ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಪಟ್ಲ ಯಕ್ಷಾಶ್ರಯ ಯೋಜನೆಯಂತೆ ಎರಡನೇಯ ಮನೆಯ ಗೃಹಪ್ರವೇಶವು ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆ ಎಂಬಲ್ಲಿ ನೆರವೇರಿತು
ಬ್ರಹ್ಮಶ್ರೀ ರವೀಶ್ ತಂತ್ರಿಯವರು ಈ ಹಿಂದೆ ಕಟೀಲು ಮೇಳದಲ್ಲಿ 45 ವರ್ಷಗಳ ಕಾಲ ಕಲಾಸೇವೆಗೈದು ಇದೀಗ ಅಶಕ್ತರಾಗಿ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿರುವ ಶ್ರೀ ಕೊರಗಪ್ಪ ನಾಯ್ಕ ಇವರಿಗೆ ಮನೆಯನ್ನು ಹಸ್ತಾಂತರಿಸಿದರು.
ಅಲ್ಲದೆ ಪೌಂಡೇಶನ್ ಹತ್ತು ಹಲವು ಯೋಜನೆಗಳನ್ನು ಕಾರ್ಯಗತಗೊಳಿಸಿ ಕಲಾವಿದರ ಬಾಳಲ್ಲಿ ಬೆಳಕಾಗಿ ಮೂಡಿಬಂದಿರುವುದಕ್ಕೆ ಟ್ರಸ್ಟ್ ನ್ನು ಅಭಿನಂದಿಸಿದರು. ಮುಖ್ಯವಾಗಿ ಇವತ್ತು ಪಟ್ಲ ಸತೀಶ್ ಶೆಟ್ಟಿಯವರು ಒಡೆದು ಹೋದ ಮನೆಯನ್ನು ನಿರ್ಮಿಸಿಕೊಟ್ಟಿದಲ್ಲದೆ, ಒಡೆದು ಹೋಗಿದ್ದ ಎರಡು ಮನಸ್ಸುಗಳನ್ನು ಒಂದುಗೂಡಿಸಿದ್ದಾರೆ ಎಂದು ಹೇಳಲು ಸಂತೋಷವಾತ್ತಿದೆ ಎಂದರು.
ಆಶೀರ್ವಚನ ನೀಡಿದ ಶ್ರೀಧಾಮ ಮಾಣಿಲ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿಯವರು, ಒರ್ವ ಯಕ್ಷಗಾನದ ಕಲಾವಿದ ತನ್ನ ಕ್ಷೇತ್ರದ ಅಶಕ್ತ ಕಲಾವಿದರಿಗೆ ಮನೆಯನ್ನು ನಿರ್ಮಿಸಿಕೊಡುವುದು ಯಕ್ಷಗಾನದ ಇತಿಹಾಸದಲ್ಲೇ ಇದೇ ಪ್ರಥಮ ಎಂದರು. ಇಂತಹ ಸಮಾಜಮುಖಿ ಸತ್ಕಾರ್ಯಕ್ಕಾಗಿ ತಾನೂ ಕೂಡ ಮಾಣಿಲದಲ್ಲಿ ಪಟ್ಲ ಫೌಂಡೇಶನ್ ಘಟಕ ಸ್ಥಾಪಿಸುವ ಯೋಜನೆ ಹೊಂದಿರುವುದಾಗಿ ಎಂದು ಹೇಳುತ್ತಾ ತಾವೆಲ್ಲರೂ ಫೌಂಡೇಶನಿನ ಜತೆ ಕೈಜೋಡಿಸಬೇಕೆಂದು ಹೇಳಿದರು.
ವೇದಿಕೆಯಲ್ಲಿ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ, ಮಾರ್ಗದರ್ಶಕರಾದ ಪಟ್ಲಗುತ್ತು ಮಹಾಬಲ ಶೆಟ್ಟಿ, ಪಂಚಾಯಿತಿ ಸದಸ್ಯರಾದ ಸಂಜೀವ ರೈ, ಭೋಜನದ ವ್ಯವಸ್ಥೆಯನ್ನು ಮಾಡಿದ ಸತ್ಯಸಾಯಿ ಸೇವಾ ಸಮಿತಿ ಸಂಚಾಲಕರಾದ ಸಚ್ಚಿದಾನಂದ ಖಂಡೇರಿ, ಫಲಾಪೇಕ್ಷೆರಹಿತವಾಗಿ ಪೌರೋಹಿತ್ಯವನ್ನು ನೆರವೇರಿಸಿದ ನಾಗರಾಜ್ ಭಟ್ ಮತ್ತು ನಟರಾಜ್ ಭಟ್, ಮಂಗಳೂರು ನಗರ ಘಟಕದ ರಾಕೇಶ್ ಪೂಂಜ ಉಪಸ್ಥಿತರಿದ್ದರು.
ಖ್ಯಾತ ಭಾಗವತರಾದ ಸತ್ಯನಾರಾಯಣ ಪುಣಿಚಿತ್ತಾಯರು ಸ್ವಾಗತಿಸಿ, ವಂದಿಸಿದರು. ರಾಮಚಂದ್ರ ಮಣಿಯಾಣಿ ಕಾಟುಕುಕ್ಕೆ ಕಾರ್ಯಕ್ರಮವನ್ನು ನಿರೂಪಿದರು.
Click this button or press Ctrl+G to toggle between Kannada and English