ಮಂಡ್ಯ ಜಿಲ್ಲೆಯಲ್ಲಿ ಹೊಸ ಸಂಚಲನ… ರಮ್ಯಾ ತಾಯಿ ರಾಜಕೀಯಕ್ಕೆ

1:30 PM, Tuesday, March 20th, 2018
Share
1 Star2 Stars3 Stars4 Stars5 Stars
(No Ratings Yet)
Loading...

ramyaಮಂಡ್ಯ: ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ತಾಯಿ ರಂಜಿತಾ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆಯೇ? ಇಂತಹದ್ದೊಂದು ಹೊಸ ಬಾಂಬ್ ಈಗಷ್ಟೇ ಸ್ಫೋಟಗೊಂಡಿದೆ. ಇದು ಜಿಲ್ಲಾ ರಾಜಕಾರಣದಲ್ಲಿ ಹೊಸ ಸಂಚಲನಕ್ಕೂ ಕಾರಣವಾಗಿದೆ.

ಕಾಂಗ್ರೆಸ್ ಪಕ್ಷ ತಮ್ಮನ್ನು ಸರಿಯಾದ ರೀತಿ ನಡೆಸಿಕೊಳ್ಳುತ್ತಿಲ್ಲ. ಎರಡೂವರೆ ದಶಕಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರೂ ಸೂಕ್ತ ಸ್ಥಾನ-ಮಾನ ನೀಡಿಲ್ಲವೆಂಬ ಕಾರಣದಿಂದ ಅಸಮಾಧಾನಗೊಂಡಿರುವ ರಂಜಿತಾ ಅವರು ಅನಿವಾರ್ಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧಾರ ಮಾಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಮಗಳು ರಮ್ಯಾ ಎದುರಿಸಿದ ಮೊದಲ ಚುನಾವಣೆಯಲ್ಲಿ ಜಿಲ್ಲೆಯ ಜನರು ಅಭೂತಪೂರ್ವ ಬೆಂಬಲ ನೀಡಿ ಗೆಲ್ಲಿಸಿದರು. ಕಡಿಮೆ ಅವಧಿಯಲ್ಲೇ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿ ಜನರ ವಿಶ್ವಾಸಕ್ಕೆ ಪಾತ್ರಳಾದಳು. ಈ ಜನರ ಋಣ ನಮ್ಮ ಮೇಲಿದೆ. ಅದನ್ನು ತೀರಿಸಲು ಕಾಂಗ್ರೆಸ್ ಪಕ್ಷದೊಳಗೆ ಅವಕಾಶ ದೊರಕುತ್ತಿಲ್ಲ. ಅದಕ್ಕಾಗಿ ಜನರ ಸೇವೆಯನ್ನೇ ಗುರಿಯಾಗಿಸಿಕೊಂಡು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಕ್ಕೆ ರಂಜಿತಾ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ಪಕ್ಷ ರಮ್ಯಾಗೆ ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಹುದ್ದೆ ನೀಡಿದೆ. ಮಗಳ ವಿಚಾರವಾಗಿ ನನ್ನ ಆಕ್ಷೇಪಣೆಯೂ ಇಲ್ಲ, ತಕರಾರೂ ಇಲ್ಲ. ಮಕ್ಕಳು ದೊಡ್ಡವರಾದ ಮೇಲೆ ಅವರ ಜವಾಬ್ದಾರಿ, ಹೊಣೆಯೇ ಬೇರೆಯಾಗಿರುತ್ತದೆ. ಆದರೆ, ನಾನೂ ಕೂಡ ಕಾಂಗ್ರೆಸ್‍ನಲ್ಲಿ ಕಳೆದ 28 ವರ್ಷದಿಂದ ಸೇವೆ ಸಲ್ಲಿಸಿದ್ದೇನೆ. ಪಕ್ಷದ ಬೆಳವಣಿಗೆಗೆ ದುಡಿಯಲು ಒಂದು ಸಣ್ಣ ಸ್ಥಾನಮಾನಬೇಕು ಎನ್ನುವ ಅಪೇಕ್ಷೆ ನನ್ನದು. ಆದರೆ, ಪಕ್ಷದವರು ಇದುವರೆಗೂ ನನ್ನನ್ನು ಗುರುತಿಸಿಲ್ಲ. ಇನ್ನೂ ಎಷ್ಟು ದಿನ ಅಂತ ಕಾಯುವುದು ಎಂಬುದು ಅವರ ಮನದಾಳದ ನೋವಾಗಿದೆ ಎಂದು ತಿಳಿದುಬಂದಿದೆ.

ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಅಂಬರೀಶ್ ಸ್ಪರ್ಧಿಸಿದರೆ ಸಂತೋಷ. ಆದರೆ, ಅವರ ವಿರುದ್ಧ ರಂಜಿತಾ ಬಂಡಾಯವಾಗಿ ಸ್ಪರ್ಧೆ ಮಾಡುವುದಿಲ್ಲವಂತೆ. ಇದೇ ಕಾರಣಕ್ಕೆ ಅವರು ಕಾಂಗ್ರೆಸ್ ಟಿಕೆಟ್‍ಗೆ ಅರ್ಜಿಯನ್ನೂ ಹಾಕಿಲ್ಲ. ಪಕ್ಷದಿಂದಲೇ ಹೊರಬಂದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದರಲ್ಲಿ ಯಾವ ತಪ್ಪೂ ಇಲ್ಲವೆಂಬುದು ರಂಜಿತಾ ಅವರ ಮನೋಭಾವ. ಕಾಂಗ್ರೆಸ್ ಅಥವಾ ಅಂಬರೀಶ್ ಅವರನ್ನು ಟೀಕಿಸುವ ಗೋಜಿಗೆ ಹೋಗದೆ ರಮ್ಯಾ ಜಿಲ್ಲೆಗೆ ನೀಡಿರುವ ಕೊಡುಗೆಯನ್ನೇ ಶ್ರೀರಕ್ಷೆಯನ್ನಾಗಿಸಿಕೊಂಡು ಮತದಾರರ ಬಳಿಗೆ ಹೋಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಮಂಡ್ಯ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸುವ ಕುರಿತಂತೆ ರಂಜಿತಾ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಈ ವಿಷಯವನ್ನು ರಮ್ಯಾ ಜೊತೆಗೂ ಚರ್ಚಿಸಿಲ್ಲ. ಸ್ಪರ್ಧೆ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಲು ನಾನು ಸ್ವತಂತ್ರಳಾಗಿದ್ದೇನೆ. ಈ ವಿಷಯವಾಗಿ ಮುಂದಿನ ವಾರ ಮಂಡ್ಯ ಕ್ಷೇತ್ರಕ್ಕೆ ಆಗಮಿಸಿ ಜನರು, ಅಭಿಮಾನಿಗಳು, ಬೆಂಬಲಿಗರು ಹಾಗೂ ಮುಖಂಡರೊಟ್ಟಿಗೆ ಚರ್ಚಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ನಾನು ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಸಾಕಷ್ಟು ಶ್ರಮಿಸಿದ್ದೇನೆ. ಪಕ್ಷದ ಕೆಲಸಗಳಿಗಾಗಿ ಮನೆಯಿಂದಲೇ ಹಣ ತಂದು ಖರ್ಚು ಮಾಡಿದ್ದೇನೆ. ಕಳೆದ ಬಾರಿ ರಾಜ್ಯದ ಅನೇಕ ಕ್ಷೇತ್ರಗಳಿಗೆ ಹೋಗಿ ಸ್ವಂತ ದುಡ್ಡು ಹಾಕಿಕೊಂಡು ಪ್ರಚಾರ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೇವೆ. ಚುನಾವಣೆಗೆ ನಾನು ಹಣ ಕೊಡಿ ಅಂತ ಇದುವರೆಗೂ ಕಾಂಗ್ರೆಸ್ ನಾಯಕರನ್ನು ಕೇಳಿಲ್ಲ. ವಾಸ್ತವ ಹೀಗಿದ್ದರೂ ಕಾಂಗ್ರೆಸ್‍ನವರೇ ನಮ್ಮ ಕಾಲೆಳೆಯುತ್ತಾರೆ. ಮಂಡ್ಯ ಜಿಲ್ಲೆಗೆ ಹೋಗಲೂ ಬಿಡುವುದಿಲ್ಲ. ಜನಸಂಪರ್ಕದಲ್ಲಿರುವುದನ್ನೂ ಅವರು ಸಹಿಸುವುದಿಲ್ಲ. ನಮ್ಮ ಪಕ್ಷ ಅಧಿಕಾರದಲ್ಲಿದ್ದರೂ ನನಗೆ ಪಕ್ಷದ ಒಂದು ಸಣ್ಣ ಹುದ್ದೆಯನ್ನೂ ಕೊಡಲಿಲ್ಲ. ಇದು ತಮಗೆ ನೋವು-ನಿರಾಶೆ ತಂದಿದೆ ಎಂದು ರಂಜಿತಾ ಅವರು ತಮ್ಮ ಆಪ್ತರ ಬಳಿ ಮನದಾಳದ ನೋವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಆಲೋಚಿಸುತ್ತಿರುವುದು ಸತ್ಯ. ಈ ವಿಷಯವಾಗಿ ಜನಾಭಿಪ್ರಾಯ ಸಂಗ್ರಹಿಸಲು ಮುಂದಿನ ವಾರ ಮಂಡ್ಯ ಕ್ಷೇತ್ರಕ್ಕೆ ಬರುತ್ತಿದ್ದೇನೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ವಿಚಾರವಾಗಿ ನಿರ್ಧಾರ ಕೈಗೊಳ್ಳಲು ನಾನು ಸ್ವತಂತ್ರಳು. ನನಗೆ ಹಣ ಮಾಡುವ ಆಸೆ ಇಲ್ಲ. ಅಧಿಕಾರದ ಹಂಬಲವೂ ಇಲ್ಲ. ಪಕ್ಷದೊಳಗೆ ದುಡಿಯುವ ಯಾವುದಾದರೊಂದು ಸ್ಥಾನ ಕೊಟ್ಟಿದ್ದರೂ ನನಗೆ ಸಂತೋಷವಾಗುತ್ತಿತ್ತು. ಎರಡೂವರೆ ದಶಕಗಳ ಕಾಲ ಸಾಮಾನ್ಯ ಕಾರ್ಯಕರ್ತೆಯಾಗಿ ಪಕ್ಷಕ್ಕೆ ದುಡಿದರೂ ಯಾವುದೇ ಸ್ಥಾನ ಕೊಡಲಿಲ್ಲ. ನನ್ನ ಮಗಳಿಗೆ ಉನ್ನತ ಹುದ್ದೆ ಕೊಟ್ಟಿರುವ ಪಕ್ಷಕ್ಕೆ ನಾನು ಚಿರಋಣಿ. ನನ್ನ ಶ್ರಮ, ಪಕ್ಷ ನಿಷ್ಠೆ ಗುರುತಿಸಿ ಸೇವೆ ಮಾಡಲು ಪಕ್ಷದ ಹುದ್ದೆ ನೀಡಿದ್ದರೆ ಸಂತಸವಾಗುತ್ತಿತ್ತು. ಆದರೆ, ಪಕ್ಷದ ನಾಯಕರು ನನ್ನನ್ನು ಗುರುತಿಸಲೇ ಇಲ್ಲ. ಇದರಿಂದ ಬೇಸರಗೊಂಡಿರುವ ನಾನು ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಇಚ್ಚಿಸಿದ್ದೇನೆ. ಅಂತಿಮ ನಿರ್ಧಾರ ಕೈಗೊಳ್ಳಲು ಸಮಯಕ್ಕಾಗಿ ಕಾಯುತ್ತಿರುವೆ ಎಂದಿದ್ದಾರೆ ರಂಜಿತಾ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English