ಬೆಂಗಳೂರು : ನಗರದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಸಂಸ್ಥೆಯು ಮತ್ತೊಂದು ಹೆಜ್ಜೆ ಇಟ್ಟಿದೆ.
ಇನ್ನು ಮುಂದೆ ಬಿಎಂಟಿಸಿ ನಿಲ್ದಾಣ ಹಾಗೂ ಡಿಪೋಗಳಿಗೆ ಮೆಟ್ರೋ ಬೈಕ್‍ಗಳು ಬರಲಿವೆ. ಶಾಂತಿನಗರ ಬಿಎಂಟಿಸಿ ಡಿಪೋದಲ್ಲಿ ಈ ಬೈಕ್ ಸೇವೆಗೆ ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಚಿವ ರೇವಣ್ಣ ಮಾತನಾಡಿ, ಬಿಎಂಟಿಸಿ ಬಸ್ ನಿಲ್ದಾಣ ಮನೆಯಿಂದ ದೂರ ಇದ್ದರೆ ಹಾಗೂ ನೀವು ತಲುಪಬೇಕಾದ ಸ್ಥಳ, ಇಳಿಯುವ ಸ್ಥಳ ಬಸ್ ನಿಲ್ದಾಣದಿಂದ ದೂರ ಇದ್ದರೆ ಹಾಗೂ ಬಸ್ ಪ್ರಯಾಣಕ್ಕೆ ಅಡ್ಡಿಯಾಗುತ್ತಿದ್ದಲ್ಲಿ ಮೆಟ್ರೋ ಬೈಕ್ ಬಳಸಬಹುದಾಗಿದೆ.
ಪ್ರಾಯೋಗಿಕವಾಗಿ ಶಾಂತಿನಗರ ನಿಲ್ದಾಣದಲ್ಲಿ ಈ ಸೇವೆ ಒದಗಿಸಲಾಗುತ್ತಿದ್ದು, ಕಾಲಕ್ರಮೇಣ ಇತರೆ ನಿಲ್ದಾಣಗಳಿಗೂ ಈ ಸೇವೆ ವಿಸ್ತರಿಸಲಾಗುತ್ತದೆ. ಈ ಬೈಕ್ ಬಳಸುವುದರಿಂದ ಸಂಚಾರ ದಟ್ಟಣೆ ಹಾಗೂ ವಾಯು ಮಾಲಿನ್ಯ ಸಹ ನಿಯಂತ್ರಣವಾಗಲಿದೆ ಎಂದು ಹೇಳಿದರು.
ಮೆಟ್ರೋ ಬೈಕ್ ಸಿಇಒ ವಿವೇಕಾನಂದ ಮಾತನಾಡಿ, ಸಮೂಹ ಕ್ಷಿಪ್ರ ಸಾರಿಗೆ ಸ್ವೀಕರಿಸುವುದನ್ನು ವೃದ್ಧಿಸುವ ಮೂಲಕ ಇಂಧನ ಬಳಕೆ ತಗ್ಗಲಿದೆ ಹಾಗೂ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಕಡಿಮೆಯಾಗಲಿದೆ. ಪ್ರಯಾಣಿಕರು ಒಂದೆಡೆಯಿಂದ ಮತ್ತೊಂದೆಡೆಗೆ ಆರಾಮವಾಗಿ ಸಂಚರಿಸಬಹುದಾಗಿದೆ. ಕೀಲಿ ರಹಿತ ಯಾಂತ್ರಿಕ ವ್ಯವಸ್ಥೆ ಸಹ ಈ ಬೈಕ್‍ನಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.
ಯಾವುದೇ ಆಧಾರಿತ ಸಾರಿಗೆ ಸೇವೆ ರೀತಿಯಲ್ಲಿ ಬಳಕೆದಾರರು ಮೊಬೈಲ್ ಆ್ಯಪ್ ಮೂಲಕ ತಮಗೆ ಹತ್ತಿರದಲ್ಲಿರುವ ಬೈಕ್ ಪತ್ತೆ ಮಾಡಬಹುದು. ಮೆಟ್ರೋ ಬೈಕ್ ನೂತನ ಕೀಲಿಕೈ ರಹಿತ ವೈಶಿಷ್ಟ್ಯಗಳಿಂದ ಕೂಡಿದ್ದು, ಒಂದು ಒಟಿಪಿಯನ್ನು ಎಂಟರ್ ಮಾಡುವ ಮೂಲಕ ತಮ್ಮ ಸವಾರಿ ಆರಂಭಿಸಬಹುದಾಗಿದೆ.
ಈ ಸೇವೆ ತೀರ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು, ಇಂಧನ ಸೇರಿದಂತೆ ಪ್ರತಿ ಕಿಲೋ ಮೀಟರ್‌ಗೆ 5 ರೂ. ನಿಗದಿ ಪಡಿಸಲಾಗಿದೆ ಎಂದರು.
Click this button or press Ctrl+G to toggle between Kannada and English