ಪುತ್ತೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೊದಲ ಬಾರಿಗೆ ದಕ್ಷಿಣಕನ್ನಡ ಜಿಲ್ಲೆಗೆ ಬರುತ್ತಿದ್ದು, ಇದೇ 20ರಂದು ಮಂಗಳೂರಿನಲ್ಲಿ ನಡೆಯುವ ಬೃಹತ್ ರ‍್ಯಾಲಿಗೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಹೆಚ್ಚಿನ ಮುತುವರ್ಜಿ ವಹಿಸಿ ತಮ್ಮ ಕ್ಷೇತ್ರಗಳಿಂದ ಹೆಚ್ಚಿನ ಕಾರ್ಯಕರ್ತರನ್ನು ಕರೆತಂದು ಶಕ್ತಿ ಪ್ರದರ್ಶನ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಹೇಳಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಬ್ಲಾಕ್ ಕಾಂಗ್ರೆಸ್ ವಿವಿಧ ವಿಭಾಗಗಳ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
‘ಈಗಾಗಲೇ ಪಕ್ಷದ ವೀಕ್ಷಕರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಮೂಲಕ ಎಲ್ಲ ಕ್ಷೇತ್ರಗಳಲ್ಲಿಯೂ ಒಂದೊಂದು ಸುತ್ತಿನ ಸಭೆ ನಡೆಸಿದ್ದು, ಜಿಲ್ಲೆಯ ಶಾಸಕರು ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಪಡೆಯಲು ಆಕಾಂಕ್ಷಿಗಳಾಗಿದ್ದಾರೆ. ನಾವು ಏಳು ಶಾಸಕರು ಕೂಡ ಪಕ್ಷದ ಅಭ್ಯರ್ಥಿಗಳೇ ಆಗಿದ್ದೇವೆ. ಹೀಗಾಗಿ ಈ ಕಾರ್ಯಕ್ರಮವನ್ನು ಚುನಾವಣೆಗೆ ಸಿದ್ಧತೆ ಎಂದು ಪರಿಗಣಿಸಿ ನಾವೆಲ್ಲ ಅಭ್ಯರ್ಥಿಗಳ ನೆಲೆಯಲ್ಲಿ ಈ ರ‍್ಯಾಲಿ ಯಶಸ್ವಿಗೊಳಿಸಬೇಕು’ ಎಂದು ಅವರು ತಿಳಿಸಿದರು.
ಇದೇ 20ರಂದು ಬೆಳಿಗ್ಗೆ ಕಾಪು ಮತ್ತು ಪಡುಬಿದ್ರಿಯಲ್ಲಿ ರೋಡ್ ಶೋ ನಡೆಸಿದ ಬಳಿಕ ರಾಹುಲ್ ಗಾಂಧಿ ಅವರು ಮೂಲ್ಕಿಯ ಮೂಲಕ ಜಿಲ್ಲೆ ಜಿಲ್ಲೆ ಪ್ರವೇಶಿಸುವರು. ಸಂಜೆ 4.30ಕ್ಕೆ ಅವರು ಮಂಗಳೂರಿನ ಅಂಬೇಡ್ಕರ್ ವೃತ್ತ (ಜ್ಯೋತಿ ವೃತ್ತ)ಕ್ಕೆ ಬಂದು ಅಲ್ಲಿಂದ ನೆಹರೂ ಮೈದಾನದವರೆಗೆ ರೋಡ್ ಶೋ ನಡೆಯುವುದು. 5.30ಕ್ಕೆ ನೆಹರೂ ಮೈದಾನದಲ್ಲಿ ಬೃಹತ್ ಸಭೆ ನಡೆಯುವುದು ಎಂದರು. ಸುರತ್ಕಲ್‍ನಲ್ಲೂ ದೊಡ್ಡ ಮಟ್ಟದ ರೋಡ್ ಶೋ ನಡೆಯುವುದು’ ಎಂದು ಅವರು ಮಾಹಿತಿ ನೀಡಿದರು.
‘ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮಾಡಿದ್ದು, ಮೋದಿ ಸರ್ಕಾರದ ಸಾಧನೆಯಾದರೆ, ಬಡ ಕೃಷಿಕರ ಸಾಲ ಮನ್ನಾ ಮಾಡಿದ್ದು ಸಿದ್ದರಾಮಯ್ಯ ಸಾಧನೆ. ಮೋದಿ ಅವರು ಪ್ರಧಾನಿಯಾದ ಬಳಿಕ ಅಚ್ಛೇ ದಿನ್ ಬಂದಿದ್ದು ಶ್ರೀಮಂತರಿಗೆ ಮಾತ್ರ. ಬಡವರಿಗೆ ಉಚಿತ ಅಕ್ಕಿ ನೀಡಿ, ಬಡವರ ಏಳಿಗೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದದ್ದು ಸಿದ್ದರಾಮಯ್ಯ ಸರ್ಕಾರ’ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಶಾಸಕಿ ಶಕುಂತಳಾ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕೆಪಿಸಿಸಿ ಕಾರ್ಯದರ್ಶಿ ಯು.ಪಿ. ವೆಂಕಟೇಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಮುರಳೀಧರ ರೈ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್. ಮಹಮ್ಮದ್, ಪುತ್ತೂರಿನ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣ ಪ್ರಸಾದ್ ಆಳ್ವ, ಅಮಳ ರಾಮಚಂದ್ರ, ಪಕ್ಷದ ಪ್ರಮುಖರಾದ ಜೋಕಿಂ ಡಿಸೋಜ, ವಿಲ್ಮಾ ಗೋನ್ಸಾಲ್ವಿಸ್, ವಲೇರಿಯನ್ ಡಯಾಸ್, ಯಾಕೂಬ್ ಹಾಜಿ ದರ್ಬೆ, ಹುಸೇನ್ ದಾರಿಮಿ ರೆಂಜಲಾಡಿ, ಜಯಪ್ರಕಾಶ್ ಬದಿನಾರು, ರೋಶನ್ ರೈ ಬನ್ನೂರು, ಮಹೇಶ್ ರೈ ಅಂಕೊತ್ತಿಮಾರ್, ಇಸಾಕ್ ಸಾಲ್ಮರ ಇದ್ದರು.
Click this button or press Ctrl+G to toggle between Kannada and English