ಕರಾವಳಿಯಲ್ಲಿ ಮಳೆ: ಬೆಳ್ತಂಗಡಿಯಲ್ಲಿ ಸಿಡಿಲು ಬಡಿದು ಐವರಿಗೆ ಗಾಯ

10:55 AM, Thursday, March 15th, 2018
Share
1 Star2 Stars3 Stars4 Stars5 Stars
(No Ratings Yet)
Loading...

mangaluruಮಂಗಳೂರು: ಬಿಸಿಲ ಬೇಗೆ ಮತ್ತು ಹೆಚ್ಚಿದ ಉಷ್ಣಾಂಶದಿಂದ ಕಾದು ಕೆಂಡವಾಗಿದ್ದ ಇಳೆಗೆ ನಿನ್ನೆ ಸಂಜೆ ಮಳೆರಾಯ ತಂಪೆರೆದಿದ್ದಾನೆ.

ಕಳೆದ ಕೆಲವು ತಿಂಗಳಿನಿಂದ 35 ಡಿಗ್ರಿವರೆಗೂ ಏರಿದ ಉಷ್ಣಾಂಶದಿಂದಾಗಿ ಬೇಸತ್ತಿದ್ದ ಜನತೆಗೆ ಮಳೆಯ ಸಿಂಚನ ತಂಪಿನ ಸೋಪಾನವಾಯಿತು. ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿದ್ದು, ಮೂರು ಗಂಟೆಯ ಬಳಿಕ ಮಳೆ ಸುರಿಯಲಾರಂಭಿಸಿತು.

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆ ಸುರಿಯಿತು. ಬಳಿಕ ಸಂಜೆಯವರೆಗೂ ಹನಿ ಮಳೆ ಮುಂದುವರಿದಿತ್ತು. ಶ್ರೀಲಂಕಾ ಸಮೀಪದಲ್ಲಿ ಆಳ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಕೇರಳ ಮತ್ತು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಮಂಗಳೂರು, ಪುತ್ತೂರು, ಸುಳ್ಯ, ಬಂಟ್ವಾಳ, ಮೂಡುಬಿದಿರೆ, ಬೆಳ್ತಂಗಡಿಯಲ್ಲಿ ಮಳೆಯಾಗಿದೆ.

ಮಳೆ ಹನಿ ಬೀಳುತ್ತಿದ್ದಂತೆ ಮಾಯವಾದ ವಿದ್ಯುತ್ ರಾತ್ರಿಯಾದರೂ ಬಂದಿರಲಿಲ್ಲ. ಇದರಿಂದ ನಗರ ಮತ್ತು ಗ್ರಾಮೀಣ ಪ್ರದೇಶ ಕತ್ತಲಲ್ಲಿ ಮುಳುಗಿ ಜನರು ಪರದಾಡುವ ಪರಿಸ್ಥಿತಿ ಉಂಟಾಗಿತ್ತು.

ಇನ್ನು ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದಲ್ಲಿ ಸಿಡಿಲು ಬಡಿದು 5 ಮಂದಿ ಗಾಯಗೊಂಡಿದ್ದಾರೆ. ಇಲ್ಲಿನ ದರ್ಕಾಸು ಮನೆಯ ಅಂಬೋಡಿ ಅವರ ಪುತ್ರ ಆನಂದ (30), ಪತ್ನಿ ಮೀನಾಕ್ಷಿ (26), ಪುತ್ರ ಪೂರ್ಣೇಶ್ (6) ಹಾಗೂ ಪಕ್ಕದ ಮನೆಯ ಓಡಿಯಪ್ಪ ಅವರ ಪುತ್ರ ಅಭಿಲಾಷ್ ಹಾಗೂ ಇನ್ನೊಂದು ಮನೆಯ ಈಸುಬು ಅವರ ಪುತ್ರಿ ಉಮೈಮ (22) ಸಿಡಿಲ ಆಘಾತಕ್ಕೆ ಒಳಗಾದವರು.

ರಾತ್ರಿ ಇವರೆಲ್ಲರೂ ತಮ್ಮ ಮನೆಯಲ್ಲಿದ್ದ ಸಂದರ್ಭ ಮನೆ ಪಕ್ಕದ ಮರಕ್ಕೆ ಸಿಡಿಲು ಬಡಿದಿದೆ. ಗಾಯಗೊಂಡವರನ್ನು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English