ಮಂಗಳೂರು: ಮಂಗಳಮುಖಿಯರನ್ನು ಸಮಾಜದಲ್ಲಿ ಎಲ್ಲರಂತೆ ಗೌರವಿಸುವ ಗುಣವನ್ನು ಸಮಾಜದ ಪ್ರತಿಯೊಬ್ಬರು ಬೆಳೆಸಿಕೊಳ್ಳುವುದರೊಂದಿಗೆ ಅವರೂ ಕೂಡ ಸಮಾಜದಲ್ಲಿ ಬದುಕಲು ಅರ್ಹರು ಎಂಬ ಸತ್ಯವನ್ನು ಸಮಾಜ ಅರಿತುಕೊಳ್ಳಬೇಕಾಗಿದೆ ಎಂದು ಮಂಗಳೂರು ಡಿಸಿಪಿ ಉಮಾಪ್ರಶಾಂತ್ ಅಭಿಪ್ರಾಯ ಪಟ್ಟರು.
ಅವರು ಸೋಮವಾರ ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ಮತ್ತು ಬೆಸೆಂಟ್ ಕಾಲೇಜಿನ ಸಮಾಜ ಶಾಸ್ತ್ರ ಮತ್ತು ಇಂಗ್ಲೀಷ್ ವಿಭಾಗ ಜಂಟಿಯಾಗಿ ಆಯೋಜಿಸಿದ ಮಂಗಳಮುಖಿಯರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಂಗಳಮುಖಿಯರನ್ನು ಸಮಾಜ ವಕ್ರದಷ್ಟಿಯಿಂದ ಕಾಣುತ್ತಿದ್ದ ಕಾಲ ಪರಿವರ್ತನಾ ಟ್ರಸ್ಟ್ ಆರಂಭದಿಂದ ಬದಲಾಗುತ್ತಿದೆ. ಅವರು ಕೂಡ ನಮ್ಮಂತೆ ಮನುಷ್ಯರು ಅವರಿಗೂ ಕೂಡ ಸಮಾಜದಲ್ಲಿ ಬದುಕುವ ಹಕ್ಕಿದೆ ಎನ್ನುವುದನ್ನು ವಾಯ್ಲೆಟ್ ಪಿರೇರಾ ಅವರು ತಮ್ಮ ಟ್ರಸ್ಟಿನ ಕಾರ್ಯವೈಖರಿಯಿಂದ ಸಮಾಜಕ್ಕೆ ತೋರಿಸಿಕೊಂಡಿದ್ದಾರೆ. ವಾಯ್ಲೆಟ್ ಪಿರೇರಾ ತಮ್ಮ ಜನ್ಮದಿನಾಚರಣೆಯನ್ನು ಮಂಗಳಮುಖಿಯರ ದಿನಾಚರಣೆಯಾಗಿ ಆಚರಿಸುತ್ತಿರುವುದು ಒಂದು ಮಾದರಿ ಕಾರ್ಯಕ್ರಮ. ಇಂತಹ ಉತ್ತಮ ಪ್ರಯತ್ನಕ್ಕೆ ಮಾಧ್ಯಮ ಸಮಾಜ ಬೆಂಬಲಕ್ಕೆ ನಿಂತಾಗ ಯಶಸ್ಸು ಸಿಗುವುದು ಖಂಡಿತ. ಪೋಲಿಸ್ ಇಲಾಖೆಯಿಂದ ಇಂತಹ ಉತ್ತಮ ಕಾರ್ಯಕ್ಕೆ ಸದಾ ಬೆಂಬಲ ನೀಡಲು ಸಿದ್ದ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಮಲ್ಲನ ಗೌಡ ಅವರು ಮಾತನಾಡಿ ಇಂತಹ ಸುಂದರ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿಜಕ್ಕೂ ಅಭಿಮಾನಪಡುತ್ತಿದ್ದು, ಮಂಗಳಮುಖಿಯರು ನಮ್ಮ ಸಮಾಜದಲ್ಲಿ ಎಲ್ಲರಂತೆಯೆ ಬದಕಲು ಅರ್ಹರು. ಇಂದು ಅವರುಗಳು ದೇಶದಲ್ಲಿ ತುಳಿತಕ್ಕೊಳಾಗಿದದ್ದರೂ ಕೂಡ ಅವರ ಪ್ರತಿಭೆಯಿಂದ ದೇಶದ ಕೆಲವೊಂದು ಭಾಗಗಳಲ್ಲಿ ಗುರುತಿಸುವಂತಾಗಿದೆ. ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ಮತ್ತು ವಾಯ್ಲೆಟ್ ಪಿರೇರಾ ಇಂತಹ ಮಂಗಳಮುಖಿಯರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ನಡೆಸುತ್ತಿರುವ ಶ್ರಮ ನಿಜಕ್ಕೂ ಶ್ಲಾಘನೀಯ. ಇಂತಹ ದಿನಾಚರಣೆಯ ಮೂಲಕ ಅವರುಗಳ ಮುಖದಲ್ಲಿ ನಗು ಮೂಡಿಸುವ ಪ್ರಯತ್ನ ಮಾಡುತ್ತಿರುವ ಟ್ರಸ್ಟಿನ ಕೆಲಸಕ್ಕೆ ಸಮಾಜ ಕೂಡ ಕೈಜೋಡಿಸಬೇಕಾಗಿದೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಯಾವುದೇ ರೀತಿಯ ಕಾನೂನು ರೀತಿಯ ಸಹಕಾರ ನೀಡಲು ಸಿದ್ದ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಸೆಂಟ್ ಕಾಲೇಜಿನ ಅಧ್ಯಕ್ಷರಾದ ಕುಡ್ಪಿ ಜಗದೀಶ್ ಶೆಣೈ ಅವರು ಮಾತನಾಡಿ ಮಂಗಳಮುಖಿಯರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿರುವ ಟ್ರಸ್ಟಿನ ಕೆಲಸವನ್ನು ಶ್ಲಾಘಿಸುವುದರೊಂದಿಗೆ ತಮ್ಮ ಕಾಲೇಜಿನಲ್ಲಿ ಯಾವುದೇ ಮಂಗಳಮುಖಿಯರು ವಿದ್ಯಾಭ್ಯಾಸವನ್ನು ಮಾಡಲು ಇಚ್ಚೆ ಪಟ್ಟಲ್ಲಿ ಕೆಜಿ ಯಿಂದ ಪಿಜಿಯವರೆಗೆ ಉಚಿತ ಶಿಕ್ಷಣ ನೀಡುವುದಾಗಿ ಹೇಳಿದರಲ್ಲದೆ, ಮುಂದೆ ಕೆಲಸ ಕೂಡ ನೀಡಲು ಸಿದ್ದ ಎಂದು ಘೋಷಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪರಿವರ್ತನಾ ಚಾರೀಟೇಬಲ್ ಟ್ರಸ್ಟಿನ ಸ್ಥಾಪಕಿ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ವಾಯ್ಲೆಟ್ ಪಿರೇರಾ ಅವರು ದೇಶದಲ್ಲಿ ನಾವು ತಂದೆಯಂದಿರ, ತಾಯಂದಿರ, ಮಕ್ಕಳ, ಪ್ರೇಮಿಗಳ ದಿನವನ್ನು ಆಚರಿಸುತ್ತೇವೆ ಆದರೆ ಎಂದೂ ಕೂಡ ಮಂಗಳಮುಖಯರ ದಿನಾಚರಣೆಯನ್ನು ಎಂದೂ ಕೂಡ ಆಚರಿಸಿಲ್ಲ. ಮಂಗಳಮುಖಿಯರು ಕೂಡ ನಮ್ಮಂತೆಯೇ ಮನುಷ್ಯರು ಆವರಿಗೂ ಕೂಡ ನಮ್ಮಂತೆಯೇ ಭಾವನೆಗಳಿವೆ ಅವರೂ ಕೂಡ ಸಮಾಜದಲ್ಲಿ ಗುರುತಿಸಬೇಕು ಅಲ್ಲದೆ ಅವರ ಪ್ರತಿಭೆಗಳಿಗೆ ಮನ್ನಣೆ ಸಿಗಬೇಕು. ಮಂಗಳಮುಖಿಯರು ಕೂಡ ನಮ್ಮಂತೆಯೇ ಸಮಾಜದಲ್ಲಿ ಪ್ರತಿಯೊಬ್ಬರೊಂದಿಗೆ ಬೆರೆತು ಬಾಳುವುದರೊಂದಿಗೆ ಸಮಾಜ ಹಾಗೂ ಮಕ್ಕಳು ಅವರನ್ನು ಗೌರವಿಸುವಂತಾಗಬೇಕು ಎನ್ನುವ ಉದ್ದೇಶದಿಂದ ಕಳೆದ ವರ್ಷದಿಂದ ಮಂಗಳಮುಖಿಯರ ದಿನಾಚರಣೆಯನ್ನು ಆಚರಿಸಲು ಆರಂಭಿಸಲಾಯಿತು.
