ಕೇಂದ್ರದ ಜನವಿರೋಧಿ ನೀತಿ ವಿರುದ್ಧ ಕಾರ್ಮಿಕರ ಪ್ರತಿಭಟನೆ

1:30 PM, Friday, March 16th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

udupi-protestಉಡುಪಿ: ಕೇಂದ್ರ ಸರಕಾರದ ಜನವಿರೋಧಿ, ಕಾರ್ಮಿಕ ಹಾಗೂ ರೈತ ವಿರೋಧಿ ಮತ್ತು ಕಾರ್ಪೋರೇಟ್ ಪರ ನೀತಿಗಳನ್ನು ಖಂಡಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಇಂದು ನಡೆಸಿದ ದೇಶವ್ಯಾಪಿ ಪ್ರತಿಭಟನೆಯನ್ನು ಉಡುಪಿಯಲ್ಲೂ ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಆಶ್ರಯದಲ್ಲಿ ನಡೆಸಲಾಯಿತು.

ಎಲ್ಲಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗುರುವಾರ ಸಂಜೆ ಕಾರ್ಮಿಕರ ಬೃಹತ್ ಮೆರವಣಿಗೆ, ಧರಣಿ ಮತ್ತು ಪ್ರತಿಭಟನಾ ಸಭೆ ನಡೆಯಿತು.

ಕೇಂದ್ರ ಸರಕಾರ ರೈತ, ಕಾರ್ಮಿಕ ಹಾಗೂ ಸಾಮಾನ್ಯ ಜನರ ವಿರೋಧಿ ಯಾಗಿದೆ. ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಜನ ಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಏರುತ್ತಿರುವ ಇಂಧನ ಬೆಲೆಗಳಿಗೆ ಕಡಿವಾಣ ಹಾಕಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಇಎಸ್‌ಐ ಹಾಗೂ ಭವಿಷ್ಯ ನಿಧಿಯಲ್ಲಿ ಸರಕಾರ ಹಸ್ತಕ್ಷೇಪ ಮಾಡಬಾರದು. ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಕೂಡಲೇ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯ ವಸ್ತುಗಳ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಕನಿಷ್ಠ ವೇತನವನ್ನು 18,000ರೂ. ನಿಗದಿ ಮಾಡಬೇಕು ಎಂದವರು ಒತ್ತಾಯಿಸಿದರು.

ಎಲ್ಲರಿಗೂ ಆಹಾರ ಖಾತ್ರಿ ನೀಡಲು ಸಾರ್ವಜನಿಕ ಪಡಿತರ ವ್ಯವಸ್ಥೆ ಬಲಪಡಿಸಬೇಕು. ಕಾಳಸಂತೆ ವ್ಯಾಪಾರವನ್ನು ಮಟ್ಟ ಹಾಕಬೇಕು. ನಿರುದ್ಯೋಗ ಸಮಸ್ಯೆ ತೀವ್ರವಾಗಿದ್ದು, ಯುವಕರು ಹತಾಶರಾಗಿದ್ದಾರೆ. ಆದ್ದರಿಂದ ಉದ್ಯೋಗ ಸೃಷ್ಟಿಸಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸರಕಾರ ಮುಂದಾಗಬೇಕು. ಕಾರ್ಮಿಕ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ ಅವರಿಗೂ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ರಾಜ್ಯ ಮತ್ತು ರಾಷ್ಟ್ರೀಯ ಸಾರ್ವಜನಿಕ ವಲಯದ ಉದ್ಯಮಗಳ ಶೇರು ಮಾರಾಟ ಮತ್ತು ಬಂಡವಾಳ ಹಿಂದೆಗೆತವನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ ಆಗ್ರಹಿಸಿದರು.

ಇಎಸ್‌ಐ ಹಾಗೂ ಭವಿಷ್ಯ ನಿಧಿಯ ವಿಷಯದಲ್ಲಿ ಸರಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡಬಾರದು. ದೇಶದ ಹಿತದೃಷ್ಟಿಯಿಂದ ರಕ್ಷಣಾ ಕ್ಷೇತ್ರ, ವಿಮಾ ಹಾಗೂ ರೈಲ್ವೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ನಿಲ್ಲಿಸಬೇಕು ಎಂದವರು ಹೇಳಿದರು.

ಪ್ರತಿಭಟನಕಾರರು ನಗರದ ಬೋರ್ಡ್ ಹೈಸ್ಕೂಲ್‌ನಿಂದ ಅಜ್ಜರಕಾಡಿನ ಮಹಾತ್ಮಗಾಂಧಿ ಸ್ಮಾರಕದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಹುತಾತ್ಮರ ಸ್ಮಾರಕದ ಎದುರು ಪ್ರತಿಭಟನಾ ಸಭೆ ನಡೆಸಿದರು. ಅವರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಅಧ್ಯಕ್ಷ ಅದಮಾರು ಶ್ರೀಪತಿ ಆಚಾರ್ಯ, ವಿಮಾ ನೌಕರರ ಸಂಘದ ಯು. ಗುರುದತ್, ಸಿಐಟಿಯುನ ಕೆ. ಶಂಕರ್, ಎಇಟಿಯುಸಿ ಕೆ.ವಿ ಭಟ್, ಎಐಬಿಇ ಹೆರಾಲ್ಡ್ ಡಿಸೋಜಾ, ಬಿಇಎಚ್ ರವೀಂದ್ರ, ಬಿಎಸ್‌ಎನ್‌ಎಲ್ ನೌಕರ ಸಂಘದ ಯು.ಶಶಿಧರ ಗೊಲ್ಲ ಮುಂತಾದವರು ಪಾಲ್ಗೊಂಡಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English