14th, 2018
Share
1 Star2 Stars3 Stars4 Stars5 Stars
(No Ratings Yet)
Loading...

rani-abbakkaಮಂಗಳೂರು: ದೆಹಲಿ ಕರ್ನಾಟಕ ಸಂಘದ ಸಹಯೋಗದಲ್ಲಿ ದಿನಾಂಕ 13-03-2018ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಅಬ್ಬಕ್ಕ ಉತ್ಸವ ಸಮಿತಿ ಆಯೋಜಿಸಿದ್ದ ರಾಣಿ ಅಬ್ಬಕ್ಕ ಉತ್ಸವದ ಮೂರನೇ ದಿನವಾದ ಇಂದು ಹಿಂದಿ ಭಾಷೆಯಲ್ಲಿ ಅಬ್ಬಕ್ಕ ರಾಣಿಯ ಕುರಿತಾಗಿ ವಿಚಾರ ಸಂಕಿರಣ ಕಾರ್ಯಕ್ರಮವು ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯಲ್ಲಿನಡೆಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ದೆಹಲಿ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದ ಡಾ. ಕೈಲಾಶ್ ಕುಮಾರ್ ಮಿಶ್ರಾ ಅವರು ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ಕರ್ನಾಟಕದ ಕರಾವಳಿಯು ತನ್ನದೇ ಆದ ವಿಶಿಷ್ಟತೆ ಪಡೆದುಕೊಂಡಿದೆ. ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಕರ್ನಾಟಕದ ಕೊಡುಗೆ ಕಡಿಮೆ ಎಂಬ ಅಪವಾದವಿದೆ. ಆದರೆಸ್ವಾತಂತ್ರ್ಯ ಹೋರಾಟದ ಆರಂಭದ ಕುರುಹುಗಳನ್ನು ನಾವು ಕಾಣುವುದೇ ಇಲ್ಲಿಯೇ. ಇದಕ್ಕೆ ಸಾಕ್ಷಿಯೇ ವೀರ ರಾಣಿ ಅಬ್ಬಕ್ಕ.

ತನ್ನಲ್ಲಿದ್ದ ಸ್ವಾಭಿಮಾನ ಹಾಗೂ ಆತ್ಮಸ್ಥೈರ್ಯವನ್ನು ನಾಡಿಗಾಗಿ, ಜನತೆಗಾಗಿ ಸಮರ್ಪಿಸಿ, ತನ್ನ ಕೆಚ್ಚೆದೆಯ ನಿರಂತರ ಹೋರಾಟದ ಮೂಲಕ ಮಾತೃಶಕ್ತಿಯನ್ನು ಪರಕೀಯರಿಗೆ ಪರಿಚಯಿಸಿದವಳು ರಾಣಿ ಅಬ್ಬಕ್ಕ. ಕೇವಲ ರಸ್ತೆಗಳಿಗೆ ಅವಳ ಹೆಸರಿಟ್ಟರೆ ಅಥವಾ ಅವಳ ಪ್ರತಿಮೆಯನ್ನು ಸ್ಥಾಪಿಸಿದರೆ ಸಾಲದು. ಬದಲಾಗಿ ಆಕೆಯ ಕುರಿತಾಗಿ ಪ್ರತಿಯೊಬ್ಬನೂ ತಿಳಿದು ಇತರರಿಗೆ ತಿಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೊರ್ವ ಸಂಪನ್ಮೂಲ ವ್ಯಕ್ತಿ, ಸಾಮಾಜಿಕ ಕಾರ್ಯಕರ್ತರಾದ ಪುನೀತ್ ಸೂದ್ ಅವರು ರಾಣಿ ಅಬ್ಬಕ್ಕನ ಕುರಿತಾಗಿ ಮಾತನಾಡುತ್ತಾ ನಮ್ಮ ಚರಿತ್ರೆಗಳು ನಮ್ಮ ದೇಶ ಗುಲಾಮಗಿರಿಯಲ್ಲಿತ್ತು ಎಂದು ವೈಭವೀಕರಿಸಿವೆ. ಆದರೆ ನಮ್ಮವರು ಪರಕೀಯರ ವಿರುದ್ಧ ಸದಾ ಸಂಘರ್ಷವನ್ನು ಮಾಡುತ್ತಾ ಬಂದವರು. ಹಾಗಾಗಿ ಗುಲಾಮಗಿರಿಯ ಮಾತೇ ಇಲ್ಲಿ ಅಪ್ರಸ್ತುತ. ಇದಕ್ಕೆ ಜೀವಂತ ನಿದರ್ಶನ ಸ್ವಾಭಿಮಾನದ ಪ್ರತೀಕವಾದ ರಾಣಿ ಅಬ್ಬಕ್ಕ. ಜೊತೆಗೆ ಇಂತಹ ಮಹಾನ್ ಹೋರಾಟಗಾರ್ತಿಯನ್ನು ಕಾರ್ಯಕ್ರಮದ ಮೂಲಕ ಜನರಿಗೆ ಪರಿಚಯಿಸುವ ದುರ್ದೈವ ಸ್ಥಿತಿ ನಮ್ಮದಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮ ಸಂಯೋಜಕರಾದ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಸ್. ಕೃಷ್ಣ ಭಟ್ ಅವರು ಮಾತನಾಡಿ ನಮ್ಮ ಸ್ವಾತಂತ್ರ್ಯ ಹೋರಾಟದ ಹೆಜ್ಜೆಗಳಲ್ಲಿ ನಮ್ಮವರು ಬ್ರಿಟಿಷರ ವಿರುದ್ಧ ಹೋರಾಡಿದ ಕಥನಗಳೆ ಅತಿ ಮಹತ್ವವನ್ನು ಪಡೆದುಕೊಂಡಿದೆ. ಹಾಗಾಗಿ ಬ್ರಿಟಿಷರಿಗಿಂತಲೂ ಮೊದಲೇ ನಮ್ಮ ದೇಶವನ್ನು ಆಕ್ರಮಿಸಿದ ಪೋರ್ಚುಗೀಸರ ವಿರುದ್ಧ ಹೋರಾಡಿದ ಅಬ್ಬಕ್ಕನನ್ನು ತಿಳಿಯಲೇ ಸಾಧ್ಯವಾಗಿಲ್ಲ. ಆದರೂ ರಾಣಿ ಅಬ್ಬಕ್ಕನ ಕುರಿತಾಗಿ ಇತಿಹಾಸಕಾರರು ಮರೆತಿದ್ದಾರೆ, ಅವಳಿಗೆ ಚರಿತ್ರೆಯಲ್ಲಿ ಸೂಕ್ತ ಸ್ಥಾನಮಾನಗಳು ಸಿಗಲಿಲ್ಲ ಎಂಬ ವಿಚಾರಗಳನ್ನು ಬದಿಗಿಟ್ಟು ಅಬ್ಬಕ್ಕನನ್ನು ಮೊದಲು ನಾವು ತಿಳಿದುಕೊಂಡು ಇತರರಿಗೂ ತಿಳಿಸುವ ಹಾಗೂ ಮುಖ್ಯವಾಗಿ ಶಾಲೆಗಳಲ್ಲಿ ಅಬ್ಬಕ್ಕನ ಕುರಿತಾಗಿ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವುದರ ಮೂಲಕ ಜನಮನಗಳಲ್ಲಿ ಅವಳಿಗೆ ಶಾಶ್ವತವಾದ ಸ್ಥಾನ ದೊರಕುವಂತೆ ಪ್ರಯತ್ನಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸುಮಾರು 100 ದೆಹಲಿಯ ಹಿಂದಿ ಭಾಷೆಯ ಗಣ್ಯರು, ದೆಹಲಿ ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ಸಿ. ಎಂ. ನಾಗರಾಜ, ಖಜಾಂಚಿ ಕೆ.ಎಸ್.ಜಿ.. ಶೆಟ್ಟಿ, ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಹರಿ, ಎಸ್. ಡಿ. ಶ್ರೀನಿವಾಸ್ ಉಪಸ್ಥಿತರಿದ್ದರು. ದೆಹಲಿ ಶಿಕ್ಷಣ ಸಂಸ್ಥೆಯ ಪ್ರಭಾರ ಪ್ರಾಂಶುಪಾಲರಾದ ಎನ್. ವಿಜಯಕುಮಾರಿ ಅವರು ಸ್ವಾಗತಿಸಿದರು. ಶಿಕ್ಷಕಿ ಪರಿಮಳಾ ಅವರು ಕಾರ್ಯಕ್ರಮ ಹಾಗೂ ಅಬ್ಬಕ್ಕನ ಕುರಿತಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಬ್ಬಕ್ಕನ ಕುರಿತಾದ ಕನ್ನಡ ಕವಿತೆಯನ್ನು ಉಪನ್ಯಾಸಕಿ ಪ್ರೇಮಲತಾ, ಸುಮಧುರವಾದ ಹಾಡನ್ನು ಶಿಕ್ಷಕಿ ಅಕ್ಕಮಹಾದೇವಿ ಪ್ರಸ್ತುತ ಪಡಿಸಿದರು.ಶಿಕ್ಷಕಿ ಪುಷ್ಪ ಯಾದವ್ ವಂದಿಸಿದರು. ಶಿಕ್ಷಕಿ ಬಿದಿಶಾ ಕಾಯರ್ಯಕ್ರಮ ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English