ಒಳ್ಳೆಯ ಕೆಲಸ ಮಾಡಲು ಹೊರಟಾಗ ವಿರೋಧಗಳುಬರುವುದು ಸಹಜ. ವಿರೋಧಗಳ ಜೊತೆಗೆ ಟ್ರಸ್ಟಿನ ಹೆಸರನ್ನು ಹಾಳುಮಾಡುವ ಕೆಲಸ ಮಾಡಲಾಯಿತು ಆದರೂ ನಾವು ನಮ್ಮ ಕೆಲಸವನ್ನು ಯಾವುದೇ ವಿರೋಧಗಳಿಗೆ ಜಗ್ಗದೆ ಮುಂದುವರೆದು ಮಂಗಳಮುಖಿಯರಿಗೆ ಬೇಕಾದ ಅವಶ್ಯಕತೆಗಳಿಗೆ ಸಹಾಯ ಮಾಡುವ ಕೆಲಸ ಮಾಡಲಾಯಿತು. ಮಂಗಳಮುಖಿಯರಿಗೆ ಆಧಾರ್ ಕಾರ್ಡ್, ರೇಶನ್ ಕಾರ್ಡ್, ಬ್ಯಾಂಕ್ ಖಾತೆ ಮಾಡಿಸುವುದರೊಂದಿಗೆ ಅವರಿಗೆ ಬ್ಯೂಟಿಶೀಯನ್, ಟೈಲರಿಂಗ್ ತರಬೇತಿ ಕೂಡ ನೀಡಲಾಯಿತು. ವಿದ್ಯಾರ್ಥಿ ಸಮುದಾಯ ಕೂಡ ಇಂತಹ ಸಮಾಜದಲ್ಲಿ ತಿರಸ್ಕರಿಸಲ್ಪಟ್ವರವನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸದಲ್ಲಿ ಕೈಜೋಡಿಸಬೇಕು ಎಂದರು.
ಪರಿವರ್ತನಾ ಚಾರೀಟೇಬಲ್ ಟ್ರಸ್ಟಿನ ಅಧ್ಯಕ್ಷೆ ಸ್ವಪ್ನಾ ತನ್ನ ಅಭಿಪ್ರಾಯಗಳನ್ನು ಹಂಚಿಕೊಂಡು ಮಾತನಾಡಿ, ಪರಿವರ್ತನಾ ಚಾರೀಟೇಬಲ್ ಮೂಲಕ ನಮ್ಮ ಜೀವನದಲ್ಲಿ ಬದಲಾವಣೆಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದು, ಸಮಾಜ ಕೂಡ ನಮ್ಮ ಬೆಂಬಲಕ್ಕೆ ನಿಲ್ಲುವಂತಾಗಬೇಕು. ನಾವು ಸಮಾಜದಿಂದ ಬೇರೇನು ಅಪೇಕ್ಷಿಸುವುದಿಲ್ಲ ಈಗಾಗಲೇ ನಾವು ಸಮಾಜದಲ್ಲಿ ನಮ್ಮ ಮನೆಯವರ ಪ್ರೀತಿಯಿಂದ ತಿರಸ್ಕರಿಸಲ್ಪಟ್ಟು ಅನಾಥವಾಗಿದ್ದು ಸಮಾಜದ ನಮ್ಮ ಬಗ್ಗೆ ಪ್ರೀತಿಯನ್ನು ತೋರಿಸಿದರೆ ಸಾಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷ ಮನೇಲ್ ಅಣ್ಣಪ್ಪ ನಾಯಕ್, ಕಾರ್ಯದರ್ಶಿ ಶ್ಯಾಮ ಸುಂದರ್ ಕಾಮತ್, ಸಂಚಾಲಕ ದೇವಾನಂದ ಪೈ, ಪ್ರಾಂಶುಪಾಲ ಡಾ. ಸತೀಶ್ ಕುಮಾರ್ ಶೆಟ್ಟಿ, ಕಾಲೇಜಿನ ಪ್ರಾಧ್ಯಪಕರಾದ ಮೀರಾ ಕುವೆಲ್ಲೊ ಹಾಗೂ ಇತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಮಂಗಳಮುಖಿಯರಿಂದ ಮತ್ತು ಕಾಲೇಜಿನ ವಿದ್ಯಾರ್ಥಿನಿಯರಿಂದ ಆಕರ್ಷಕವಾದ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.
Click this button or press Ctrl+G to toggle between Kannada and English